ಬೆಂಗಳೂರು: ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಲು ಪ್ರಾಮಾಣಿಕತೆ ಮತ್ತು ವಿನಯತೆ ಅತ್ಯಂತ ಮುಖ್ಯವಾಗಿದ್ದು, ಉತ್ತಮ ನಡವಳಿಕೆಯು ಮಾಧ್ಯಮ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಲು ನೆರವಾಗುತ್ತದೆ ಎಂದು ಹಿರಿಯ ನಟ ಎಸ್. ದೊಡ್ಡಣ್ಣ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗವು ಆಯೋಜಿಸಿದ್ದ ಎರಡು ವಾರಗಳ ಅಭಿಶಿಕ್ಷಣ (ಓರಿಯಂಟೇಷನ್) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ತಮ್ಮ ಚಲನಚಿತ್ರ ರಂಗದ ಆರಂಭಿಕ ದಿನಗಳನ್ನು ಮೆಲುಕು ಹಾಕಿದ ಅವರು, ಕನ್ನಡ ಚಿತ್ರರಂಗದ ಮೇರು ನಟರೊಂದಿಗೆ ಕೆಲಸ ಮಾಡಿದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಡಿಜಿಟಲ್ ಯುಗದಲ್ಲೂ ಗಟ್ಟಿಯಾದ ಪತ್ರಕರ್ತರಿಗೆ ಮನ್ನಣೆ: ದಿನೇಶ್ ಅಮೀನ್ ಮಟ್ಟು
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ, ಪತ್ರಿಕೋದ್ಯಮವನ್ನು ಕೇವಲ ಉದ್ಯೋಗವನ್ನಾಗಿ ನೋಡದೆ, ಆಳವಾದ ಆಸಕ್ತಿ ಮತ್ತು ಬದ್ಧತೆ ಬೆಳೆಸಿಕೊಂಡಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು. ಇಂದಿನ ತಂತ್ರಜ್ಞಾನ ಹಾಗೂ ಡಿಜಿಟಲ್ ಮಾಧ್ಯಮದ ಯುಗದಲ್ಲಿ ಯುವ ಪತ್ರಕರ್ತರಿಗೆ ಅಪಾರ ಅವಕಾಶಗಳಿವೆ. ಗಟ್ಟಿಯಾದ ನಿಲುವು ಮತ್ತು ಸತ್ಯನಿಷ್ಠೆಯ ವರದಿಗಾರಿಕೆಗೆ ಇಂದಿಗೂ ಸಮಾಜದಲ್ಲಿ ಗೌರವವಿದೆ. ಓದುಗರು ಹಾಗೂ ಪ್ರೇಕ್ಷಕರ ನಿರೀಕ್ಷೆಗಳನ್ನು ಅರ್ಥೈಸಿಕೊಂಡು ಕೆಲಸ ಮಾಡಿದರೆ ಮಾಧ್ಯಮ ರಂಗದಲ್ಲಿ ಅತ್ಯುತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಕರೆ ನೀಡಿದರು.
ಚಲನಚಿತ್ರ ಶಿಕ್ಷಣದ ಸದುಪಯೋಗಕ್ಕೆ ಅಶೋಕ್ ಕಶ್ಯಪ್ ಕರೆ
ಗೌರವ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಮಾತನಾಡಿ, ಈ ಹಿಂದೆ ಚಲನಚಿತ್ರ ನಿರ್ಮಾಣ ಹಾಗೂ ಛಾಯಾಗ್ರಹಣಕ್ಕೆ ಸಂಬಂಧಿಸಿದಂತೆ ವೃತ್ತಿಪರ ಮತ್ತು ಔಪಚಾರಿಕ ತರಬೇತಿ ಪಡೆಯಲು ಹೆಚ್ಚಿನ ಸೌಲಭ್ಯಗಳಿರಲಿಲ್ಲ. ಆದರೆ ಇಂದಿನ ಯುವಪೀಳಿಗೆಗೆ ಸಿನಿಮಾ ನಿರ್ಮಾಣ ಕಲೆಯನ್ನು ಅಧಿಕೃತವಾಗಿ ಕಲಿಯಲು ವಿಶ್ವವಿದ್ಯಾಲಯಗಳಲ್ಲಿ ಉತ್ತಮ ಅವಕಾಶಗಳಿವೆ. ವಿದ್ಯಾರ್ಥಿಗಳು ಇಂತಹ ಪಠ್ಯ ಹಾಗೂ ಪ್ರಾಯೋಗಿಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯುನ್ಮಾನ ಮಾಧ್ಯಮ ವಿಭಾಗದ ಸಂಯೋಜಕಿ ಪ್ರೊ. ವಾಹಿನಿ ವಹಿಸಿದ್ದರು. ವೇದಿಕೆಯಲ್ಲಿ ಪ್ರೊ. ರಾಜೇಶ್ವರಿ ಆರ್., ವಿವಿಧ ಸ್ನಾತಕೋತ್ತರ ವಿಭಾಗಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.