LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಗರ್ ಹುಕುಂ ವಿವಾದ: ಸಚಿವ ಚಲುವರಾಯಸ್ವಾಮಿ ವಿರುದ್ಧ ಸುರೇಶ್ ಗೌಡ ಗಂಭೀರ ಆರೋಪ

ನಾಗಮಂಗಲ: ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳನ್ನು ಏಕಾಏಕಿ ವಜಾಗೊಳಿಸಿರುವುದನ್ನು ಖಂಡಿಸಿ ಜೆಡಿಎಸ್ ವತಿಯಿಂದ ನಾಗಮಂಗಲದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಮಾಜಿ ಶಾಸಕ ಸುರೇಶ್ ಗೌಡ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ನೂರಾರು ರೈತರು ಭಾಗವಹಿಸಿದ್ದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಪ್ರತಿಭಟನಾ ಮೆರವಣಿಗೆಯು ತಾಲೂಕು ಕಚೇರಿ ಆವರಣವನ್ನು ತಲುಪಿದ ಬಳಿಕ, ಅಲ್ಲಿರುವ ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಆಕ್ರೋಶ ಹೊರಹಾಕಲಾಯಿತು.

ಏಕಾಏಕಿ 203 ಅರ್ಜಿಗಳ ವಜಾ: ಆಡಳಿತಕ್ಕೆ ಪ್ರಶ್ನೆಗಳ ಸುರಿಮಳೆ

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಸುರೇಶ್ ಗೌಡ, "ಬಗರ್ ಹುಕುಂ ಸಾಗುವಳಿದಾರರಿಗೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ನೋಟಿಸ್ ಜಾರಿ ಮಾಡಲಾಗಿದೆ. ಸಹಾಯಕ ಆಯುಕ್ತರು (ಎಸಿ) ಬರೋಬ್ಬರಿ 203 ರೈತರ ಅರ್ಜಿಗಳನ್ನು ವಜಾಗೊಳಿಸಿದ್ದಾರೆ. ರೈತರಿಗೆ ತಮ್ಮ ವಾದ ಮಂಡಿಸಲು ಕನಿಷ್ಠ ಅವಕಾಶವನ್ನೂ ನೀಡದೆ, ಅರ್ಜಿಗಳನ್ನು ರದ್ದುಪಡಿಸಿರುವುದು ಎಷ್ಟು ಸರಿ? ಯಾವ ಕಾರಣಕ್ಕೆ ಈ ಅರ್ಜಿಗಳನ್ನು ವಜಾ ಮಾಡಲಾಗಿದೆ ಎಂಬುದಕ್ಕೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸೂಕ್ತ ಉತ್ತರ ನೀಡಬೇಕು. ಅಕ್ರಮ-ಸಕ್ರಮ ಸಮಿತಿಯಲ್ಲಿ ಮರುಪರಿಶೀಲನೆ ಮಾಡಲು ಅವಕಾಶವಿಲ್ಲದಿದ್ದರೂ ಈ ರೀತಿ ಮಾಡಿರುವುದು ರೈತರಿಗೆ ಮಾಡಿದ ದ್ರೋಹ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವರ ವಿರುದ್ಧ ಬೇನಾಮಿ ಆಸ್ತಿ, ಲೇಔಟ್ ದಂಧೆ ಆರೋಪ

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ನೇರ ವಾಗ್ದಾಳಿ ನಡೆಸಿದ ಅವರು, "ಇದು ಸಚಿವರ ವೈಯಕ್ತಿಕ ಲಾಭಕ್ಕಾಗಿ ನಡೆದಿರುವ ಹುನ್ನಾರವೇ ಅಥವಾ ಮೇಕೆದಾಟು ಯೋಜನೆಗಾಗಿ ಈ ರೀತಿ ಮಾಡುತ್ತಿದ್ದಾರೆಯೇ ಎಂಬುದು ತಿಳಿಯುತ್ತಿಲ್ಲ. ನಾಗಮಂಗಲದಲ್ಲಿ ಸಚಿವ ಚಲುವರಾಯಸ್ವಾಮಿಯವರ 15 ಎಕರೆ ಬೇನಾಮಿ ಜಮೀನಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದು ನಿಜವೇ? ಅಲ್ಲಿ ಲೇಔಟ್ ನಿರ್ಮಿಸಲಾಗುತ್ತಿದ್ದು, ಅದಕ್ಕೆ ಜಿಲ್ಲಾಧಿಕಾರಿಗಳು ಹೇಗೆ ಮಂಜೂರಾತಿ ಮಾಡಿಕೊಟ್ಟರು?" ಎಂದು ಪ್ರಶ್ನಿಸಿದರು.

ಡಿಸಿ ಕುಮಾರ್ ವಿರುದ್ಧ ಕಿಡಿ: 'ಮಂತ್ರಿ ಸೇವೆ ಮಾಡಲು ಬಂದಿದ್ದೀರಾ?'

ಜಿಲ್ಲಾಧಿಕಾರಿ ಕುಮಾರ್ ಅವರ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ ಸುರೇಶ್ ಗೌಡ, "ಡಿಸಿ ಕುಮಾರ್ ಅವರೇ, ನಿಮಗೆ ಸಂಬಳ ಕೊಡುವುದು ಸರ್ಕಾರವೋ ಅಥವಾ ಸಚಿವ ಚಲುವರಾಯಸ್ವಾಮಿಯವರೋ? ನೀವು ಜಿಲ್ಲೆಯಲ್ಲಿ ಜನಸೇವೆ ಮಾಡಲು ಬಂದಿದ್ದೀರಾ ಅಥವಾ ಸಚಿವರ ಸೇವೆ ಮಾಡಲು ಬಂದಿದ್ದೀರಾ? ತಾಲೂಕಿನಲ್ಲಿ ರಾಜಾರೋಷವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಾನೇ ಖುದ್ದಾಗಿ ಅರ್ಜಿ ನೀಡಿದ್ದರೂ ಇದುವರೆಗೂ ಕ್ರಮವಾಗಿಲ್ಲ ಯಾಕೆ?" ಎಂದು ತರಾಟೆಗೆ ತೆಗೆದುಕೊಂಡರು.

'ಅಜ್ಜಯ್ಯನ ಮೇಲೆ ಆಣೆ ಮಾಡಿ ಹೇಳಲಿ, ತಪ್ಪಿದ್ದರೆ ಕತ್ತು ಕೊಯ್ದುಕೊಳ್ಳುತ್ತೇನೆ'

ತಮ್ಮ ಅಧಿಕಾರಾವಧಿಯ ಮೇಲಿನ ಆರೋಪಗಳಿಗೆ ಸವಾಲು ಹಾಕಿದ ಸುರೇಶ್ ಗೌಡ, "ನನ್ನ ಶಾಸಕತ್ವದ ಅವಧಿಯಲ್ಲಿ ಸಮಿತಿ ಸದಸ್ಯರಿಗೆ ಜಮೀನು ಗ್ರ್ಯಾಂಟ್ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದೀರಿ. 50 ವರ್ಷಗಳ ಹಿಂದೆ ಅರ್ಜಿ ಹಾಕಿದ್ದ ಅರ್ಹ ಫಲಾನುಭವಿಗಳಿಗೆ ನಾನು ಜಮೀನು ಮಂಜೂರು ಮಾಡಿಸಿದ್ದೇನೆ. ನನ್ನ ಅವಧಿಯಲ್ಲಿ ಅರ್ಹರಲ್ಲದವರಿಗೆ ಜಮೀನು ಮಂಜೂರು ಮಾಡಿದ್ದರೆ ನನ್ನ ಕತ್ತು ಕೊಯ್ದುಕೊಳ್ಳಲು ಸಿದ್ಧ. ತಪ್ಪಾಗಿದ್ದರೆ ಕಾನೂನು ಕ್ರಮ ಕೈಗೊಳ್ಳಿ, ಅದನ್ನು ಬಿಟ್ಟು ಬಡ ರೈತರಿಗೆ ಅನ್ಯಾಯ ಮಾಡಬೇಡಿ. ತಾಕತ್ತಿದ್ದರೆ ಸಚಿವ ಚಲುವರಾಯಸ್ವಾಮಿ ಅಜ್ಜಯ್ಯನ (ಬಾಲಗಂಗಾಧರನಾಥ ಸ್ವಾಮೀಜಿ) ಮೇಲೆ ಪ್ರಮಾಣ ಮಾಡಿ ತಾನು ರೈತರಿಗೆ ಅನ್ಯಾಯ ಮಾಡಿಲ್ಲ ಎಂದು ಹೇಳಲಿ ನೋಡೋಣ" ಎಂದು ನೇರ ಆಹ್ವಾನ ನೀಡಿದರು.

ಅಭಿವೃದ್ಧಿ ಶೂನ್ಯ, ಕಣ್ಣೀರಿಟ್ಟು ವೋಟು ಪಡೆದಿದ್ದೇ ಸಾಧನೆ

"ನಿಮ್ಮ ಮುಖ್ಯಮಂತ್ರಿಗಳೇ ಮೈಸೂರಿನಲ್ಲಿ ನಿವೇಶನಗಳನ್ನು ಪಡೆದುಕೊಳ್ಳುತ್ತಿದ್ದಾರೆ, ನೀವೂ ಲೇಔಟ್ ಮಾಡಿಕೊಳ್ಳಿ. ಆದರೆ ಚುನಾವಣೆ ವೇಳೆ ಜನರ ಮುಂದೆ ಕಣ್ಣೀರಿಟ್ಟು ಮತ ಗಿಟ್ಟಿಸಿಕೊಂಡು, ಈಗ ಬಡವರಿಗೆ ದ್ರೋಹ ಬಗೆಯುತ್ತಿದ್ದೀರಿ. ತಾಲೂಕಿನಲ್ಲಿ ಕೆರೆಕಟ್ಟೆಗಳನ್ನು ತುಂಬಿಸಿಲ್ಲ, ಯಾವುದೇ ನೀರಾವರಿ ಯೋಜನೆಯನ್ನೂ ತಂದಿಲ್ಲ. ಒಂದು ಪುಟ್ಟ ಆರ್‌ಟಿಒ ಕಚೇರಿ ತಂದು ದೊಡ್ಡ ಸಾಧನೆಯಂತೆ ಬೀಗುತ್ತಿದ್ದೀರಿ. ತಾಕತ್ತಿದ್ದರೆ ಇಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯವನ್ನು (ಹಾರ್ಟಿಕಲ್ಚರ್ ಯೂನಿವರ್ಸಿಟಿ) ಸ್ಥಾಪಿಸಿ ತೋರಿಸಿ" ಎಂದು ಸವಾಲೆಸೆದರು.

ಆಮರಣಾಂತ ಉಪವಾಸದ ಎಚ್ಚರಿಕೆ

ಬಗರ್ ಹುಕುಂ ಅಡಿಯಲ್ಲಿ ಅಕ್ರಮವಾಗಿ ನೀಡಿರುವ ಹಕ್ಕುಪತ್ರಗಳನ್ನು ಕೂಡಲೇ ರದ್ದುಪಡಿಸಬೇಕು ಮತ್ತು ಬಡ ರೈತರಿಗೆ ಅನ್ಯಾಯವಾಗುವುದನ್ನು ತಡೆಯಬೇಕು ಎಂದು ಆಗ್ರಹಿಸಿದ ಅವರು, "ಸಮಸ್ಯೆ ಇತ್ಯರ್ಥಕ್ಕೆ ಜಿಲ್ಲಾಡಳಿತಕ್ಕೆ 10 ದಿನಗಳ ಕಾಲಾವಕಾಶ ನೀಡುತ್ತಿದ್ದೇವೆ. ಅಷ್ಟರೊಳಗೆ ನ್ಯಾಯ ಸಿಗದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇವೆ. ಅನ್ನದಾತರ ಹಿತಕ್ಕಾಗಿ ನಾನು ಪ್ರಾಣತ್ಯಾಗ ಮಾಡಲು ಸಿದ್ಧ, ಬೇಕಿದ್ದರೆ ಜೈಲಿಗೆ ಹೋಗಲೂ ಸಿದ್ಧ" ಎಂದು ಆಡಳಿತ ವರ್ಗಕ್ಕೆ ಖಡಕ್ ಎಚ್ಚರಿಕೆ ನೀಡಿದರು.

ವರದಿ: ಗಿರೀಶ್ ರಾಜ್, ಮಂಡ್ಯ

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!ಗ್ರಾಹಕರಿಗೆ ಜಿಯೋ ಭರ್ಜರಿ ಆಫರ್: 1,499 ರೂ. JioBharat ಫೋನ್ ನೊಂದಿಗೆ 6 ತಿಂಗಳ ಉಚಿತ ರೀಚಾರ್ಜ್BREAKING: ಇನ್ಮುಂದೆ ಔಷಧಿ ಬಿಲ್‌ನಲ್ಲಿ ಮೂಲ ಬೆಲೆ, MRP ವಿವರ ಕಡ್ಡಾಯ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ!