ಸಾಗರ: ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಶಾಸಕ ಹರತಾಳು ಹಾಲಪ್ಪ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಕೇವಲ ಪ್ರಚಾರಕ್ಕಾಗಿ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಿದ್ದಾರೆ ಎಂದು ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರತಾಳು ಹಾಲಪ್ಪ ಅವರ ಆರೋಪಗಳಿಗೆ ತಕ್ಕ ಪ್ರತ್ಯುತ್ತರ ನೀಡಿದರು.
‘ನಿಮ್ಮ ಕಾಲದಲ್ಲೂ ಅವರೇ ಅಧಿಕಾರಿಗಳಿರಲಿಲ್ಲವೇ?’
"ಮಾಜಿ ಶಾಸಕ ಹಾಲಪ್ಪ ಅವರು ಪತ್ರಿಕಾಗೋಷ್ಠಿ ನಡೆಸಿ ಸಾಗರ ನಗರ ಕಸಮಯವಾಗಿದೆ, ಪೌರಾಡಳಿತ ಹಾಗೂ ಇಂಜಿನಿಯರ್‌ಗಳು ಸರಿಯಿಲ್ಲ ಎಂದು ಮಾತನಾಡಿದ್ದಾರೆ. ಆದರೆ ಹಾಲಪ್ಪ ಅವರೇ, ನೀವು ಶಾಸಕರಾಗಿದ್ದ ಕಾಲದಲ್ಲೂ ಪೌರಾಯುಕ್ತರಾಗಿ ನಾಗಪ್ಪ ಹಾಗೂ ಅದೇ ಇಂಜಿನಿಯರ್‌ಗಳೇ ಇದ್ದರಲ್ಲವೇ? ಆಗ ನೀವೇನು ಮಾಡಿದ್ದೀರಿ? ಎಂದು ಪ್ರಶ್ನಿಸಿದರು.
ನಮ್ಮ ಶಾಸಕರು ಜನರ ವಿಶ್ವಾಸ ಗಳಿಸಿ ಜನಪರ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. ನಿಮ್ಮಿಂದ ಸರ್ಟಿಫಿಕೇಟ್ ಪಡೆಯುವ ಅಗತ್ಯ ನಮ್ಮ ಶಾಸಕರಿಗಿಲ್ಲ. ಮೂರು ಬಾರಿ ಶಾಸಕರಾಗಿರುವ ಬೇಳೂರು ಗೋಪಾಲಕೃಷ್ಣ ಅವರ ಬಗ್ಗೆ ಬರೀ ಸುಳ್ಳು ಹೇಳುವುದನ್ನೇ ನೀವು ಕಾಯಕ ಮಾಡಿಕೊಂಡಿದ್ದೀರಿ" ಎಂದು ಹರಿಹಾಯ್ದರು.
ಆಸ್ಪತ್ರೆ, ಕುಡಿಯುವ ನೀರಿನ ಕಾಮಗಾರಿ: ಚರ್ಚೆಗೆ ನೇರ ಆಹ್ವಾನ
"ಆಸ್ಪತ್ರೆ ಮತ್ತು ಕುಡಿಯುವ ನೀರಿನ ಯೋಜನೆ ತಂದಿದ್ದು ನಾನೇ ಎಂದು ಹೇಳಿಕೊಳ್ಳುತ್ತಿದ್ದೀರಿ. ಸರ್ಕಾರಗಳು ಬದಲಾದಂತೆ ಅಭಿವೃದ್ಧಿ ಕಾಮಗಾರಿಗಳು (Ongoing works) ಮುಂದಿನ ಸರ್ಕಾರದ ಅವಧಿಯಲ್ಲಿ ಅನುಷ್ಠಾನಕ್ಕೆ ಬರುವುದು ಸಾಮಾನ್ಯ ಪ್ರಕ್ರಿಯೆ. ಇಷ್ಟು ವರ್ಷ ಶಾಸಕರಾಗಿದ್ದ ನಿಮಗೆ ಈ ಸಾಮಾನ್ಯ ಜ್ಞಾನವಿಲ್ಲವೇ? ಎಂದು ಪ್ರಶ್ನಿಸಿದರು.
ನೀವೇ ಎಲ್ಲವನ್ನೂ ಮಾಡಿದ್ದರೆ ಜನರು ನಿಮ್ಮನ್ನು ಸೋಲಿಸಿ ನಮ್ಮ ಶಾಸಕರನ್ನು ಯಾಕೆ ಗೆಲ್ಲಿಸುತ್ತಿದ್ದರು? ತಾಕತ್ತಿದ್ದರೆ ಬನ್ನಿ, ಇವತ್ತೇ ಸರ್ಕಾರಿ ಆಸ್ಪತ್ರೆಗೆ ಹೋಗೋಣ. ಆಸ್ಪತ್ರೆ ಎಷ್ಟು ಸ್ವಚ್ಛವಾಗಿದೆ, ಖಾಸಗಿ ಆಸ್ಪತ್ರೆಗಳಿಗಿಂತ ಅತ್ಯುತ್ತಮವಾಗಿ ತಾಯಿ-ಮಕ್ಕಳ ಆಸ್ಪತ್ರೆ ಹಾಗೂ ಜನರಲ್ ಆಸ್ಪತ್ರೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು ನೀವೇ ಕಣ್ಣಾರೆ ನೋಡಿ. ನಾವು ನಿಮ್ಮೊಂದಿಗೆ ಪರಿಶೀಲನೆಗೆ ಬರಲು ಸಿದ್ಧರಿದ್ದೇವೆ" ಎಂದು ಚಂದ್ರಪ್ಪ ಸವಾಲೆಸೆದರು.
ಬಾವಿ ವಿವಾದಕ್ಕೆ ಸ್ಪಷ್ಟನೆ
ಬಾವಿ ಮುಚ್ಚಿರುವ ಆರೋಪಕ್ಕೆ ಕುರಿತು ಮಾತನಾಡಿದ ಅವರು, "ಹಳೆಯ ಬಾವಿಯ ಬದಲಿಗೆ ಆ ಕಾಲೋನಿಯ ಜನರಿಗೆ ಯಾವುದೇ ತೊಂದರೆಯಾಗದಂತೆ ಅತ್ಯಂತ ವ್ಯವಸ್ಥಿತವಾಗಿ ರಿಂಗ್ ಅಳವಡಿಸಿ, ಮುಚ್ಚಳ ಹಾಕಿ ಮೋಟಾರ್ ಅಳವಡಿಸಿ ಹೊಸ ಬಾವಿಯ ಸೌಲಭ್ಯ ಮಾಡಿಕೊಡಲಾಗಿದೆ. ಸಣ್ಣ ಹುಡುಗರಂತೆ ಹುಚ್ಚುಚ್ಚಾಗಿ ಆಡದೆ, ವಿರೋಧ ಪಕ್ಷವಾಗಿ ಜನಪರ ಕೆಲಸಗಳನ್ನು ಮಾಡಲು ಕಲಿಯಿರಿ. ಕೇವಲ ನಮ್ಮ ಪಕ್ಷ ಮತ್ತು ಶಾಸಕರ ತೇಜೋವಧೆ ಮಾಡುವುದನ್ನು ಮುಂದುವರಿಸಿದರೆ ನಾವು ಸುಮ್ಮನೆ ಕೂರುವುದಿಲ್ಲ, ತಕ್ಕ ಉತ್ತರ ನೀಡಬೇಕಾಗುತ್ತದೆ" ಎಂದು ಎಚ್ಚರಿಸಿದರು.

ಟಾರ್ಗೆಟ್ ಮಾಡಿ ಮಾತನಾಡುವುದನ್ನು ನಿಲ್ಲಿಸಿ: ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಬಾಬು
ಟಾರ್ಗೆಟ್ ಮಾಡಿ ಮಾಜಿ ಶಾಸಕರು ಮಾತನಾಡುತ್ತಿದ್ದಾರೆ. ಇದನ್ನು ಬಿಡಬೇಕು. ಮೂರೂವರೆ ವರ್ಷ ಆಯ್ತು ಗೋಪಾಲಕೃಷ್ಣ ಬೇಳೂರು ಶಾಸಕರಾಗಿ. ಈಗಲೂ ನಾನೇ ಮಾಡಿದ್ದು ಅಂತ ಹೇಳುತ್ತಿರೋದು ಹಾಸ್ಯಾಸ್ಪದ ಆಗಲಿದೆ ಎಂದರು.
ನಗರಸಭೆಯಲ್ಲಿ ಒಂದಷ್ಟು ಬದಲಾವಣೆಯನ್ನು ನಮ್ಮ ಶಾಸಕ ಗೋಪಾಲಕೃಷ್ಣ ಬೇಳೂರು ತಂದಿದ್ದಾರೆ. ಸರಿಯಾಗಿ ಕೆಲಸ ಮಾಡದವರನ್ನು ವರ್ಗಾವಣೆಗೊಳಿಸಿದ್ದಾರೆ. ಆ ಮೂಲಕ ನಗರಸಭೆ ಕೆಲಸಕ್ಕೆ ಚುರುಕು ಮುಟ್ಟಿಸಿದ್ದಾರೆ. ಅಲ್ಲಿ ಏನಾದರೂ ನ್ಯೂನ್ಯತೆ ಇದ್ದರೆ ಹೇಳಿ. ಆಡಳಿತ ಸುಧಾರಣೆಗೆ ಯಾವುದೇ ಸಲಹೆ ನೀಡಿದರೂ ನಾವು ಸ್ವೀಕರಿಸುತ್ತೇವೆ ಎಂದು ತಿಳಿಸಿದರು.
ಈ ವೇಳೆ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಬಿ.ಆರ್ ಜಯಂತ್, ಮಾಜಿ ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಮಾಜಿ ನಗರಸಭೆ ಸದಸ್ಯರಾದಂತ ಮಧು ಮಾಲತಿ, ಸುರೇಶ್ ಬಾಬು, ಮಕ್ಬುಲ್ ಸಾಬ್ ಸೇರಿದಂತೆ ಇತರರೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು...