ಸಾಗರ: ನಗರಸಭೆಯ ಆಡಳಿತ ಸಂಪೂರ್ಣವಾಗಿ ಹದಗೆಟ್ಟಿದ್ದು, ಭ್ರಷ್ಟಾಚಾರ ಹಾಗೂ ಅಕ್ರಮಗಳ ಕೂಪವಾಗಿದೆ ಎಂದು ಬಿಜೆಪಿ ಮುಖಂಡ, ದಿಶಾ ಸಮಿತಿ ಸದಸ್ಯ ಹಾಗೂ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಆರೋಪಿಸಿದ್ದಾರೆ.
ಸಾಗರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಸಮ್ಮುಖದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಸುಂದರೀಕರಣದ ಹೆಸರಿನಲ್ಲಿ ಅವ್ಯವಸ್ಥೆ
ಹರತಾಳು ಹಾಲಪ್ಪ ಅವರು ಶಾಸಕರಾಗಿದ್ದ ಅವಧಿಯಲ್ಲಿ ‘ಸ್ವಚ್ಛ ಸಾಗರ’ ಸಂಕಲ್ಪದೊಂದಿಗೆ ಗಣಪತಿ ಕೆರೆಯ ಮೇಲ್ಭಾಗವನ್ನು ಸ್ವಚ್ಛಗೊಳಿಸಿ, ಪಾರ್ಕ್ ಹಾಗೂ 24 ಗಂಟೆ ಹಾರಾಡುವ ಬೃಹತ್ ಧ್ವಜಕಟ್ಟೆಯನ್ನು ನಿರ್ಮಿಸಿದ್ದರು. ಆದರೆ ಪ್ರಸ್ತುತ ಅಲ್ಲಿ ಧ್ವಜವೂ ಇಲ್ಲ, ಪಾರ್ಕ್ ನಿರ್ವಹಣೆಯೂ ಇಲ್ಲದೆ ಗಬ್ಬೆದ್ದು ಹೋಗಿದೆ. ಸತ್ತ ಪ್ರಾಣಿಗಳನ್ನು ತಂದು ಸುರಿಯುವ ಜಾಗವಾಗಿ ಮಾರ್ಪಟ್ಟಿದ್ದು, ನಗರದ ಅಂದ ಸಂಪೂರ್ಣ ಕೆಟ್ಟುಹೋಗಿದೆ ಎಂದು ಹಕ್ರೆ ಆಕ್ರೋಶ ಹೊರಹಾಕಿದರು.
ಸೇಲ್ ಸರ್ಟಿಫಿಕೇಟ್ ಹಗರಣ ಹಾಗೂ ಅಕ್ರಮ ಆಸ್ತಿಪತ್ರ ಆರೋಪ
ನಗರ ವ್ಯಾಪ್ತಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಕಂದಾಯ ಭೂಮಿಯನ್ನು ನಿಯಮಬಾಹಿರವಾಗಿ ಅಗ್ಗದ ದರದಲ್ಲಿ ಸೇಲ್ ಸರ್ಟಿಫಿಕೇಟ್ ಮಾಡಿಕೊಡಲಾಗಿದೆ ಎಂದು ಆರೋಪಿಸಿದ ಅವರು, ಸಿದ್ದೇಶ್ವರ ಶಾಲೆಯ ಮುಂಭಾಗದ ಸಾರ್ವಜನಿಕ ಶಾಲೆಗೆ ಮೀಸಲಾಗಿದ್ದ ಒಂದೂವರೆ ಎಕರೆ ಜಾಗಕ್ಕೂ ಕೋಟ್ಯಂತರ ಮೌಲ್ಯದ ಸೇಲ್ ಸರ್ಟಿಫಿಕೇಟ್ ನೀಡಲಾಗಿದೆ ಎಂದರು.
ಈ ಹಿಂದೆ 3,125 ಮಂದಿಗೆ ಅಕ್ರಮವಾಗಿ ಹಕ್ಕುಪತ್ರ/ಸೇಲ್ ಸರ್ಟಿಫಿಕೇಟ್ ನೀಡಲು ಯತ್ನಿಸಿದಾಗ, ಅಂದಿನ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯಾಗಿದ್ದ (ಪ್ರಸ್ತುತ ಜಿಲ್ಲಾಧಿಕಾರಿ) ಅಧಿಕಾರಿ ತನಿಖೆಗೆ ಆದೇಶಿಸಿದ್ದರು. ಮೂರು ವರ್ಷ ಕಳೆದರೂ ಆ ತನಿಖೆ ಏಕೆ ಪೂರ್ಣಗೊಂಡಿಲ್ಲ ಮತ್ತು ಆ ತನಿಖೆಯನ್ನು ನಿಲ್ಲಿಸಿದವರು ಯಾರು ಎಂದು ಪ್ರಶ್ನಿಸಿದರು.
ಇಡೀ ಸಾಗರ ನಗರದ ಕಂದಾಯ ಭೂಮಿಯ ಸಮಗ್ರ ಇಲಾಖಾ ಸರ್ವೆ ನಡೆಸಿ ಸತ್ಯಾಸತ್ಯತೆಯನ್ನು ಹೊರತರಬೇಕು ಎಂದು ಆಗ್ರಹಿಸಿದರು.
ಪ್ರಾಮಾಣಿಕ ಅಧಿಕಾರಿಗಳ ಎತ್ತಂಗಡಿ, ಆಡಳಿತ ಯಂತ್ರದ ದುರ್ಬಳಕೆ
ನಗರಸಭೆಗೆ ನಿಯೋಜನೆಗೊಂಡಿದ್ದ ಪ್ರಾಮಾಣಿಕ ಮಹಿಳಾ ಕಂದಾಯ ಅಧಿಕಾರಿ (ಆರ್‌ಒ) ಈ ಅಕ್ರಮಗಳಿಗೆ ಸಹಕರಿಸದ ಕಾರಣ ಅವರನ್ನು ಶಿರಳಕೊಪ್ಪಕ್ಕೆ ನಿಯೋಜನೆ ಮೇಲೆ ಕಳುಹಿಸಿ, ಆಡಳಿತಕ್ಕೆ ಬೇಕಾದ ಒಬ್ಬರೇ ವ್ಯಕ್ತಿಗೆ ಮೂರು ಹುದ್ದೆಗಳ ಪ್ರಭಾರ ನೀಡಲಾಗಿದೆ ಎಂದು ದೂರಿದರು.
ನಗರಸಭೆಯ ಎಇಇ/ಪರಿಸರ ಎಂಜಿನಿಯರ್ ಅವರನ್ನು ಕೇವಲ ಅಟೆಂಡರ್ ಮಟ್ಟಕ್ಕೆ ಇಳಿಸಿ, ಅಕ್ರಮ ಬಿಲ್‌ಗಳಿಗೆ ಸಹಿ ಹಾಕಿಸಿಕೊಳ್ಳಲು ಬಳಸಿಕೊಳ್ಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ನಗರಸಭೆಯಲ್ಲಿ ಜನರ ಖಾತೆ ಬದಲಾವಣೆಯ ನೂರಾರು ಅರ್ಜಿಗಳು ಮತ್ತು ಕಡತಗಳು ಕಾಣೆಯಾಗಿದ್ದು, ಆಡಳಿತವು ಶಾಸಕರ ಕುಟುಂಬದ ಸ್ವಂತ ಆಸ್ತಿಯಂತೆ ನಡೆಯುತ್ತಿದೆ ಎಂದು ಕಿಡಿಕಾರಿದರು.
ಅಭಿವೃದ್ಧಿ ಅನುದಾನದ ಸುಳ್ಳು ಪ್ರಚಾರಕ್ಕೆ ತರಾಟೆ
ಗಣಪತಿ ಪೆಂಡಾಲ್‌ಗಳಿಗೆ ಹಣ ಹಂಚಲು ಎಲ್ಲಿಂದ ಹಣ ಬಂತು ಎಂದು ಪ್ರಶ್ನಿಸಿದ ಹಕ್ರೆ, ಚುನಾವಣೆಯಲ್ಲಿ ಹಣವಿಲ್ಲದೆ ಕಣ್ಣೀರಿಟ್ಟಿದ್ದವರು ಈಗ ಲಕ್ಷಾಂತರ ರೂಪಾಯಿ ಹೇಗೆ ಚೆಲ್ಲುತ್ತಿದ್ದಾರೆ ಎಂದು ಕೇಳಿದರು. ಕುಡಿಯುವ ನೀರಿಗೆ 250 ಕೋಟಿ ರೂ., ಆಸ್ಪತ್ರೆಗೆ 70 ಕೋಟಿ ರೂ. ಅನುದಾನವನ್ನು ‘ನಾನೇ ಬಿಡುಗಡೆ ಮಾಡುತ್ತಿದ್ದೇನೆ’ ಎಂದು ಶಾಸಕರು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ. ಹಣ ಬಿಡುಗಡೆ ಮಾಡುವ ಅಧಿಕಾರ ಇರುವುದು ಸರ್ಕಾರ ಮತ್ತು ಹಣಕಾಸು ಕಾರ್ಯದರ್ಶಿಗೆ ಹೊರತು ಶಾಸಕರಿಗಲ್ಲ. ನಗರದ ಮಾರ್ಕೆಟ್ ರಸ್ತೆ ವಿಸ್ತರಣೆ, ಹೊಸನಗರ ರಸ್ತೆ ಕಾಮಗಾರಿಗಳು ಮಂಜೂರಾಗಿದ್ದು ಹಾಲಪ್ಪ ಅವರ ಅವಧಿಯಲ್ಲೇ ಆಗಿದೆ; ಕೇವಲ ಬೋರ್ಡ್ ಹಾಕಿ ಟೇಪ್ ಕತ್ತರಿಸುವುದು ಇವರ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.
ಕಾಗೋಡು ತಿಮ್ಮಪ್ಪ ಹಾಗೂ ಹರತಾಳು ಹಾಲಪ್ಪ ಅವರಂತಹ ಹಿರಿಯ ಮುಖಂಡರ ಕೊಡುಗೆಯನ್ನು ಹಗುರವಾಗಿ ಮಾತನಾಡುತ್ತಿರುವ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದ ಅವರು, ನಗರಸಭೆಯಲ್ಲಿನ ಎಲ್ಲಾ ಅವ್ಯವಹಾರಗಳು ತನಿಖೆಯಾಗಿ ಜನರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..