ಬೆಂಗಳೂರು: ವಿಚಾರಣೆ ಹಂತದಲ್ಲಿರುವ ಪ್ರಕರಣದ ಸಾಕ್ಷಿ ಹೇಳಿಕೆ ವಿಡಿಯೋ ಅಪ್‌ಲೋಡ್ ಮಾಡಿರುವುದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್ ಹಾಗೂ ಫೇಸ್‌ಬುಕ್ ಸೇರಿದಂತೆ ವಿವಿಧ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಗೆ ಬೆಂಗಳೂರಿನ 59ನೇ ಸೆಷನ್ಸ್ ಕೋರ್ಟ್ ಇದೀಗ ನೋಟಿಸ್ ಜಾರಿ ಮಾಡಿದೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರದೋಷ ಸಾಕ್ಷಿ ಹೇಳಿಕೆ ವಿಡಿಯೋ ಅಪ್ಲೋಡ್ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಕರಣವೊಂದಕ್ಕೆ ಸಂಬಂಧಿಸಿ ನೇರವಾಗಿ ನ್ಯಾಯಾಲಯದಿಂದಲೇ ಸೋಶಿಯಲ್ ಮೀಡಿಯಾ ಸಂಸ್ಥೆಗಳಿಗೆ ಈ ರೀತಿ ನೋಟಿಸ್ ಹೊರಡಿಸಿರುವುದು ಇದೇ ಮೊದಲ ಬಾರಿಯಾಗಿದೆ. ಕೋರ್ಟ್‌ನಿಂದ ಬಿಗಿ ನೋಟಿಸ್ ತಲುಪಿದ ಬೆನ್ನಲ್ಲೇ ಜಾಲತಾಣಗಳಲ್ಲಿದ್ದ ಎಲ್ಲಾ ವಿಡಿಯೋಗಳನ್ನು ಪ್ರಸ್ತುತ ಡಿಲೀಟ್ ಮಾಡಲಾಗಿದೆ.
ಅಲ್ಲದೆ, ನ್ಯಾಯಾಲಯದ ಲೈವ್ ನಡಾವಳಿಗಳನ್ನು (Live Proceedings) ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವುದು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಈ ರೀತಿ ನಿಯಮ ಉಲ್ಲಂಘಿಸಿ ವಿಡಿಯೋ ಅಪ್‌ಲೋಡ್ ಮಾಡುವವರ ವಿರುದ್ಧ ನ್ಯಾಯಾಂಗ ನಿಂದನೆ (Contempt of Court) ಕೇಸ್ ದಾಖಲಿಸುವಂತೆ ಪೊಲೀಸರಿಗೆ ನ್ಯಾಯಾಲಯ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.