ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಜಿಮ್ ಒಂದರ ಮೊದಲ ವರ್ಷದ ವಾರ್ಷಿಕೋತ್ಸವ (ಆನಿವರ್ಸರಿ) ಸಂಭ್ರಮಾಚರಣೆ ವೇಳೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ತೀವ್ರವಾಗಿ ಗಾಯಗೊಂಡಿದ್ದ 25 ವರ್ಷದ ಜಿಮ್ ಟ್ರೈನರ್ ನಂದನ್ ಚಿಕಿತ್ಸೆ ಫಲಕಾರಿಯಾಗದೆ ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅಕ್ಟೋಬರ್ 3ರಂದು ಶನಿವಾರ ರಾತ್ರಿ ಜಿಮ್ ಕಾರ್ಯಕ್ರಮ ಮುಗಿದ ಬಳಿಕ ಅಪಾರ್ಟ್‌ಮೆಂಟ್ ಒಂದರ ಫ್ಲಾಟ್‌ನಲ್ಲಿ ಸಿಬ್ಬಂದಿ ಹಾಗೂ ಪರಿಚಿತರ ನಡುವೆ ಉಂಟಾದ ಸಣ್ಣ ಜಗಳವೇ ಈ ದುರಂತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ ನಂದನ್ ಸಾವಿನ ಹಿನ್ನೆಲೆಯ ರಹಸ್ಯ ಬಯಲಾಗಿದೆ. ಜಿಮ್ ಆನಿವರ್ಸರಿ ಪಾರ್ಟಿಯ ಸಮಯದಲ್ಲಿ ನಂದನ್, ವಿಶ್ವನಾಥ್ ಎಂಬಾತನನ್ನು "ಶಿಷ್ಯ" ಎಂದು ಕರೆದಿದ್ದ ಎನ್ನಲಾಗಿದೆ. ಈ ವೇಳೆ "ನನ್ನನ್ನು ಹಾಗೆ ಕರೆಯಬೇಡ" ಎಂದು ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದ್ದು, ಇಬ್ಬರ ನಡುವೆ ಸಣ್ಣ ಮಟ್ಟಿಗೆ ಶುರುವಾದ ಮಾತಿನ ಚಕಮಕಿ ಬಳಿಕ ಗಲಾಟೆಗೆ ತಿರುಗಿದೆ. ಫ್ಲಾಟ್‌ನ ವಾಶ್‌ರೂಮ್‌ನಲ್ಲಿ ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು, ಈ ಗಲಭೆಯ ಮಧ್ಯೆ ಸಿಕ್ಕ ಗಾಜಿನ ವಸ್ತುವಿನ ಚೂರಿನಿಂದ ನಂದನ್ ತಲೆಗೆ ಬಲವಾಗಿ ಹೊಡೆಯಲಾಗಿದೆ. ಪರಿಣಾಮವಾಗಿ ನಂದನ್ ತಲೆಯಿಂದ ತೀವ್ರ ರಕ್ತಸ್ರಾವ ಸಂಭವಿಸಿದೆ.
ಕೂಡಲೇ ಗಾಯಾಳು ನಂದನ್‌ನನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾರೆ. ಈ ಸಾವಿನ ಬಗ್ಗೆ ನಂದನ್ ಅವರ ತಾಯಿ ಮಂಜುಳಾ ಅವರು ತೀವ್ರ ಅನುಮಾನ ವ್ಯಕ್ತಪಡಿಸಿದ್ದು, ಮಗನ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ ಎಂದು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.