ಸಾಗರ: ಸಾಗರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಇಲ್ಲಿನ ಶಾಸಕರಿಗೆ ಪ್ರಚಾರವೇ ಹೆಚ್ಚು ಆಗಿದೆ. ಸಿಂಗಾಪುರ್ ಮಾಡುತ್ತೇವೆ ಎಂದವರು ಹಾಳುಗೆಡವಿದರು ಎಂಬುದಾಗಿ ಬಿಜೆಪಿ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ರತ್ನಾಕರ್ ಹೊನಗೋಡು ವಾಗ್ದಾಳಿ ನಡೆಸಿದರು.
ಸಾಗರ ನಗರಸಭೆಯ ಆಡಳಿತ ವೈಫಲ್ಯ ಹಾಗೂ ಶಾಸಕರ ನಿಷ್ಕ್ರಿಯತೆಯನ್ನು ಖಂಡಿಸಿ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ನೇತೃತ್ವದಲ್ಲಿ ನಗರಸಭೆ ಎದುರು ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಿಂಗಾಪುರ ಮಾಡುತ್ತೇನೆ ಎಂದವರು ಸಾಗರವನ್ನು ಹಾಳುಗೆಡವಿದರು
ಈ ತಾಲೂಕಿನಲ್ಲಿ ಆಡಳಿತ ಹಿಡಿದವರಿಗೆ ನಾಲ್ಕು ವರ್ಷ ಪೂರೈಸುತ್ತಾ ಬಂದಿದೆ. ಚುನಾವಣೆ ಸಂದರ್ಭದಲ್ಲಿ ಶಾಸಕರು ನೀಡಿದ ಭರವಸೆಗಳನ್ನು ನೋಡಿದರೆ, "ಹಿಂದೆ ನನಗೆ ಅನುಭವ ಇರಲಿಲ್ಲ, ಈ ಬಾರಿ ಗೆಲ್ಲಿಸಿದರೆ ಇಡೀ ಸಾಗರ ಕ್ಷೇತ್ರವನ್ನು ಸಿಂಗಾಪುರ ಮಾಡುತ್ತೇನೆ, ಸುಂದರ ನಗರವನ್ನಾಗಿ ಮಾಡುತ್ತೇನೆ" ಎಂದು ಸಭೆಗಳ ಮೇಲೆ ಸಭೆಗಳನ್ನು ಮಾಡಿದ್ದರು. ಆದರೆ, ಕಾಗೋಡು ತಿಮ್ಮಪ್ಪ ಅಥವಾ ಹರತಾಳು ಹಾಲಪ್ಪ ಅವರ ಅವಧಿಯಲ್ಲಿದ್ದ ಸ್ವಚ್ಛತೆ ಮತ್ತು ಆಡಳಿತದ ನಿಟ್ಟಿನಲ್ಲೇ ಮುಂದುವರಿದಿದ್ದರೆ ಸಾಕಾಗಿತ್ತು. ಹಾಲಪ್ಪನವರು ಮುಂದಾಲೋಚನೆಯಿಂದ ನಗರದ ಸೌಂದರ್ಯಕ್ಕಾಗಿ ಮಾಡಿದ ಪಾರ್ಕ್‌ಗಳು ಹಾಗೂ 365 ದಿನವೂ ಹಾರಾಡುವಂತೆ ಸ್ಥಾಪಿಸಿದ್ದ ರಾಷ್ಟ್ರಧ್ವಜದ ಆವರಣದಲ್ಲಿ ಇಂದು ಕಸ ಹಾಕಿ, ಸ್ವಚ್ಛತೆ ಇಲ್ಲದ ಸಾಗರವನ್ನಾಗಿ ಮಾಡಿದ್ದೇ ಈ ಶಾಸಕರ ಸಾಧನೆ ಎಂದರು..
ಶಾಸಕರಿಗೆ ಸಾರ್ವಜನಿಕರ ಸಮಸ್ಯೆಗಳೇ ಗೊತ್ತಿಲ್ಲ
ಯಾವುದೇ ಆದರೂ ಶ್ರಮಕ್ಕೆ ತಕ್ಕ ಫಲ ಸಿಗಬೇಕು. ಶ್ರಮವಿಲ್ಲದೆ ಸಿಕ್ಕರೆ ಹೀಗೆ ಆಗುತ್ತದೆ. ಇವರಿಗೆ ಯಾವುದೇ ಹೋರಾಟವೂ ಇಲ್ಲ, ಶ್ರಮವೂ ಇಲ್ಲ. ಯಾರೋ ಪಕ್ಷ ಸಂಘಟನೆ ಮಾಡಿಟ್ಟಿದ್ದಕ್ಕೆ ಗೆದ್ದು ಬಂದರು. ಹೋರಾಟಗಳಿಲ್ಲದೆ, ಜನರ ಸಮಸ್ಯೆಗಳೇ ಗೊತ್ತಿಲ್ಲದವರನ್ನು ಆಯ್ಕೆ ಮಾಡಿದ್ದೇ ಮೊದಲ ತಪ್ಪಾಯಿತು. ಕಾಂಗ್ರೆಸ್‌ನವರೇ ಇಂದು "ಇವರನ್ನು ನಂಬಿ ನಾವು ಮಂಗವಾದೆವಲ್ಲ, ನಮ್ಮನ್ನು ಮಂಗನನ್ನಾಗಿ ಮಾಡಿದರಲ್ಲ" ಎಂದು ಹೇಳಿಕೊಳ್ಳುತ್ತಿದ್ದಾರೆ. ಸಾಗರದವರೊಬ್ಬರು ಬರೆದ ಹಾಡಿನಂತೆ ಇವರ ಸ್ಥಿತಿ ಆಗಿದೆ ಎಂದು ಗುಡುಗಿದರು.
ಗ್ರಾಮೀಣ ಭಾಗದ ಸಮಸ್ಯೆಗಳನ್ನು ಆಲಿಸಲು ಶಾಸಕರಿಗೆ ಪುರುಸೊತ್ತಿಲ್ಲ
ಗ್ರಾಮ ಪಂಚಾಯಿತಿಗಳ ಅವಧಿ ಮುಗಿದು ತಿಂಗಳುಗಳು ಕಳೆದಿವೆ, ಜಿ.ಪಂ ಮತ್ತು ತಾ.ಪಂ ಕೂಡ ಇಲ್ಲ. ಗ್ರಾಮೀಣ ಭಾಗದಲ್ಲಿ ರೈತರು ಮತ್ತು ಬಡವರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ ಶಾಸಕರು ಒಂದು ದಿನವೂ ಅಧಿಕಾರಿಗಳ ಸಭೆ ಕರೆದು ಚರ್ಚಿಸಿಲ್ಲ. ಯಾರಾದರೂ ಪ್ರಶ್ನೆ ಮಾಡಿದರೆ ಅಥವಾ ಸ್ಟ್ರೈಕ್ ಮಾಡಿದರೆ, "ಅವರು ಅಧಿಕಾರದಲ್ಲಿದ್ದಾಗ ಮಾಡಬೇಕಿತ್ತಲ್ಲ" ಎಂದು ಸಮರ್ಥಿಸಿಕೊಳ್ಳುತ್ತಾರೆ. ಹಿಂದಿನವರ ಆಡಳಿತ ಬಿಡಿ, ನಿಮ್ಮ ಅವಧಿಯಲ್ಲಿ ನೀವು ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರೆ ಇವರ ಬಳಿ ಉತ್ತರವಿಲ್ಲ ಎಂದರು.
ಗುದ್ದಲಿ ಪೂಜೆ ಮಾಡುವುದೇ ಶಾಸಕರ ಹವ್ಯಾಸ
ಹಿಂದೆ ಹಾಲಪ್ಪನವರು ತಂದಿದ್ದ ಸುಮಾರು 500 ಕೋಟಿ ರೂ.ಗಳ ಕಾಮಗಾರಿಗಳನ್ನು ನಾಲ್ಕು ತಿಂಗಳು ತಡೆಹಿಡಿದು, ನಂತರ ತಮಗೆ ಬರಬೇಕಾದ್ದು ಬಂದ ಮೇಲೆ ಮರು ಗುದ್ದಲಿ ಪೂಜೆ ನೆರವೇರಿಸಿದರು. ಹೊಸದಾಗಿ ಕೆಲಸ ಮಾಡಿದ್ದೇನೂ ಇಲ್ಲ. ಆನಂದಪುರ, ಎಡಹಳ್ಳಿ, ಮುರುಗಾಮಠ, ವಾದಿಮಠಗಳಲ್ಲಿ ಎರಡೆರಡು ಬಾರಿ ಗುದ್ದಲಿ ಪೂಜೆ ಮಾಡಿ ಎರಡು ವರ್ಷ ಕಳೆದರೂ ಕೆಲಸ ಮಾತ್ರ ಆರಂಭವಾಗಿಲ್ಲ. ಗುದ್ದಲಿ ಪೂಜೆ ಮಾಡುವುದೇ ಇವರ ಹವ್ಯಾಸ. ಇತ್ತೀಚೆಗೆ ಆಚಾಪುರದಲ್ಲಿ ಕೆರೆ ಕಾಮಗಾರಿಯ ಗುದ್ದಲಿ ಪೂಜೆಗೆ ಹೋದಾಗ ಕೇವಲ ಮೂರೇ ಜನ ಇದ್ದಿದ್ದರಿಂದ ವಾಪಸ್ ಬಂದಿದ್ದಾರೆ. ಜನರಿಗೆ ಇವರ ಕೇವಲ ಗುದ್ದಲಿ ಪೂಜೆಯ ನಾಟಕ ಅರ್ಥವಾಗಿದೆ ಎಂದು ಹೇಳಿದರು.
ಬಾವಿ ವಿಚಾರದಲ್ಲೂ ಹಸಿ ಸುಳ್ಳು
ನಗರದ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಬಾವಿಯೊಂದನ್ನು ಮುಚ್ಚಿದ್ದರ ಬಗ್ಗೆ ಪ್ರಶ್ನಿಸಿದರೆ, ಮೊದಲು "ನಾಯಿ, ಹಂದಿ ಬೀಳುತ್ತವೆ ಎಂದು ಮುಚ್ಚಿದೆವು" ಎಂದರು. ನಂತರ "ಪಕ್ಕದಲ್ಲಿ ಬಾವಿ ತೋಡಿಸಿದ್ದೇನೆ" ಎಂದರು. ಪ್ರತಿಭಟನೆ ನಡೆದ ಮೇಲೆ "ಆ ಬಾವಿಗೂ ನನಗೂ ಸಂಬಂಧವಿಲ್ಲ, ಮಾತನಾಡಿದರೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ" ಎಂದು ಬೆದರಿಕೆ ಹಾಕುತ್ತಿದ್ದಾರೆ. ಆ ಬಾವಿ ಎಲ್ಲಿದೆ, ಯಾರು ತೋಡಿಸಿದರು, ಯಾರು ಮುಚ್ಚಿದರು ಎಂಬುದು ಇಡೀ ಸಾಗರದ ಜನತೆಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಭೂಮಿ ಹಕ್ಕಿನ ವಿಚಾರದಲ್ಲಿ ಜನರಿಗೆ ಸುಳ್ಳು ಆಶ್ವಾಸನೆ
ಖಾಸಗಿ ಜಮೀನಿನಲ್ಲಿ 10ಕ್ಕೂ ಹೆಚ್ಚು ಮನೆಗಳಿದ್ದವರಿಗೆ 94D ಅಡಿಯಲ್ಲಿ ಹಕ್ಕುಪತ್ರ ನೀಡುವ ಕಾನೂನನ್ನು ಕಾಗೋಡು ತಿಮ್ಮಪ್ಪನವರು ತಂದಿದ್ದರು. ಅದಕ್ಕೆ ಕಾನೂನು ತೊಡಕುಗಳಿದ್ದಿದ್ದರಿಂದ 2022ರ ಕೊನೆಯಲ್ಲಿ ಹಾಲಪ್ಪನವರು ನಿಯಮ ಮಾರ್ಪಾಡು ಮಾಡಿಸಿ ಆದೇಶ ತಂದರು. ಆದರೆ ಅರ್ಜಿ ಸಲ್ಲಿಸಿದವರಿಗೆ ಇಂದಿಗೂ ಕೆಲಸವಾಗಿಲ್ಲ. ಈ ಬಗ್ಗೆ ಜನರು ಪ್ರತಿಭಟಿಸಿದರೆ, ಶಾಸಕರು "ಸುಪ್ರೀಂ ಕೋರ್ಟ್‌ಗೆ ಹೋಗಿ ಹಕ್ಕುಪತ್ರ ಕೊಡಿಸುತ್ತೇನೆ" ಎಂದು ಫಾರೆಸ್ಟ್ ಜಮೀನಿನವರನ್ನು ಕರೆಸಿ ದಾರಿ ತಪ್ಪಿಸುತ್ತಿದ್ದಾರೆ ಎಂದರು.
ಅರಣ್ಯ ಭೂಮಿಯ ವಿಚಾರ ಕಂದಾಯ ಮತ್ತು ಅರಣ್ಯ ಇಲಾಖೆಗಳು ತೀರ್ಮಾನಿಸಬೇಕಾದ್ದು. ಸುಪ್ರೀಂ ಕೋರ್ಟ್‌ಗೆ ಹೋದರೆ ಹಕ್ಕುಪತ್ರ ಸಿಗುತ್ತದೆಯೇ? ಇವರಿಗೆ ಬದ್ಧತೆ ಇದ್ದರೆ ಖಾಸಗಿ ಜಮೀನಿನಲ್ಲಿರುವವರಿಗೆ ಹಾಗೂ ಕೈತಪ್ಪಿ ಅರಣ್ಯವೆಂದು ನಮೂದಾದ ಕಂದಾಯ ಭೂಮಿಯ ಹಕ್ಕನ್ನು ಕೊಡಿಸಲಿ ಎಂದು ಒತ್ತಾಯಿಸಿದರು.
ಎಸಿ ನ್ಯಾಯಾಲಯದ ಮೂಲಕ ಅಕ್ರಮ, ಕಬಳಿಕೆಯ ಹುನ್ನಾರ
ಮುರುಗಾಮಠ, ಆನಂದಪುರ ವ್ಯಾಪ್ತಿಯಲ್ಲಿ ವಾಸವಿಲ್ಲದ ಜಮೀನನ್ನು 2012ರಲ್ಲಿ ಅಂದಿನ ತಹಶೀಲ್ದಾರ್ ವಜಾ ಮಾಡಿದ್ದರು. ಆದರೆ ಇತ್ತೀಚೆಗೆ ಎಸಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ಕೊಟ್ಟು ತಮ್ಮ ಪರವಾಗಿ ಆದೇಶ ಮಾಡಿಸಿಕೊಂಡು ಖಾತೆ ಮಾಡಿಸಿಕೊಂಡಿದ್ದಾರೆ. ಈ ಬೆಲೆಬಾಳುವ ಜಮೀನಿನಲ್ಲಿ ಮುಸ್ಲಿಂ ಸಮುದಾಯದ ಈದ್ಗಾ ಮೈದಾನ, ಕೆಲವರ ಮನೆಗಳು ಹಾಗೂ ಗ್ರಾ.ಪಂ. ಜಾಗವಿದೆ. ಇದನ್ನು ಕಬಳಿಸುವ ಹುನ್ನಾರ ನಡೆದಿದ್ದು, ನ್ಯಾಯ ಕೇಳಲು ಹೋದರೆ ಕೋರ್ಟ್‌ನಲ್ಲಿದೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದರು.
ಯಮಧೈರ್ಯದ ಮಾತು: ಮೂಲ ಬಂಡವಾಳ ಯಾವುದು?
ಗಣಪತಿ ಹಬ್ಬಕ್ಕೆ ಚಂದಾ ಕೊಟ್ಟಿದ್ದನ್ನು ಕೇಳಿದ್ದಕ್ಕೆ "ನನಗೆ ಯಮಧೈರ್ಯ ಇದೆ" ಎಂದು ಶಾಸಕರು ಹೇಳಿಕೊಳ್ಳುತ್ತಾರೆ. ಭ್ರಷ್ಟಾಚಾರ ಮಾಡುವುದರಲ್ಲಿ, ದುಡ್ಡು ಹೊಡೆಯುವುದರಲ್ಲಿ ಹಾಗೂ ಸರ್ಕಾರಿ ಜಮೀನು ಹೊಡೆಯುವುದರಲ್ಲಿ ಇವರಿಗಿರುವ ಯಮಧೈರ್ಯ ರಾಜ್ಯದಲ್ಲಿ ಮತ್ಯಾವ ಶಾಸಕರಿಗೂ ಇಲ್ಲ. ತಾವು ಶಾಸಕರಾಗುವ ಮುನ್ನ "ನನ್ನ ಬಳಿ ಏನೂ ಇಲ್ಲ, ಕಣ್ಣೀರು ಹಾಕಿ ಬೆಂಗಳೂರಿಗೆ ಹೋಗಲ್ಲ" ಎಂದವರು, ಈಗ ಕಾರುಗಳ ಮೇಲೆ ಕಾರು, ಆಸ್ತಿಗಳ ಮೇಲೆ ಆಸ್ತಿ ಮಾಡುತ್ತಿದ್ದಾರೆ. ಈ ಹಣದ ಮೂಲ ಯಾವುದು ಎಂಬುದನ್ನು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.
ಪ್ರಚಾರದ ದಾನಕ್ಕಿಂತ ಬಡವರ ಮನೆಗೆ ಹೋಗಿ ನೆರವಾಗಿ
ದಾರಿಯಲ್ಲಿ ಹೋಗುವ ಅಜ್ಜಿಗೆ 500 ರೂಪಾಯಿ ಕೊಟ್ಟು ವಿಡಿಯೋ ಮಾಡಿ ವಾಟ್ಸಾಪ್, ಫೇಸ್‌ಬುಕ್‌ಗೆ ಬಿಡುವುದಲ್ಲ ದಾನ. ಹಾಲಪ್ಪನವರು ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗದಂತೆ ಲಕ್ಷಾಂತರ ರೂಪಾಯಿ ನೆರವು ನೀಡುತ್ತಾರೆ. ನಿಜವಾದ ಕಾಳಜಿ ಇದ್ದರೆ ಬಡವರ ಮನೆಗೆ ಹೋಗಿ ಸಹಾಯ ಮಾಡಿ, ಸುಮ್ಮನೆ ಓಟಿನ ನಾಟಕಕ್ಕಾಗಿ ಢೋಂಗಿತನ ಪ್ರದರ್ಶಿಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
2028ಕ್ಕೆ ಜನರೇ ಪಾಠ ಕಲಿಸಲಿದ್ದಾರೆ
ಕಾಗೋಡು ತಿಮ್ಮಪ್ಪನವರ ಮೇಲಿನ ಅಭಿಮಾನಕ್ಕೆ ಅಂದು ಜನರು ಮತ ಹಾಕಿದ್ದರು. ಆದರೆ ಇಂದು ಹಳ್ಳಿಹಳ್ಳಿಗಳಲ್ಲಿ ಜನ ಇವರ ವಿರುದ್ಧ ಆಕ್ರೋಶಗೊಂಡಿದ್ದಾರೆ. ಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಹಾಗೂ 2028ರ ವಿಧಾನಸಭಾ ಚುನಾವಣೆಯಲ್ಲಿ ಜನರೇ ಇವರಿಗೆ ತಕ್ಕ ಪಾಠ ಕಲಿಸಿ ಸೋಲಿಸಲಿದ್ದಾರೆ. ಇನ್ನಾದರೂ ಉಳಿದ ಅವಧಿಯಲ್ಲಿ ಇತರರ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ಕ್ಷೇತ್ರಕ್ಕೆ ಒಳ್ಳೆಯ ಕೆಲಸಗಳನ್ನು ಮಾಡಲಿ ಎಂದು ರತ್ನಾಕರ ಹೊನಗೋಡು ಎಚ್ಚರಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು