ಬೆಂಗಳೂರು: ಉನ್ನತ ವ್ಯಾಸಂಗದಲ್ಲಿರುವ ವಿದ್ಯಾರ್ಥಿಗಳು ಅಪಘಾತಕ್ಕೆ ಒಳಗಾದಾಗ ಅವರ ಭವಿಷ್ಯದ ಗಳಿಕೆಯ ಮೇಲಾಗುವ ಧಕ್ಕೆಯನ್ನು ಪರಿಗಣಿಸುವುದು ಅತ್ಯಗತ್ಯ. ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಸಂಭಾವ್ಯ ಮಾಸಿಕ ಆದಾಯವನ್ನು ಲೆಕ್ಕಹಾಕಿ ಸೂಕ್ತ ಅಪಘಾತ ಪರಿಹಾರವನ್ನು ನಿಗದಿಪಡಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು 2011ರ ನವೆಂಬರ್ 26 ರಂದು ಖಾಸಗಿ ಶಾಲೆಯೊಂದರ ಬಸ್‌ನಲ್ಲಿ ಶೈಕ್ಷಣಿಕ ಪ್ರವಾಸ ಹೊರಟಿದ್ದರು. ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡ್ ಬಳಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ (ಡಿವೈಡರ್) ಡಿಕ್ಕಿ ಹೊಡೆದ ಪರಿಣಾಮ ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣವು (MACT), ಬಸ್‌ಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಾತ್ರ ಸಂಚರಿಸಲು ಪರ್ಮಿಟ್ ಇತ್ತು. ಆದರೆ, ಅದನ್ನು ಮಡಿಕೇರಿ ಪ್ರವಾಸಕ್ಕಾಗಿ ಬಾಡಿಗೆಗೆ ನೀಡುವ ಮೂಲಕ ಪರ್ಮಿಟ್ ನಿಯಮ ಉಲ್ಲಂಘಿಸಲಾಗಿದೆ ಎಂದು ಹೇಳಿತ್ತು. ಹೀಗಾಗಿ ವಿಮಾ ಸಂಸ್ಥೆಯನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸಿ, 2015ರಲ್ಲಿ ನೀಡಿದ್ದ ಆದೇಶದಲ್ಲಿ ಗಾಯಾಳುಗಳಿಗೆ ಪರಿಹಾರ ಪಾವತಿಸುವಂತೆ ಶಾಲಾ ಆಡಳಿತ ಮಂಡಳಿಗೆ ಸೂಚಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಶಾಲಾ ಮಂಡಳಿ ಹಾಗೂ ಪರಿಹಾರ ಮೊತ್ತ ಹೆಚ್ಚಿಸುವಂತೆ ಸಂತ್ರಸ್ತ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ವಿ. ಹೊಸಮನಿ ಅವರಿದ್ದ ಏಕಸದಸ್ಯ ಪೀಠ, ಅಪಘಾತ ಸಂಭವಿಸಿದ್ದು ಬೆಂಗಳೂರು ನಗರ ವ್ಯಾಪ್ತಿಯಲ್ಲಿಯೇ ಆಗಿರುವುದರಿಂದ ಭೌಗೋಳಿಕ ಗಡಿ ಉಲ್ಲಂಘನೆಯ ಪ್ರಶ್ನೆಯೇ ಏಳುವುದಿಲ್ಲ ಎಂದು ಸ್ಪಷ್ಟಪಡಿಸಿತು. ಅಲ್ಲದೆ, ಇದೇ ಅಪಘಾತದ ಇತರ ಸಂತ್ರಸ್ತರ ಪ್ರಕರಣಗಳಲ್ಲಿ ವಿಮಾ ಸಂಸ್ಥೆಯು ಲೋಕ್ ಅದಾಲತ್‌ನಲ್ಲಿ ಪರಿಹಾರ ನೀಡಲು ಒಪ್ಪಿಕೊಂಡಿರುವುದನ್ನು ಉಲ್ಲೇಖಿಸಿದ ಪೀಠವು, ಒಂದೇ ಅಪಘಾತ ಪ್ರಕರಣದಲ್ಲಿ ವಿಭಿನ್ನ ನಿಲುವು ತಳೆಯಲು ಸಾಧ್ಯವಿಲ್ಲ ಎಂದು ಆದೇಶಿಸಿ ಪರಿಹಾರ ಪಾವತಿಸುವ ಹೊಣೆಗಾರಿಕೆಯನ್ನು ವಿಮಾ ಕಂಪನಿಗೆ ವರ್ಗಾಯಿಸಿತು.
ಅಪಘಾತದಲ್ಲಿ ಬೆನ್ನುಮೂಳೆ ಮತ್ತು ನರಮಂಡಲದ ಗಂಭೀರ ಗಾಯಕ್ಕೆ ಒಳಗಾಗಿದ್ದ ಕುಮಾರಿ ದೇಬಿನಾ ಸನಾಸಮ್ ಅವರಿಗೆ ನ್ಯಾಯಮಂಡಳಿ ನಿಗದಿಪಡಿಸಿದ್ದ 9.25 ಲಕ್ಷ ರೂ. ಪರಿಹಾರವನ್ನು 13.5 ಲಕ್ಷ ರೂ.ಗೆ ಹಾಗೂ ಕೈಗೆ ತೀವ್ರ ಗಾಯಗೊಂಡಿದ್ದ ಎಂ. ಇಮ್ರಾನ್ ಅವರಿಗೆ ನೀಡಲಾಗಿದ್ದ 3 ಲಕ್ಷ ರೂ. ಪರಿಹಾರವನ್ನು 4.28 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಇದೇ ವೇಳೆ, ಸಂತ್ರಸ್ತರು ವೈದ್ಯಕೀಯ ವಿಮೆ (ಮೆಡಿಕ್ರೈಮ್) ಮೂಲಕ ಆಸ್ಪತ್ರೆಯ ವೆಚ್ಚವನ್ನು ಮರುಪಾವತಿ ಪಡೆದುಕೊಂಡಿದ್ದಾರೆ ಎಂಬ ಕಾರಣಕ್ಕೆ ಮೋಟಾರು ಅಪಘಾತ ಪರಿಹಾರ ಮೊತ್ತದಲ್ಲಿ ಕಡಿತ ಮಾಡುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.