LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾಗರ ನಗರಸಭೆಯಲ್ಲಿ 'ದಲ್ಲಾಳಿ'ಗಳದ್ದೇ ಕಾರುಬಾರು: ಸಾಗರ ಬಿಜೆಪಿ ಮುಖಂಡ ಕೆ.ಎಸ್.ಪ್ರಶಾಂತ್ ಗಂಭೀರ ಆರೋಪ

ಸಾಗರ: ನಗರಸಭೆಯ ಆಡಳಿತ ಸಂಪೂರ್ಣವಾಗಿ ಕುಸಿದಿದ್ದು, ಕಮಿಷನ್ ಮತ್ತು ದಲ್ಲಾಳಿಗಳ ಹಾವಳಿಯಿಲ್ಲದೆ ಸಾರ್ವಜನಿಕರ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಬಿಜೆಪಿ ಮುಖಂಡ ಕೆ.ಎಸ್. ಪ್ರಶಾಂತ್ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆಯ ದುರಾಡಳಿತವನ್ನು ಖಂಡಿಸಿ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ನೇತೃತ್ವದಲ್ಲಿ ನಗರಸಭೆ ಕಚೇರಿ ಮುಂಭಾಗ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಲ್ಪನೆಯಿಲ್ಲದ ನಾಯಕತ್ವದಿಂದ ಆಡಳಿತ ದುಸ್ಥಿತಿ

ಅಭಿವೃದ್ಧಿಯ ದೂರದೃಷ್ಟಿ ಮತ್ತು ಸ್ವಚ್ಛತೆಯ ಕಲ್ಪನೆ ಇರುವವರು ಶಾಸಕರಾದರೆ ನಗರ ಹೇಗೆ ಪರಿವರ್ತನೆಯಾಗುತ್ತದೆ ಎಂಬುದನ್ನು ಹರತಾಳು ಹಾಲಪ್ಪ ಅವರು ತಮ್ಮ ಅಧಿಕಾರಾವಧಿಯಲ್ಲಿ ಮಾಡಿ ತೋರಿಸಿದ್ದರು. ಆದರೆ ಯಾವುದೇ ಕಲ್ಪನೆಯಿಲ್ಲದ ವ್ಯಕ್ತಿಯ ಕೈಗೆ ಆಡಳಿತ ಸಿಕ್ಕರೆ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಕಳೆದ ಮೂರೂವರೆ ವರ್ಷಗಳಲ್ಲಿ ಸಾಗರದ ಜನರು ಕಣ್ಣಾರೆ ಕಂಡು ಅನುಭವಿಸುತ್ತಿದ್ದಾರೆ. ನಗರದ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆಯಿಲ್ಲದ ಕಾರಣ ಇಡೀ ಆಡಳಿತ ವ್ಯವಸ್ಥೆ ಹಳಿ ತಪ್ಪಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇ-ಸ್ವತ್ತಿಗೆ ದರ ನಿಗದಿ ಮಾಡಿ ಬೋರ್ಡ್ ಹಾಕಿ

ನಗರಸಭೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಮಧ್ಯವರ್ತಿಗಳಿಲ್ಲದೆ ಜನಸಾಮಾನ್ಯರ ಕಡತಗಳು ವಿಲೇವಾರಿಯಾಗುತ್ತಿಲ್ಲ. ನನ್ನದೇ ಸ್ವಂತ ಇ-ಸ್ವತ್ತು ಮಾಡಿಸಿಕೊಳ್ಳಲು ಕಳೆದ ಎಂಟು ತಿಂಗಳುಗಳಿಂದ ನಗರಸಭೆಗೆ ಅಲೆಯುತ್ತಿದ್ದೇನೆ. ನಗರಸಭೆಯವರು ಶಾಸಕರ ಫೋಟೋ ಹಾಕಿಕೊಳ್ಳುವುದನ್ನು ಬಿಟ್ಟು, ಇ-ಸ್ವತ್ತಿಗೆ ಎಷ್ಟು ಹಣ ನೀಡಬೇಕು ಎಂಬ ದರಪಟ್ಟಿಯನ್ನು ಪ್ರವೇಶದ್ವಾರದಲ್ಲೇ ಹಾಕಿಬಿಡಲಿ. ಹಣವಿದ್ದವರು ಆ ಮೊತ್ತವನ್ನು ನೀಡಿ ಕೆಲಸ ಮಾಡಿಸಿಕೊಳ್ಳುತ್ತಾರೆ, ಇಲ್ಲದವರು ಸುಮ್ಮನೆ ಮನೆಗೆ ವಾಪಸ್ ಹೋಗುತ್ತಾರೆ. ಪ್ರತಿಯೊಂದು ಕಡತಕ್ಕೂ ಬ್ರೋಕರೇಜ್ ಇಲ್ಲದೆ ಕೆಲಸವೇ ಆಗದಂತಹ ಲಜ್ಜೆಗೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಡಳಿತ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡರು.

‘ಗುದ್ದಲಿ ಗೋಪಾಲ’ ಈಗ ‘ಟೇಪ್ ಕಟ್ ಗೋಪಾಲ’

ಹಿಂದೆ ಶಾಸಕರನ್ನು ‘ಗುದ್ದಲಿ ಗೋಪಾಲ’ ಎಂದು ಜನ ಕರೆಯುತ್ತಿದ್ದರು. ಆದರೆ ಈಗ ಗುದ್ದಲಿ ಪೂಜೆ ಮಾಡುವುದನ್ನು ಬಿಟ್ಟು, ಹಾಲಪ್ಪನವರ ಅವಧಿಯಲ್ಲಿ ಮಂಜೂರಾಗಿ ಆರಂಭವಾಗಿದ್ದ ಕಾಮಗಾರಿಗಳ ಬಳಿ ಹೋಗಿ ಕೇವಲ ಟೇಪ್ ಕತ್ತರಿಸುವುದನ್ನೇ ಶಾಸಕರು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಕಳೆದ ಮೂರೂವರೆ ವರ್ಷಗಳಿಂದ ಕೇವಲ ಟೇಪ್ ಕಟ್ ಮಾಡುವ ಕೆಲಸವನ್ನಷ್ಟೇ ಅವರು ಮಾಡುತ್ತಿದ್ದಾರೆ ಹೊರತು ಸ್ವಂತ ಪರಿಶ್ರಮದಿಂದ ಹೊಸ ಯೋಜನೆಗಳನ್ನು ತರಲು ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದರು.

ಕ್ಷೇತ್ರದಲ್ಲೆಲ್ಲಾ ರಿಯಲ್ ಎಸ್ಟೇಟ್ ದಂಧೆ

ಶಾಸಕರಿಗೆ ಜನರ ಸಮಸ್ಯೆಗಳನ್ನು ಪರಿಹರಿಸುವುದಕ್ಕಿಂತ ಹೆಚ್ಚಾಗಿ ಭೂವ್ಯವಹಾರ ಮತ್ತು ರಿಯಲ್ ಎಸ್ಟೇಟ್ ದಂಧೆ ಮಾಡುವುದೇ ಮುಖ್ಯ ಕೆಲಸವಾಗಿದೆ. ಸಾಗರದಲ್ಲಿ ಸಣ್ಣಪುಟ್ಟ ಭೂವ್ಯವಹಾರ ಮಾಡುವವರೂ ಕೂಡ ಶಾಸಕರ ಅನುಮತಿ ಪಡೆಯದೇ ಒಂದು ಇಂಚು ಜಾಗ ಮಾರಾಟ ಮಾಡಲು ಅಥವಾ ಖರೀದಿಸಲು ಸಾಧ್ಯವಾಗದ ದುಸ್ಥಿತಿ ನಿರ್ಮಾಣವಾಗಿದೆ. ಸಾಗರದ ಇತಿಹಾಸದಲ್ಲೇ ಇಂತಹ ಕೆಟ್ಟ ವಾತಾವರಣ ಎಂದೂ ಇರಲಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಸ್ವಂತ ಊರಿನ ರಸ್ತೆ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ

ನೂರಾರು ಕೋಟಿ ರೂಪಾಯಿಗಳ ಅನುದಾನ ತಂದಿದ್ದೇವೆ ಎಂದು ಕಿವಿಗೆ ಹೂ ಇಡುವ ಮಾತುಗಳನ್ನಾಡುವ ಶಾಸಕರು, ಮೊದಲು ತಾವು ಹುಟ್ಟಿ ಬೆಳೆದ ಸ್ವಂತ ಊರಾದ ಬೇಳೂರಿನ ರಸ್ತೆಯನ್ನು ಸರಿಪಡಿಸಲಿ. ಸ್ವತಃ ತಾವೇ ಓಡಾಡುವ ತಮ್ಮೂರಿನ ರಸ್ತೆಯನ್ನೇ ಅಭಿವೃದ್ಧಿಪಡಿಸಲು ಯೋಗ್ಯತೆಯಿಲ್ಲದವರು ಇಡೀ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಮೊದಲು ಆ ರಸ್ತೆಯನ್ನು ಸರಿಪಡಿಸಿ ನಂತರ ಅಭಿವೃದ್ಧಿಯ ಬಗ್ಗೆ ಗಂಟಲು ಹರಿದುಕೊಳ್ಳಲಿ ಎಂದು ಸವಾಲು ಹಾಕಿದರು.

ನಗರಸಭೆ ಆವರಣವೇ ಗಬ್ಬು: ಸಾಗರ ಸ್ವಚ್ಛತೆ ಎಲ್ಲಿಂದ ಸಾಧ್ಯ?

ಹಾಲಪ್ಪನವರ ಅವಧಿಯಲ್ಲಿ ಸಾಗರ ನಗರದ ಪ್ರವೇಶದ್ವಾರದಲ್ಲೇ ಸುಂದರವಾದ ಕೆರೆ ಹಾಗೂ ಮುಂಭಾಗದಲ್ಲಿ ಸ್ವಾಗತಿಸುವ ರಾಷ್ಟ್ರಧ್ವಜವನ್ನು ನಿರ್ಮಿಸುವ ದೂರದೃಷ್ಟಿಯ ಕಲ್ಪನೆಯಿತ್ತು. ಆದರೆ ಇಂದು ನಗರಸಭೆಯ ಕಚೇರಿಯ ಆವರಣವನ್ನೇ ಸ್ವಚ್ಛವಾಗಿಟ್ಟುಕೊಳ್ಳಲು ಸಾಧ್ಯವಾಗದ ಸಿಬ್ಬಂದಿ ಮತ್ತು ಅಧಿಕಾರಿಗಳು ಇಡೀ ಸಾಗರ ನಗರವನ್ನು ಹೇಗೆ ಸ್ವಚ್ಛವಾಗಿಡಲು ಸಾಧ್ಯ ಎಂದು ಪ್ರಶ್ನಿಸಿದರು. ಪ್ರಸ್ತುತ ಶಾಸಕರ ಇಂತಹ ದುರಾಡಳಿತ, ಕಮಿಷನ್ ದಂಧೆ ಹಾಗೂ ಭ್ರಷ್ಟಾಚಾರಕ್ಕೆ ಮುಂಬರುವ ದಿನಗಳಲ್ಲಿ ಕ್ಷೇತ್ರದ ಪ್ರಜ್ಞಾವಂತ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು...

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!