ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆಯಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲು ಹಾಗೂ ಸರ್ಕಾರಿ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸಮ್ಮತಿ ದೊರೆತಿದ್ದು, ಸಾರ್ವಜನಿಕರಿಗೆ ಶೀಘ್ರದಲ್ಲೇ ಬೆಲೆ ಏರಿಕೆಯ ಹೊರೆ ಬೀಳಲಿದೆ.
ಹಾಲು ಉತ್ಪಾದಕರ ಒಕ್ಕೂಟದ ಮನವಿ ಹಾಗೂ ಮುಖ್ಯಮಂತ್ರಿಗಳ ವರದಿಯನ್ನು ಆಧರಿಸಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂಪಾಯಿ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಇದರೊಂದಿಗೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ಬಸ್ ಪ್ರಯಾಣ ದರ ಏರಿಕೆಗೆ ಪಟ್ಟು ಹಿಡಿದಿದ್ದು, ಈ ವಿಷಯ ಕೂಡ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆಗೆ ಬಂದಿದೆ. ಸಾರಿಗೆ ದರ ಏರಿಕೆಯ ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲಾಗಿದೆ.
ಆದರೆ, ಪ್ರಸ್ತುತ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ದರ ಏರಿಕೆ ನಿರ್ಧಾರವನ್ನು ತಕ್ಷಣಕ್ಕೆ ಜಾರಿಗೆ ತರಲು ಸಾಧ್ಯವಾಗಿಲ್ಲ. ಅಕ್ಟೋಬರ್ 27ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ನಂದಿನಿ ಹಾಲು ಮತ್ತು ಬಸ್ ಟಿಕೆಟ್ ದರ ಏರಿಕೆ ಅಧಿಕೃತವಾಗಿ ಜಾರಿಗೆ ಬರುವ ನಿರೀಕ್ಷೆಯಿದೆ. ದಸರಾ ಮತ್ತು ದೀಪಾವಳಿ ಹಬ್ಬಗಳ ನಡುವಿನ ಅವಧಿಯಲ್ಲಿ ಈ ದರ ಏರಿಕೆಯು ಸಾರ್ವಜನಿಕರಿಗೆ ದೊಡ್ಡ ಮಟ್ಟದ ಆರ್ಥಿಕ ಶಾಕ್ ನೀಡುವ ಸಾಧ್ಯತೆಯಿದೆ.