ಮಂಡ್ಯ: ‘ನಾವಾಯ್ತು, ನಮ್ಮ ಕುಟುಂಬವಾಯ್ತು, ಮುಂದಿನ ಪೀಳಿಗೆಗೆ ಒಂದಿಷ್ಟು ಆಸ್ತಿ-ಪಾಸ್ತಿ ಮಾಡಿಕೊಂಡರೆ ಸಾಕು’ ಎಂಬ ಸ್ವಾರ್ಥದ ನಡುವೆ ಬದುಕುವವರೇ ಹೆಚ್ಚಾಗಿರುವ ಈ ಜಮಾನದಲ್ಲಿ, ನಿಸ್ವಾರ್ಥ ಸೇವೆಯ ಮೂಲಕ ಮಾನವೀಯತೆಯ ಘಮಲು ಪಸರಿಸುವ ಕೆಲವೇ ಕೆಲವು ಹೃದಯಗಳು ಸಮಾಜಕ್ಕೆ ಬೆಳಕಾಗುತ್ತವೆ. ಅಂಥ ಅಪರೂಪದ ಕಾಯಕಕ್ಕೆ ಮಂಡ್ಯ ಜಿಲ್ಲೆಯ ಮದ್ದೂರು ಸಾಕ್ಷಿಯಾಗಿದೆ.
ಹಲವು ದಶಕಗಳಿಂದ ಪ್ರಾಣಿಗಳೂ ವಾಸಿಸಲು ಅಸಾಧ್ಯವಾದಂತಹ ಕಡುಕಷ್ಟದ ಜೋಪಡಿಗಳಲ್ಲಿ ಕಾಲ ನೂಕುತ್ತಿದ್ದ ಇಬ್ಬರು ಅಸಹಾಯಕ ಬಡ ಮಹಿಳೆಯರಿಗೆ ಸ್ವಂತ ಸೂರು ಕಲ್ಪಿಸಿಕೊಡುವ ಮೂಲಕ ‘ನಿಸರ್ಗ ನಗರ ಮತ್ತು ಗ್ರಾಮಾಭಿವೃದ್ಧಿ ಸಂಸ್ಥೆ’ ಅವರ ಬಾಳಿಗೆ ಹೊಸ ಭರವಸೆಯ ಬೆಳಕು ಚೆಲ್ಲಿದೆ.
ಜೋಪಡಿಯಲ್ಲಿದ್ದ ಬದುಕಿಗೆ ಸ್ವಂತ ನಿವೇಶನ, ಸುಸಜ್ಜಿತ ಮನೆ!
ಮದ್ದೂರು ಪಟ್ಟಣದಿಂದ ವೈದ್ಯನಾಥಪುರ ಗ್ರಾಮಕ್ಕೆ ತೆರಳುವ ಮಾರ್ಗಮಧ್ಯೆ ಹಲವು ದಶಕಗಳಿಂದ ಸ್ವಂತ ಸೂರಿಲ್ಲದೆ, ಮಳೆ-ಗಾಳಿಗೆ ನಡುಗುತ್ತಾ ಜೋಪಡಿಗಳಲ್ಲಿ ವಾಸಿಸುತ್ತಿದ್ದ ಲಕ್ಷ್ಮಮ್ಮ ಮತ್ತು ಈರಮ್ಮ ಅವರ ಗೋಳು ಮನಕಲಕುವಂತಿತ್ತು. ಯಾವುದೇ ಮೂಲಸೌಕರ್ಯಗಳಿಲ್ಲದೆ ಬದುಕುತ್ತಿದ್ದ ಈ ಅಸಹಾಯಕ ಹೆಣ್ಣುಮಕ್ಕಳ ಕಣ್ಣೀರನ್ನು ಕಂಡ ನಗರಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹುಲಿಗೆರೆಪುರ ಮಹದೇವು ಅವರ ಮನಸ್ಸು ಮರುಗಿತು.
ತಮ್ಮ ನಿಸರ್ಗ ನಗರ ಮತ್ತು ಗ್ರಾಮಾಭಿವೃದ್ಧಿ ಸಂಸ್ಥೆಯ ‘ನಿರಾಶ್ರಿತರ ನಡೆ-ವಸತಿ ಕಡೆ’ ಎಂಬ ಮಹತ್ವಾಕಾಂಕ್ಷಿ ಯೋಜನೆಯಡಿ, ಸಂಸ್ಥೆಯ ವತಿಯಿಂದಲೇ ಸ್ವಂತ ಸೈಟ್ ಖರೀದಿಸಿ ಸುಸಜ್ಜಿತ ನೂತನ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯ ಸ್ಮರಣೀಯ ಸಂದರ್ಭದಲ್ಲಿ, ಈ ಮನೆಗಳಿಗೆ ‘ಮಹಾಮಾತೆ ರಮಾಬಾಯಿ ಅಂಬೇಡ್ಕರ್ ನಿವಾಸ’ ಎಂದು ನಾಮಕರಣ ಮಾಡುವ ಮೂಲಕ ಸಮಾಜಕ್ಕೇ ಮಾದರಿಯಾದ ಹೆಜ್ಜೆಯಿಟ್ಟಿದ್ದಾರೆ.
ಪದ್ಮಶ್ರೀ ಸೋಮಣ್ಣ ಮೊತ್ತೆಹಾಡಿ ಅವರಿಂದ ಕೀ ಹಸ್ತಾಂತರ: ಕಾಯಕಯೋಗಿಯ ಮೆಚ್ಚುಗೆ
ಈ ಮಹತ್ಕಾರ್ಯಕ್ಕೆ ಮೆರುಗು ನೀಡಿದ್ದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹೆಚ್.ಡಿ. ಕೋಟೆಯ ಕಾಡಂಚಿನ ಹಿರಿಯ ಚೇತನ ಸೋಮಣ್ಣ ಮೊತ್ತೆಹಾಡಿ ಅವರು. ಫಲಾನುಭವಿಗಳಾದ ಲಕ್ಷ್ಮಮ್ಮ ಮತ್ತು ಈರಮ್ಮ ಅವರಿಗೆ ಮನೆಯ ಅಧಿಕೃತ ದಾಖಲಾತಿ ಹಾಗೂ ಬೀಗದ ಕೀಲಿಕೈಯನ್ನು ಹಸ್ತಾಂತರಿಸಿದ ಸೋಮಣ್ಣ, ನಿಸರ್ಗ ಸಂಸ್ಥೆಯ ಸಮಾಜಮುಖಿ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ತಮ್ಮ ಜೀವನದ ಹೋರಾಟದ ಹಾದಿಯನ್ನು ಮೆಲುಕು ಹಾಕಿದ ಸೋಮಣ್ಣ ಮೊತ್ತೆಹಾಡಿ ಅವರು ಭಾವುಕರಾಗಿ ಮಾತನಾಡಿದರು:
"ನಿರಾಶ್ರಿತರಿಗೆ ನೆರಳಿನ ಭಾಗ್ಯ ಕಲ್ಪಿಸುವುದು ಸಮಾಜದ ಅತ್ಯುನ್ನತ ಮಹತ್ಕಾರ್ಯಗಳಲ್ಲಿ ಒಂದು. ಕಾಡಿನ ಮಧ್ಯೆ ಹುಟ್ಟಿ ಬೆಳೆದು, ಕಾಡಂಚಿನ ಜನರ ಪ್ರತಿಯೊಂದು ನೋವು-ಸಂಕಟಗಳನ್ನು ಕಣ್ಣಾರೆ ಕಂಡವನು ನಾನು. ಹೆತ್ತ ತಾಯಿಯ ಆರೈಕೆಗಾಗಿ ಬೇರೆಯವರ ಬಳಿ ಜೀತಕ್ಕಿದ್ದು, ನಂತರ ಅದರಿಂದ ಮುಕ್ತನಾಗಿ ಸಂಘಟಿತ ಹೋರಾಟಗಳ ಮೂಲಕ ಗಿರಿಜನರಿಗಾಗಿ ಬರೋಬ್ಬರಿ 6 ರಿಂದ 7 ಸಾವಿರ ಎಕರೆ ಭೂಮಿಯನ್ನು ಮಂಜೂರು ಮಾಡಿಸಿದ್ದೇನೆ.
ಕಾಡಂಚಿನ ಹಾಡಿಗಳಲ್ಲಿ ಅಂಗನವಾಡಿ ಕೇಂದ್ರಗಳ ಸ್ಥಾಪನೆ ಸೇರಿದಂತೆ ಸಮುದಾಯದ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಿದ್ದೇನೆ. ಇಷ್ಟೇ ಅಲ್ಲದೆ ಫಿಲಿಫೈನ್ಸ್, ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಿಗೂ ಭೇಟಿ ನೀಡಿ ಅಲ್ಲಿನ ಆದಿವಾಸಿಗಳ ಸ್ಥಿತಿಗತಿ ಅಧ್ಯಯನ ಹಾಗೂ ಗಿಡ-ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ನನ್ನ ಕೈಲಾದ ಅಳಿಲು ಸೇವೆ ಸಲ್ಲಿಸಿದ್ದೇನೆ. ಇಷ್ಟೆಲ್ಲಾ ಸಾಧನೆಗಳ ಹೊರತಾಗಿಯೂ, ಇಂದಿಗೂ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಕನಿಷ್ಠ ಒಂದು ಬೈಕ್ ಕೂಡ ಖರೀದಿಸದೆ, ಬಸ್ಸಿನಲ್ಲೇ ಸಂಚರಿಸುತ್ತಾ ನನ್ನ ದೈನಂದಿನ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇನೆ."
ಸರ್ಕಾರ ಮಾಡಲಾಗದ್ದನ್ನು ನಿಸರ್ಗ ಸಂಸ್ಥೆ ಮಾಡಿದೆ: ಕುಮಾರ್ ಕೊಪ್ಪ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕುಮಾರ್ ಕೊಪ್ಪ ಅವರು, "ಹುಲಿಗೆರೆಪುರ ಮಹದೇವು ಅವರು ನಿಸರ್ಗ ಸಂಸ್ಥೆಯ ಮೂಲಕ ಯಾವುದೇ ಸ್ವಾರ್ಥವಿಲ್ಲದೆ ನಿರಾಶ್ರಿತರಿಗೆ ಸೂರು ಒದಗಿಸುತ್ತಿರುವುದು ನಿಜಕ್ಕೂ ಪ್ರಶಂಸನೀಯ. ಬಾಲ್ಯದಲ್ಲಿಯೇ ಜೇನುಕುರುಬ ಜನಾಂಗದ ಭೂಮಿಯ ಹಕ್ಕಿಗಾಗಿ ಹೋರಾಡಿ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪುರಸ್ಕಾರ ಪಡೆದ ಸೋಮಣ್ಣ ಮೊತ್ತೆಹಾಡಿ ಹಾಗೂ ವಿಶ್ವದ ಸುಮಾರು 15 ರಾಷ್ಟ್ರಗಳಲ್ಲಿ ಜಾನಪದ ಕಲಾಸಿರಿಯನ್ನು ಪಸರಿಸಿರುವ ಅಂತರರಾಷ್ಟ್ರೀಯ ಕಲಾವಿದ ಅಮ್ಮ ರಾಮಚಂದ್ರು ಅವರಂಥ ಮಹನೀಯರನ್ನು ಒಂದೇ ವೇದಿಕೆಗೆ ಕರೆತಂದು ಗೌರವಿಸಿರುವುದು ಈ ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿದೆ.

ರಾಜ್ಯ ಸರ್ಕಾರ ಗ್ಯಾರಂಟಿ ಸೇರಿದಂತೆ ಹತ್ತು-ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಎಲ್ಲವನ್ನೂ ಸರ್ಕಾರವೊಂದೇ ಮಾಡಲು ಸಾಧ್ಯವಿಲ್ಲ. ಸರ್ಕಾರಗಳೂ ತಲುಪಲಾಗದ ಕಡೆ ನಿಸರ್ಗ ಗ್ರಾಮಾಭಿವೃದ್ಧಿ ಸಂಸ್ಥೆ ಇಂಥ ಮಹೋನ್ನತ ಕಾರ್ಯ ಮಾಡಿರುವುದು ಅಭಿನಂದನಾರ್ಹ" ಎಂದರು.
ಕಡುಬಡವರ ಸೇವೆಗೆ ಸದಾ ಬದ್ಧ: ಹುಲಿಗೆರೆಪುರ ಮಹದೇವು
ಸಂಸ್ಥೆಯ ಅಧ್ಯಕ್ಷ ಹುಲಿಗೆರೆಪುರ ಮಹದೇವು ಮಾತನಾಡಿ, "ತಾಲೂಕು ವ್ಯಾಪ್ತಿಯಲ್ಲಿ ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ, ಜೋಪಡಿಗಳಲ್ಲಿ ಬದುಕು ಸವೆಸುತ್ತಿರುವ ಕಡುಬಡವರು ಹಾಗೂ ನಿರಾಶ್ರಿತರನ್ನು ಗುರುತಿಸಿ ಸೂರು ಕಲ್ಪಿಸುವುದು ನಮ್ಮ ಸಂಸ್ಥೆಯ ಸಂಕಲ್ಪವಾಗಿದೆ. ದಾನಿಗಳು ಹಾಗೂ ಹಿತೈಷಿಗಳ ಸಹಕಾರದಿಂದ ಈ ಸೇವೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗಲಾಗುವುದು" ಎಂದು ಭರವಸೆ ನೀಡಿದರು.
ಸಾಧಕರ ಸಮಾಗಮ, ಸಾಂಸ್ಕೃತಿಕ ಗಣ್ಯರ ಸಮ್ಮುಖ
ಈ ಅರ್ಥಪೂರ್ಣ ಸಮಾರಂಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಂತರರಾಷ್ಟ್ರೀಯ ಜಾನಪದ ಗಾಯಕ ಅಮ್ಮ ರಾಮಚಂದ್ರು, ಹರಿಹರದ ಹುಚ್ಚಮ್ಮ ದೇವಿ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಚೂರಿನಿಂಗಯ್ಯ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ರಾಜ್ಯ ರೈತ ಕಲ್ಯಾಣ ಸಂಘದ ಮಹಿಳಾ ರಾಜ್ಯಾಧ್ಯಕ್ಷೆ ಉಷಾ ಜಯಶೀಲಾ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನ.ಲಿ. ಕೃಷ್ಣ, ಮಾಜಿ ಸದಸ್ಯೆ ಲಕ್ಷ್ಮೀ ಮಹದೇವು, ವಕೀಲ ಬೋರಯ್ಯ ಸೇರಿದಂತೆ ನಿಸರ್ಗ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಫಲಾನುಭವಿ ಕುಟುಂಬಗಳಿಗೆ ಶುಭ ಹಾರೈಸಿದರು.
ವರದಿ: ಗಿರೀಶ್ ರಾಜ್, ಮಂಡ್ಯ