ಶಿವಮೊಗ್ಗ: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ನಗರದ ಶಾಶ್ವತ ಧ್ವಜಸ್ತಂಭದ ಆವರಣವು ಸಮರ್ಪಕ ನಿರ್ವಹಣೆಯಿಲ್ಲದೆ ಕಸದ ತೊಟ್ಟಿ ಹಾಗೂ ಕೊಳಚೆ ನೀರಿನ ಹೊಂಡವಾಗಿ ಮಾರ್ಪಟ್ಟಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ವಾಗ್ಧಾಳಿ ನಡೆಸಿದ್ದಾರೆ.

ಇಂದು ಸಾಗರ ನಗರದ ಪವಿತ್ರ ಧ್ವಜಸ್ತಂಭ ಸ್ಥಳಕ್ಕೆ ಭೇಟಿ ನೀಡಿ, ಕಸ ವಿಲೇವಾರಿ ಕಂಡು ಆಕ್ರೋಶವನ್ನು ಹೊರಹಾಕಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಆಡಳಿತದ ನಿಷ್ಕ್ರಿಯತೆ, ಸ್ಥಳೀಯ ಶಾಸಕರ ನಿರ್ಲಕ್ಷ್ಯದ ಮನಸ್ಥಿತಿ ಹಾಗೂ ಪೌರಾಯುಕ್ತ ನಾಗಪ್ಪ ಅವರ ಏಕಪಕ್ಷೀಯ ಕಾರ್ಯವೈಖರಿಯಿಂದಾಗಿ ಇಂತಹ ಪವಿತ್ರ ಜಾಗವು ಇಂದು ದುರ್ನಾತ ಬೀರುವಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದರು.

ಐತಿಹಾಸಿಕ ಜಾಗಕ್ಕೆ ನಿರ್ಲಕ್ಷ್ಯದ ಗ್ರಹಣ: ಹಾಲಪ್ಪ ಅಸಮಾಧಾನ
"ನಾನು ಶಾಸಕನಾಗಿದ್ದ ಅವಧಿಯಲ್ಲಿ ಉಪವಿಭಾಗಾಧಿಕಾರಿ ಹಾಗೂ ಡಿವೈಎಸ್ಪಿ ಅವರ ಸಲಹೆಯಂತೆ ಸಾರ್ವಜನಿಕರ ತೆರಿಗೆಯ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಈ ಜಾಗವನ್ನು ಅತ್ಯಂತ ಸುಸಜ್ಜಿತವಾಗಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಈಗ ರಾಷ್ಟ್ರೀಯ ಹಬ್ಬಗಳ ಒಂದೆರಡು ದಿನಗಳನ್ನು ಹೊರತುಪಡಿಸಿದರೆ ಉಳಿದ ದಿನಗಳಲ್ಲಿ ಇಲ್ಲಿ ರಾಷ್ಟ್ರಧ್ವಜವನ್ನೇ ಹಾರಿಸುತ್ತಿಲ್ಲ. ಧ್ವಜಸ್ತಂಭದ ಪಕ್ಕದ ಜಾಗವನ್ನು ಎಪಿಎಂಸಿ ಅನುದಾನ ಬಳಸಿಕೊಂಡು ಸಂತೆ ಮಾರುಕಟ್ಟೆಗಾಗಿ ಸಿದ್ಧಪಡಿಸಲಾಗಿತ್ತು. ಇಲ್ಲಿ ಯಡಿಯೂರಪ್ಪ ಅವರಿಗೆ ಪೌರ ಸನ್ಮಾನ, ಕೆರೆ ಹಬ್ಬ, ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಸಮ್ಮುಖದಲ್ಲಿ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶ, ಆಹಾರ ಮೇಳ, ಪ್ರೊ ಕಬಡ್ಡಿ ಸೇರಿದಂತೆ ಮಹತ್ವದ ಕಾರ್ಯಕ್ರಮಗಳು ನಡೆದಿದ್ದವು. ನನ್ನ ಮಕ್ಕಳ ವಿವಾಹಕ್ಕೂ ಈ ಸ್ಥಳ ಸಾಕ್ಷಿಯಾಗಿತ್ತು. ಆದರೆ ಪ್ರಸ್ತುತ ಶಾಸಕರಿಗೆ ಈ ಪವಿತ್ರ ಸ್ಥಳದ ಬಗ್ಗೆ ಕಿಂಚಿತ್ತೂ ಕಾಳಜಿ ಇದ್ದಂತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.

ಕಸದ ತೊಟ್ಟಿ, ಲಾರಿಗಳ ಪಾರ್ಕಿಂಗ್ ತಾಣವಾದ ಆವರಣ
"ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ (ಸಂಗಳ) ಸಾಗಿಸಬೇಕಾದ ತ್ಯಾಜ್ಯವನ್ನು ತಂದು ಧ್ವಜಸ್ತಂಭದ ಆವರಣದಲ್ಲೇ ಸುರಿಯಲಾಗುತ್ತಿದೆ. ಹೊರಭಾಗದ ಚರಂಡಿ ಕಟ್ಟಿಕೊಂಡಿದ್ದರಿಂದ ಕೊಳಚೆ ನೀರೆಲ್ಲ ಆವರಣದೊಳಗೆ ಹರಿದು ಬಂದು ಎಮ್ಮೆ ತೊಳೆಯುವ ಹೊಂಡದಂತಾಗಿದೆ. ದೊಡ್ಡ ಲಾರಿಗಳು ಹಾಗೂ ಜೆಸಿಬಿ ವಾಹನಗಳನ್ನು ತಂದು ಇಲ್ಲಿ ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದೆ. ನಿರಂತರವಾಗಿ ತ್ರಿವರ್ಣ ಧ್ವಜ ಹಾರಾಡಲು ಬೇಕಾದ ವ್ಯವಸ್ಥೆ ಇದ್ದರೂ ಧ್ವಜ ಹಾರಿಸುತ್ತಿಲ್ಲ. ಸಾರ್ವಜನಿಕರ ತೆರಿಗೆ ಹಣವನ್ನು ಹಾಳುಗೆಡವಿರುವ ಪರಿಯನ್ನು ಜನರು ಪ್ರತ್ಯಕ್ಷವಾಗಿ ನೋಡಬೇಕಿದೆ" ಎಂದು ಹಾಲಪ್ಪ ತರಾಟೆಗೆ ತೆಗೆದುಕೊಂಡರು.

250 ಕೋಟಿ ರೂ. ಕುಡಿಯುವ ನೀರು ಯೋಜನೆ ಘೋಷಣೆ ಜನರ ಕಿವಿಗೆ ಹೂವು: ಶಾಸಕರಿಗೆ ಸವಾಲು
ಇದೇ ಸಂದರ್ಭದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಅಭಿವೃದ್ಧಿ ಹೇಳಿಕೆಗಳ ವಿರುದ್ಧ ಹರಿಹಾಯ್ದ ಅವರು, "ವಿಜಯನಗರದ ಈಜುಕೊಳ ಪುನರಾರಂಭದ ವೇಳೆ ಮಾತನಾಡಿದ ಶಾಸಕ ಬೇಳೂರು, ನಗರದ 31 ವಾರ್ಡ್‌ಗಳ ಮನೆ-ಮನೆಗೆ 24 ಗಂಟೆ ಕುಡಿಯುವ ನೀರು ಪೂರೈಸಲು 250 ಕೋಟಿ ರೂ. ಹಾಗೂ ಆಸ್ಪತ್ರೆ ಅಭಿವೃದ್ಧಿಗೆ 70 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಹಣ ಮಂಜೂರು ಮಾಡಲು ಇವರೇನು ಹಣಕಾಸು ಸಚಿವರೇ ಅಥವಾ ಸರ್ಕಾರದ ಮುಖ್ಯ ಕಾರ್ಯದರ್ಶಿಯೇ? ಕೇವಲ ಸುಳ್ಳು ಭರವಸೆಗಳನ್ನು ನೀಡಿ ಜನರ ಕಿವಿಗೆ ಹೂವು ಇಡುವ ಕೆಲಸ ಮಾಡುತ್ತಿದ್ದಾರೆ. ನಿಜವಾಗಿಯೂ ಆ ಹಣ ಬಿಡುಗಡೆಯಾಗಿದ್ದರೆ ಅದನ್ನು ಸಾರ್ವಜನಿಕರ ಮುಂದೆ ಸಾಬೀತುಪಡಿಸಲಿ. ಮೂರು ಬಾರಿ ಶಾಸಕನಾಗಿದ್ದೇನೆ ಎಂದು ಹೇಳಿಕೊಳ್ಳುವ ಇವರು ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಶಾಸಕ ಬೇಳೂರು ನೀಡಿರುವ ಸುಳ್ಳು ಹೇಳಿಕೆಗಳ ಅಸಲಿಯತ್ತನ್ನು ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಬಯಲಿಗೆಳೆಯುತ್ತೇನೆ" ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸಾಗರ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದೇವೇಂದ್ರಪ್ಪ, ನಗರ ಮಂಡಲದ ಅಧ್ಯಕ್ಷ ಗಣೇಶ್ ಪ್ರಸಾದ್, ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಮಾಜಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಬಿ.ಟಿ. ರವೀಂದ್ರ, ಪ್ರಶಾಂತ್ ಕೆ.ಎಸ್., ಶ್ರೀನಿವಾಸ ಮೇಸ್ತ್ರಿ, ಸವಿತಾ ವಾಸು, ವಿನೋದ್ ರಾಜ್, ಸತೀಶ್ ಕೆ., ಸಂತೋಷ್ ಶೇಟ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.