ಬೆಂಗಳೂರು: ನಟ ದರ್ಶನ್ ಮತ್ತು ಗ್ಯಾಂಗ್ ಭಾಗಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಆರೋಪಿ ಪ್ರದೋಷ್ ನೀಡಿದ್ದ ಗೌಪ್ಯ ಹೇಳಿಕೆಯ ವೀಡಿಯೊವನ್ನು ಸ್ಕ್ರೀನ್ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವರ ವಿರುದ್ಧ 59ನೇ ಸಿಸಿಹೆಚ್ ನ್ಯಾಯಾಲಯವು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ವೀಡಿಯೋ ದುರ್ಬಳಕೆ: ಕೋರ್ಟ್ ಕಠಿಣ ನಿಲುವು
ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದು, ಬಳಿಕ ಮಾಫಿ ಸಾಕ್ಷಿಯಾಗಿ ಬದಲಾಗಿರುವ ಪ್ರದೋಷ್ ಕೋರ್ಟ್‌ಗೆ ನೀಡಿದ್ದ ಹೇಳಿಕೆಯ ದೃಶ್ಯಗಳನ್ನು ಕೆಲವರು ಅಕ್ರಮವಾಗಿ ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡಿದ್ದರು. ಈ ವಿಡಿಯೋ ಕ್ಲಿಪ್‌ಗಳನ್ನು ಯೂಟ್ಯೂಬ್, ಫೇಸ್‌ಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ ವ್ಯಾಪಕವಾಗಿ ವೈರಲ್ ಮಾಡಲಾಗಿತ್ತು. ನ್ಯಾಯಾಲಯದ ಗೌಪ್ಯ ವಿಚಾರಣೆಯ ದೃಶ್ಯಗಳನ್ನು ಈ ರೀತಿ ಸಾರ್ವಜನಿಕವಾಗಿ ದುರ್ಬಳಕೆ ಮಾಡಿಕೊಂಡಿರುವುದನ್ನು ನ್ಯಾಯಾಧೀಶರು ಗಂಭೀರವಾಗಿ ಪರಿಗಣಿಸಿದ್ದಾರೆ.
ಯೂಟ್ಯೂಬರ್ಸ್, ಸಾಮಾಜಿಕ ಜಾಲತಾಣ ಖಾತೆಗಳಿಗೆ ಶಾಕ್
ವೀಡಿಯೋ ಶೇರ್ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ 59ನೇ ಸಿಸಿಹೆಚ್ ಕೋರ್ಟ್ ರಿಜಿಸ್ಟ್ರಾರ್‌ಗೆ ಲಿಖಿತ ಆದೇಶ ರವಾನಿಸಿದೆ. ನ್ಯಾಯಾಲಯದ ಘನತೆಗೆ ಧಕ್ಕೆ ತರುವಂತೆ ವರ್ತಿಸಿ ನಿಯಮ ಉಲ್ಲಂಘಿಸಿದವರ ಮೇಲೆ ನ್ಯಾಯಾಂಗ ನಿಂದನೆ (ಕಂಟೆಂಪ್ಟ್ ಆಫ್ ಕೋರ್ಟ್) ಮೊಕದ್ದಮೆ ದಾಖಲಿಸಲು ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಲಾಗಿದೆ. ಇದು ಸೋಷಿಯಲ್ ಮೀಡಿಯಾ ಪೇಜ್‌ಗಳು ಮತ್ತು ಯೂಟ್ಯೂಬರ್‌ಗಳಿಗೆ ದೊಡ್ಡ ಸಂಕಷ್ಟ ತಂದಿಟ್ಟಿದೆ.
ವೀಡಿಯೋ ಡಿಲೀಟ್ ಮಾಡಿಸಲು ಪೊಲೀಸರಿಗೆ ಸೂಚನೆ
ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುವ ಪ್ರದೋಷ್ ಅವರ ಹೇಳಿಕೆಯ ಎಲ್ಲಾ ವೀಡಿಯೋಗಳನ್ನು ತಕ್ಷಣವೇ ಡಿಲೀಟ್ ಮಾಡಿಸಲು ಸೈಬರ್ ಕ್ರೈಂ ಮತ್ತು ತನಿಖಾ ಪೊಲೀಸರಿಗೆ ನ್ಯಾಯಾಲಯ ನಿರ್ದೇಶಿಸಿದೆ. ಅಲ್ಲದೆ, ಅಂತಹ ಸೂಕ್ಷ್ಮ ವೀಡಿಯೋಗಳನ್ನು ಅಪ್‌ಲೋಡ್ ಮಾಡಿ, ಹಂಚಿಕೊಂಡ ಖಾತೆದಾರರನ್ನು ಪತ್ತೆಹಚ್ಚಿ ಅವರ ವಿರುದ್ಧ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸರಿಗೆ ಸ್ಪಷ್ಟ ಆದೇಶ ನೀಡಿದೆ.