ಬೆಂಗಳೂರು: ಪ್ರಸಿದ್ಧ ಕವಯತ್ರಿ ಗೊರೂರು ಪಂಕಜ ಅವರು 2026ನೇ ಸಾಲಿನ ಪ್ರತಿಷ್ಠಿತ 'ನಾಡೋಜ ಕೈಯಾರ ಕಿಞ್ಞಣ್ಣ ರೈ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.
ಕಾಸರಗೋಡಿನ ಕನ್ನಡ ಭವನ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ ರಾವ್ ಬೇಕಲ್ ಹಾಗೂ ಸಂಸ್ಥೆಯ ಕಾರ್ಯದರ್ಶಿ ವಸಂತ ಕೆರೆಮನೆ ಅವರು ಈ ಕುರಿತು ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಸಾಹಿತ್ಯ ಸೇವೆಗೆ ಸಂದ ಗೌರವ
ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ ವಿಶಿಷ್ಟ ಕಾವ್ಯ ಹಾಗೂ ಬರಹಗಳ ಮೂಲಕ ಗುರುತಿಸಿಕೊಂಡಿರುವ ಗೊರೂರು ಪಂಕಜ ಅವರಿಗೆ ಈಗಾಗಲೇ ಪ್ರತಿಷ್ಠಿತ ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಅಪ್ಪ ಸಾಹಿತ್ಯ ಪ್ರಶಸ್ತಿ, ಬಿ.ಎಂ.ಶ್ರೀ. ಕಾವ್ಯ ಪುರಸ್ಕಾರ ಹಾಗೂ ರಾಜೀವ್ ಗಾಂಧಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪುರಸ್ಕಾರಗಳು ಸಂದಿವೆ. ಇದೀಗ ಗಡಿನಾಡಿನ ಚೇತನ ನಾಡೋಜ ಕೈಯಾರ ಕಿಞ್ಞಣ್ಣ ರೈ ಅವರ ಹೆಸರಿನ ರಾಷ್ಟ್ರೀಯ ಗೌರವವು ಇವರ ಮುಡಿಗೇರಿದೆ.
ಅಕ್ಟೋಬರ್ 18 ರಂದು ಪ್ರಶಸ್ತಿ ಪ್ರದಾನ
ಕಾಸರಗೋಡಿನಲ್ಲಿ ಇದೇ ಅಕ್ಟೋಬರ್ 18 ರಂದು ಅದ್ಧೂರಿಯಾಗಿ ಆಯೋಜಿಸಲಾಗುವ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ’ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಗೊರೂರು ಪಂಕಜ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಗುವುದು ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದ್ದಾರೆ.