ಸಾಗರ: ಶಾಸಕರ ಭರವಸೆಗಳೆಲ್ಲ ಸುಳ್ಳು ಎಂಬುದಾಗಿ ದಾಖಲೆ ಸಹಿತ ವಾಗ್ಧಾಳಿ ನಡೆಸಿದ ಮಾಜಿ ಸಚಿವ ಹರತಾಳು ಹಾಲಪ್ಪ ಅವರು, ಸಿಡಿಸಿ ಹಣ ದುರ್ಬಳಕೆ ಬಗ್ಗೆಯೂ ಕಿಡಿಕಾರಿದರು. ಇದಲ್ಲದೇ ರಾಷ್ಟ್ರಧ್ವಜಕ್ಕೆ ಅಪಮಾನ, ಕೆರೆ ನಿರ್ಲಕ್ಷ್ಯ, ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ 70 ಕೋಟಿ ತಂದಿದ್ದೆಲ್ಲಿ? ಎಂಬುದಾಗಿಯೂ ಗುಡುಗಿದರು.
ನಗರದ ಸಮಗ್ರ ಅಭಿವೃದ್ಧಿ ಕಾಮಗಾರಿಗಳಲ್ಲಿ ಅವ್ಯವಹಾರ ಹಾಗೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿ ಸಾಗರ ನಗರಸಭೆ ಆವರಣದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಧರಣಿ ಪ್ರತಿಭಟನೆಯಲ್ಲಿ ಮಾಜಿ ಸಚಿವ ಹಾಗೂ ಮಾಜಿ ಶಾಸಕ ಹರತಾಳು ಹಾಲಪ್ಪ ಅವರು ಹಾಲಿ ಶಾಸಕರು ಹಾಗೂ ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳ (DC) ವಿರುದ್ಧ ವಾಗ್ದಾಳಿ ನಡೆಸಿದರು.
ಸುಳ್ಳು ಭರವಸೆಗಳು ಮತ್ತು ಅನುದಾನದ ಲೆಕ್ಕ ಕೇಳಿದ ಹಾಲಪ್ಪ
ಧರಣಿಯನ್ನುದ್ದೇಶಿಸಿ ಮಾತನಾಡಿದ ಹಾಲಪ್ಪ, "ಸ್ಥಳೀಯ ಶಾಸಕರು ಯಾವುದೇ ಕೆಲಸಗಳನ್ನು ಮಾಡುವುದಿಲ್ಲ, ಕೇವಲ ಸುಳ್ಳು ಹೇಳುತ್ತಾರೆ. ಸಾಗರ ಆಸ್ಪತ್ರೆ ಮೇಲ್ದರ್ಜೆಗೇರಿಸಲು 70 ಕೋಟಿ ರೂ. ತಂದಿದ್ದೇನೆ ಹಾಗೂ 250 ಕೋಟಿ ರೂ. ವೆಚ್ಚದಲ್ಲಿ 24 ಗಂಟೆ ಕುಡಿಯುವ ನೀರಿನ ಯೋಜನೆ ತರುತ್ತೇನೆ ಎಂದಿದ್ದರು. ಆದರೆ ಇಂದಿನವರೆಗೂ ಆ 70 ಕೋಟಿ ರೂ. ಸಾಗರಕ್ಕೆ ಬಂದಿಲ್ಲ, ಇತ್ತ 250 ಕೋಟಿ ರೂ. ನೀರಾವರಿ ಯೋಜನೆಯೂ ಬಂದಿಲ್ಲ. ಆಸ್ಪತ್ರೆಯಲ್ಲಿ ಯಾವುದೇ ಮಹತ್ವದ ಕೆಲಸ ನಡೆದಿಲ್ಲ. ತಾವು ಒಂದು ಸುಳ್ಳನ್ನೂ ಹೇಳಲ್ಲ ಎನ್ನುವ ಶಾಸಕರು ಈವರೆಗೆ ಸತ್ಯ ಹೇಳಿದ್ದಾರಾ ಎಂಬುದನ್ನು ಬಹಿರಂಗಪಡಿಸಬೇಕು" ಎಂದು ಸವಾಲು ಹಾಕಿದರು.
ಸಿಡಿಸಿ (CDC) ಅನುದಾನ ದುರ್ಬಳಕೆ ಆರೋಪ
ಇಂದಿರಾಗಾಂಧಿ ಕಾಲೇಜಿನ ಸಿಡಿಸಿ (ಕಾಲೇಜು ಅಭಿವೃದ್ಧಿ ಸಮಿತಿ) ಅನುದಾನ ದುರುಪಯೋಗವಾಗಿದೆ ಎಂದು ಆರೋಪಿಸಿದ ಅವರು, "ಕಾಗೋಡು ತಿಮ್ಮಪ್ಪನವರು ಆರಂಭಿಸಿದ ಈ ಕಾಲೇಜಿಗೆ ನಾನು ಶಾಸಕನಾಗಿದ್ದಾಗ 5 ಕೋಟಿ ರೂ. ವೆಚ್ಚದಲ್ಲಿ ಲೈಬ್ರರಿ ಕಟ್ಟಡ ನಿರ್ಮಿಸಿಕೊಟ್ಟಿದ್ದೆ. ಆದರೆ ಈಗಿನವರು ಸಿಡಿಸಿ ಸಮಿತಿಯಲ್ಲಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಸಭೆ-ಸಮಾರಂಭದ ನೆಪದಲ್ಲಿ 200 ರಿಂದ 300 ಜನರಿಗೆ ಊಟೋಪಚಾರದ ಹೆಸರಿನಲ್ಲಿ ಬಿಲ್ಲುಗಳನ್ನು ಮಾಡಿಸಿ ಕಾಲೇಜು ಸಮಿತಿಯ ಹಣವನ್ನು ಡ್ರಾ ಮಾಡಿಕೊಳ್ಳಲಾಗಿದೆ. ಮಕ್ಕಳ ಹಣಕ್ಕೆ ಕೈಹಾಕಿರುವುದು ಅಕ್ಷಮ್ಯ ಅಪರಾಧ" ಎಂದು ಕಿಡಿಕಾರಿದರು.
ಗಣಪತಿ ಕೆರೆ ಹಾಗೂ ಉದ್ಯಾನವನದ ನಿರ್ಲಕ್ಷ್ಯಕ್ಕೆ ಡಿಸಿ ನೇರ ಹೊಣೆ
"ಹಿಂದೆ ಗಣಪತಿ ಕೆರೆ ಕಸ, ತ್ಯಾಜ್ಯ ಮತ್ತು ಮಲಮೂತ್ರಗಳಿಂದ ತುಂಬಿ ನಾರುತ್ತಿತ್ತು. ನಾವು ಊರವರ ಸಹಕಾರದೊಂದಿಗೆ ಸ್ವಚ್ಛಗೊಳಿಸಿ, ಉದ್ಯಾನವನ ನಿರ್ಮಿಸಿ, ಕೆರೆ ಹಬ್ಬ, ಕಬಡ್ಡಿ ಪಂದ್ಯಾವಳಿ ಹಾಗೂ ಆಹಾರ ಮೇಳಗಳನ್ನು ಆಯೋಜಿಸುವಂತಹ ಸುಂದರ ಸ್ಥಳವನ್ನಾಗಿ ರೂಪಿಸಿದ್ದೆವು. ಆದರೆ, ಪ್ರಸ್ತುತ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳ ಅವಧಿಯಲ್ಲಿ ಆ ಸ್ಥಳವನ್ನು ಸಂಪೂರ್ಣ ಹಾಳುಗೆಡವಲಾಗಿದೆ. ನಗರಸಭೆಯ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿಗಳೇ ಇದಕ್ಕೆ ನೇರ ಹೊಣೆ" ಎಂದು ಹೇಳಿದರು.
167 ಅಡಿ ಎತ್ತರದ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಹಾರಿಸದ್ದಕ್ಕೆ ಆಕ್ಷೇಪ
"ನಾವು ಶ್ರಮಪಟ್ಟು ಸ್ಥಾಪಿಸಿದ್ದ 167 ಅಡಿ ಎತ್ತರದ ಬೃಹತ್ ಧ್ವಜಸ್ತಂಭದಲ್ಲಿ ಗಾಂಧಿ ಜಯಂತಿಯಂದೂ ಧ್ವಜ ಹಾರಿಸಿಲ್ಲ. ಕಳೆದ ಒಂದೂವರೆ ತಿಂಗಳಿಂದ ಅಲ್ಲಿ ಧ್ವಜ ಹಾರಾಡುತ್ತಿಲ್ಲ. ಯಾವುದೇ ಕಾರಣಕ್ಕೂ ರಾಷ್ಟ್ರಧ್ವಜಕ್ಕೆ ಕೊರತೆಯಾಗದಂತೆ ಮೂರು ಧ್ವಜಗಳು ಸದಾ ಸಿದ್ಧವಿರಬೇಕೆಂದು ನಿರ್ಣಯ ಕೈಗೊಳ್ಳಲಾಗಿತ್ತು. ಧ್ವಜಸ್ತಂಭದ ಕಸ್ಟೋಡಿಯನ್ ಆಗಿರುವ ಅಧಿಕಾರಿಗಳು ಧ್ವಜವನ್ನು ಯಾಕೆ ಕೆಳಗಿಳಿಸಿದ್ದಾರೆ? ರಾಷ್ಟ್ರಧ್ವಜಕ್ಕೆ ಗೌರವ ನೀಡದಿರುವುದು ಸರಿಯೇ?" ಎಂದು ಪ್ರಶ್ನಿಸಿದರು.
ಕನ್ಸರ್ವೆನ್ಸಿ ರಸ್ತೆಯಲ್ಲಿ ಬಾವಿ ತೆರೆದಿರುವ ವಿವಾದ
"ರಸ್ತೆಯ ಮಧ್ಯೆ, ಕನ್ಸರ್ವೆನ್ಸಿಯಲ್ಲಿ ನೆಲಮಟ್ಟಕ್ಕೆ ಬಾವಿಯನ್ನು ತೆರೆದು ಕೇವಲ ಗ್ರಿಲ್ ಮುಚ್ಚಲಾಗಿದೆ. ಅಲ್ಲಿ ನಾಯಿಗಳು ಮತ್ತಿತರ ಪ್ರಾಣಿಗಳು ಗಲೀಜು ಮಾಡುತ್ತಿದ್ದು, ಕಲುಷಿತ ನೀರು ಒಳಸೇರುತ್ತಿದೆ. ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಇಂತಹ ಅವ್ಯವಸ್ಥೆಗಳನ್ನು ಕಣ್ಣಾರೆ ಕಂಡು ಕೂಡಲೇ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದರು.
ಹೋರಾಟದ ಎಚ್ಚರಿಕೆ:
"ಕ್ಷೇತ್ರದಲ್ಲಿ ನಡೆದಿರುವ ಹಲವು ಅವ್ಯವಹಾರಗಳು, ಲಾಂಚ್ ಸಮಸ್ಯೆ ಹಾಗೂ ಭ್ರಷ್ಟಾಚಾರದ ವಿರುದ್ಧ ದಾಖಲೆ ಸಮೇತ ಮುಂದಿನ ದಿನಗಳಲ್ಲಿ ಹೋರಾಟ ಮುಂದುವರಿಯಲಿದೆ. ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಿ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು" ಎಂದು ಹರತಾಳು ಹಾಲಪ್ಪ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರತ್ನಾಕರ ಹೊನಗೋಡು, ಮಲ್ಲಿಕಾರ್ಜುನ ಹಕ್ರೆ, ಮಧುರಾ ಶಿವಾನಂದ್, ಗಣೇಶ್ ಪ್ರಸಾದ್, ದೇವೇಂದ್ರಪ್ಪ, ಬಿ.ಸಿ.ಲಕ್ಷ್ಮೀನಾರಾಯಣ, ಮೈತ್ರಿ ಪಾಟೀಲ್, ರಮೇಶ್ ಹಾರೆಗೊಪ್ಪ, ಸಂತೋಷ್ ಶೇಟ್, ಸತೀಶ್ ಕೆ., ಸವಿತಾ ವಾಸು, ವಿನೋದ್ ರಾಜ್, ಅರುಣ ಕುಗ್ವೆ, ಹರೀಶ್ ಮೂಡಳ್ಳಿ, ಆನಂದ್ ಜನ್ನೆಹಕ್ಲು, ವಿ.ಮಹೇಶ್, ಶ್ರೀನಿವಾಸ್ ಮೇಸ್ತ್ರಿ, ಪ್ರೇಮ ಸಿಂಗ್, ಕವಿತಾ ಜಯಣ್ಣ, ಲಿಂಗರಾಜ್ ಬಿ.ಎಚ್., ದೇವೇಂದ್ರಪ್ಪ, ಪ್ರಶಾಂತ್ ಕೆ.ಎಸ್., ಸುವರ್ಣ ಟೀಕಪ್ಪ, ಸುಮಾ ಇನ್ನಿತರರು ಹಾಜರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..