ಮೈಸೂರು: ಹೊಳೆನರಸೀಪುರದಿಂದ ಮಂಗಳೂರು ಜಂಕ್ಷನ್‌ಗೆ ಹೋಗುವ ರೈಲು (ಸಂಖ್ಯೆ 16585) ಹತ್ತಿದ್ದ ಅಭಿಷೇಕ್ ಎಂಬ ಪ್ರಯಾಣಿಕನಿಗೆ ದಾರಿಯ ಮಧ್ಯೆ ಎದುರಾಗಿದ್ದು ದೊಡ್ಡ ಆಘಾತ. ಬರ್ತ್ ಪಕ್ಕದಲ್ಲೇ ಇಟ್ಟಿದ್ದ ಬ್ಯಾಗ್ ನೋಡನೋಡುತ್ತಿದ್ದಂತೆ ಮಾಯವಾಗಿತ್ತು! ಕೇವಲ ಬಟ್ಟೆಬರೆ ಇದ್ದಿದ್ದರೆ ಅಷ್ಟೊಂದು ಆತಂಕವಿರುತ್ತಿರಲಿಲ್ಲವೇನೋ, ಆದರೆ ಆ ಬ್ಯಾಗ್‌ನಲ್ಲಿ ಬೆವರು ಸುರಿಸಿ ದುಡಿದು ಕೊಂಡಿದ್ದ ಸುಮಾರು ₹80,000 ಮೌಲ್ಯದ ಲೆನೊವೊ ಲ್ಯಾಪ್‌ಟಾಪ್, ಬಂಗಾರದ ಸರ, ಕೈಗಡಿಯಾರ ಹಾಗೂ ಮಹತ್ವದ ಗುರುತಿನ ಚೀಟಿಗಳಿದ್ದವು. ಹೊಳೆನರಸೀಪುರ ದಾಟಿದ ಮೇಲೆ ಎಲ್ಲಿ ಕಳುವಾಯಿತೋ ತಿಳಿಯದೆ ಕಂಗಾಲಾದ ಅವರು, ಕೊನೆಗೆ ನಂಬಿಕೆಯಿಟ್ಟು 'ರೈಲ್‌ಮದದ್' ಆ್ಯಪ್ ಮೂಲಕ ದೂರು ದಾಖಲಿಸಿದರು.
ಬೆಳಗಾವಿ–ಮೈಸೂರು ರೈಲಿನಲ್ಲಿ ಖದೀಮನ ಮುಖಭಾವ ನೋಡಿ ಹಿಡಿದ ಟಿಟಿಇ!
ಕಳವು ನಡೆದ ರೈಲೇ ಬೇರೆ, ಕಳ್ಳ ಹತ್ತಿದ್ದು ಮತ್ತೊಂದು ರೈಲು! ಬೆಳಗಾವಿ–ಮೈಸೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 17302) ರೈಲಿನಲ್ಲಿ ಟಿಕೆಟ್ ತಪಾಸಣೆ ನಡೆಸುತ್ತಿದ್ದ ಟಿಟಿಇ ಚಂದ್ರ ನಾಯಕ್ ಅವರಿಗೆ ವ್ಯಕ್ತಿಯೊಬ್ಬನ ನಡವಳಿಕೆ, ಆತಂಕದ ಕಣ್ಣೋಟ ಗಾಢ ಅನುಮಾನ ಹುಟ್ಟಿಸಿತು. ಯಾವುದೇ ಗಡಿಬಿಡಿ ಮಾಡದೆ ಜಾಣ್ಮೆಯಿಂದ ವಿಚಾರಿಸಿದಾಗ ಆತನ ಬಣ್ಣ ಬಯಲಾಯಿತು. ತಕ್ಷಣವೇ ಆತನನ್ನು ಕೆ.ಆರ್. ನಗರದ ಆರ್‌ಪಿಎಫ್ (ರೈಲ್ವೆ ರಕ್ಷಣಾ ಪಡೆ) ಸುಪರ್ದಿಗೆ ಒಪ್ಪಿಸಿದರು.
ನಿಜ ಒಪ್ಪಿಕೊಂಡ ಕಳ್ಳ; ವಾರಸುದಾರನ ಮುಖದಲ್ಲಿ ಮೂಡಿದ ನಿರಾಳತೆ
ಆರ್‌ಪಿಎಫ್ ಸಿಬ್ಬಂದಿ ವಿಚಾರಣೆ ನಡೆಸಿದಾಗ ಆರೋಪಿ ಬಸವರಾಜ, ಹೊಳೆನರಸೀಪುರ ಮತ್ತು ಹಾಸನ ನಡುವೆ ತಾನು ಆ ಲ್ಯಾಪ್‌ಟಾಪ್ ಬ್ಯಾಗನ್ನು ಹೊತ್ತೊಯ್ದಿರುವುದಾಗಿ ತಪ್ಪೊಪ್ಪಿಕೊಂಡ. ಕಳ್ಳನನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಕೆ.ಆರ್. ನಗರ ರೈಲ್ವೆ ಪೊಲೀಸರಿಗೆ (ಜಿಆರ್‌ಪಿ) ಒಪ್ಪಿಸಲಾಯಿತು.
ಇತ್ತ ತಮ್ಮ ಬೆಲೆಬಾಳುವ ಸಾಮಗ್ರಿಗಳು ಸಿಗುವ ಭರವಸೆಯನ್ನೇ ಕಳೆದುಕೊಂಡಿದ್ದ ಅಭಿಷೇಕ್ ಅವರಿಗೆ, ಎಲ್ಲಾ ದಾಖಲೆಗಳ ಪರಿಶೀಲನೆಯ ನಂತರ ಕಳೆದುಹೋದ ಬಂಗಾರದ ಸರ, ಲ್ಯಾಪ್‌ಟಾಪ್ ಸೇರಿದಂತೆ ಪ್ರತಿಯೊಂದು ವಸ್ತುವನ್ನು ಮರಳಿ ನೀಡಲಾಯಿತು. ಕಳೆದುಹೋದ ವಸ್ತುಗಳು ಸುರಕ್ಷಿತವಾಗಿ ಕೈಸೇರಿದಾಗ ಆ ಯುವಕನ ಕಣ್ಣಲ್ಲಿ ಕಂಡ ಕೃತಜ್ಞತೆಯ ಭಾವ ಬೆಲೆಕಟ್ಟಲಾಗದ್ದು.
ತಮ್ಮ ಸೂಕ್ಷ್ಮ ಅವಲೋಕನ ಮತ್ತು ಸಮಯಪ್ರಜ್ಞೆಯಿಂದ ಅಮೂಲ್ಯ ವಸ್ತುಗಳನ್ನು ಪತ್ತೆಹಚ್ಚಿ ಇಲಾಖೆಯ ಗೌರವ ಹೆಚ್ಚಿಸಿದ ಟಿಟಿಇ ಚಂದ್ರ ನಾಯಕ್ ಅವರ ಕಾರ್ಯವೈಖರಿಯನ್ನು ನೈಋತ್ಯ ರೈಲ್ವೆ ಮುಕ್ತಕಂಠದಿಂದ ಶ್ಲಾಘಿಸಿದೆ. ಪ್ರಯಾಣಿಕರು ತಮ್ಮ ಸಾಮಗ್ರಿಗಳ ಬಗ್ಗೆ ಸದಾ ಎಚ್ಚರದಿಂದಿರಬೇಕು ಹಾಗೂ ಸಮಸ್ಯೆ ಎದುರಾದಾಗ ತಕ್ಷಣವೇ 'ರೈಲ್‌ಮದದ್' (139) ಸಹಾಯವಾಣಿಯನ್ನು ಸಂಪರ್ಕಿಸಬೇಕು ಎಂದು ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಮನವಿ ಮಾಡಿದ್ದಾರೆ.