ಚಿಕ್ಕಬಳ್ಳಾಪುರ: ಸಮಾಜದಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಿಸುವಂತಹ ತಾರತಮ್ಯದ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ. ಮುಂದಿನ ಜನ್ಮ ಎಂಬುದು ಒಂದಿದ್ದರೆ ನಾನು ದಲಿತನಾಗಿ, ದಲಿತರ ಮನೆಯಲ್ಲಿಯೇ ಹುಟ್ಟುತ್ತೇನೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ. ಶೋಷಣೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ತಮ್ಮ ಸ್ಪಷ್ಟ ನಿಲುವು ಹಾಗೂ ಸಂಕಲ್ಪ ಎಂದು ಅವರು ಪ್ರತಿಪಾದಿಸಿದ್ದಾರೆ.
ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರೇ ತಮ್ಮ ದೇವರು ಹಾಗೂ ಸರ್ವಸ್ವ ಎಂದಿರುವ ಶಾಸಕರು, ಅವರ ಆದರ್ಶಗಳನ್ನು ಪಾಲಿಸುತ್ತಾ ದಲಿತರು ಮತ್ತು ಹಿಂದುಳಿದ ಸಮುದಾಯಗಳ ಪರವಾಗಿ ಸದಾ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ. ಬೇರೆಯವರಿಗೆ ಮುಂದಿನ ಚುನಾವಣೆಯಷ್ಟೇ ಮುಖ್ಯವಾಗಿರಬಹುದು, ಆದರೆ ತಮಗೆ ಮುಂದಿನ ಪೀಳಿಗೆಯ ಭವಿಷ್ಯ ಮುಖ್ಯ ಎಂದು ತಿಳಿಸಿರುವ ಅವರು, ಮುಂದಿನ ಜನ್ಮದಲ್ಲೂ ದಲಿತನಾಗಿಯೇ ಹುಟ್ಟಿ ಶೋಷಿತರ ಹಕ್ಕುಗಳಿಗಾಗಿ ಹೋರಾಡುವುದಾಗಿ ಹೇಳಿದ್ದಾರೆ.