LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

‘ಆಕ್ಟಿವ್ ಕರ್ನಾಟಕ’ ಮೂಲಕ ಕ್ರೀಡೆ–ಪ್ರವಾಸೋದ್ಯಮ ಸಂಪರ್ಕ: ಸಚಿವ ಕೆ.ಜೆ. ಜಾರ್ಜ್

ಬೆಂಗಳೂರು : ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಮತ್ತು ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ (JLR), ಕರ್ನಾಟಕದ ಪುರುಷ, ಮಹಿಳಾ ಹಾಗೂ ವಿವಿಧ ವಯೋಮಾನದ ರಾಜ್ಯ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಲಿವೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಸಹಯೋಗದಲ್ಲಿ ನಡೆದ ಪ್ರಾಯೋಜಕತ್ವ ಹಾಗೂ ಜೆರ್ಸಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಹಭಾಗಿತ್ವವನ್ನು ‘ಆಕ್ಟಿವ್ ಕರ್ನಾಟಕ’ ಪರಿಕಲ್ಪನೆಯಡಿ ಕ್ರೀಡೆ ಮತ್ತು ಪ್ರವಾಸೋದ್ಯಮವನ್ನು ಪರಸ್ಪರ ಜೋಡಿಸುವ ವೇದಿಕೆಯಾಗಿಸಲಾಗುವುದು ಎಂದರು.

“ಕ್ರೀಡೆ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಹಾಗೂ ಪ್ರವಾಸೋದ್ಯಮದ ಮೂಲಕ ಕ್ರೀಡೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಉದ್ದೇಶ. ಕರ್ನಾಟಕ ಕ್ರಿಕೆಟ್ ತಂಡಗಳು ದೇಶದ ವಿವಿಧ ಭಾಗಗಳಲ್ಲಿ ಆಡಿದಾಗ ರಾಜ್ಯದ ಹೆಸರು ಲಕ್ಷಾಂತರ ಜನರನ್ನು ತಲುಪುತ್ತದೆ. ಅದೇ ವೇದಿಕೆಯನ್ನು ಬಳಸಿಕೊಂಡು ಕರ್ನಾಟಕದ ಪ್ರವಾಸಿ ತಾಣಗಳು, ಸಂಸ್ಕೃತಿ ಮತ್ತು ವಿಶಿಷ್ಟ ಅನುಭವಗಳನ್ನು ಪರಿಚಯಿಸಲಾಗುವುದು,” ಎಂದು ಸಚಿವರು ಹೇಳಿದರು.

ಕರ್ನಾಟಕವು ಭಾರತೀಯ ಕ್ರಿಕೆಟ್‌ಗೆ ಅನೇಕ ಶ್ರೇಷ್ಠ ಆಟಗಾರರನ್ನು ನೀಡಿದ್ದು, ಮುಂದಿನ ತಲೆಮಾರಿನ ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಮತ್ತು ಬೆಂಬಲ ನೀಡುವುದು ಕೂಡ ಈ ಸಹಭಾಗಿತ್ವದ ಉದ್ದೇಶವಾಗಿದೆ. ಇದೇ ವೇಳೆ ಕ್ರಿಕೆಟ್ ಪಂದ್ಯಗಳ ಪ್ರಸಾರ, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳ ವ್ಯಾಪ್ತಿಯನ್ನು ಕರ್ನಾಟಕ ಪ್ರವಾಸೋದ್ಯಮ ಪ್ರಚಾರಕ್ಕೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು.

“ಇದು ಎರಡೂ ಕ್ಷೇತ್ರಗಳಿಗೆ ಲಾಭದಾಯಕ ಸಹಭಾಗಿತ್ವ. ನಮ್ಮ ಯುವ ಕ್ರಿಕೆಟಿಗರಿಗೆ ಪ್ರೋತ್ಸಾಹ ದೊರೆಯುವುದರ ಜೊತೆಗೆ, ಅವರ ಮೂಲಕ ಕರ್ನಾಟಕ ಪ್ರವಾಸೋದ್ಯಮಕ್ಕೂ ದೇಶವ್ಯಾಪಿ ಪ್ರಚಾರ ದೊರೆಯಲಿದೆ. ಮುಂದಿನ ಹಂತದಲ್ಲಿ ಪಂದ್ಯಾಧಾರಿತ ಪ್ರವಾಸ ಪ್ಯಾಕೇಜ್‌ಗಳು, ಕ್ರೀಡಾ ಪ್ರವಾಸೋದ್ಯಮ ಹಾಗೂ ಪ್ರವಾಸಿ ತಾಣಗಳಲ್ಲಿ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುವ ಅವಕಾಶಗಳನ್ನೂ ಪರಿಶೀಲಿಸಲಾಗುವುದು,” ಎಂದು ಕೆ.ಜೆ. ಜಾರ್ಜ್ ಹೇಳಿದರು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, “ಕ್ರಿಕೆಟ್ ಕ್ರೀಡಾಂಗಣಕ್ಕೆ ಸೀಮಿತವಾದ ಕ್ರೀಡೆಯಲ್ಲ. ಟಿವಿ, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಕೋಟ್ಯಂತರ ಜನರನ್ನು ತಲುಪುವ ಸಾಮರ್ಥ್ಯ ಇದಕ್ಕಿದೆ. ‘ಆಕ್ಟಿವ್ ಕರ್ನಾಟಕ’ ಅಡಿಯಲ್ಲಿ ಈ ವ್ಯಾಪ್ತಿಯನ್ನು ಪ್ರವಾಸಿ ತಾಣಗಳ ಪ್ರಚಾರ, ಪಂದ್ಯಾಧಾರಿತ ಪ್ರವಾಸ ಮತ್ತು ಹೊಸ ಪ್ರವಾಸಿ ಅನುಭವಗಳೊಂದಿಗೆ ಜೋಡಿಸುವುದು ನಮ್ಮ ಉದ್ದೇಶ,” ಎಂದರು.

KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮಾತನಾಡಿ, “ಕರ್ನಾಟಕ ಕ್ರಿಕೆಟ್‌ಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ, KSTDC ಮತ್ತು JLR ನೀಡುತ್ತಿರುವ ಬೆಂಬಲ ಅತ್ಯಂತ ಮಹತ್ವದ್ದು. ಕರ್ನಾಟಕದ ಕ್ರಿಕೆಟಿಗರು ದೇಶ ಮತ್ತು ವಿಶ್ವದ ವಿವಿಧ ವೇದಿಕೆಗಳಲ್ಲಿ ರಾಜ್ಯದ ಹೆಸರನ್ನು ಪ್ರತಿನಿಧಿಸುತ್ತಾರೆ. ಅದೇ ಸಂದರ್ಭದಲ್ಲಿ ಅವರ ಮೂಲಕ ಕರ್ನಾಟಕ ಪ್ರವಾಸೋದ್ಯಮವನ್ನು ಪರಿಚಯಿಸುವುದು ಉತ್ತಮ ಪರಿಕಲ್ಪನೆ. ಕ್ರೀಡೆ ಮತ್ತು ಪ್ರವಾಸೋದ್ಯಮ ಎರಡಕ್ಕೂ ಪ್ರಯೋಜನವಾಗುವ ಈ ಸಹಭಾಗಿತ್ವಕ್ಕೆ ತ್ವರಿತವಾಗಿ ಬೆಂಬಲ ನೀಡಿದ ಸರ್ಕಾರ ಮತ್ತು ಸಚಿವ ಕೆ.ಜೆ. ಜಾರ್ಜ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ,” ಎಂದರು.

ಕಾರ್ಯಕ್ರಮದಲ್ಲಿ ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್, ವಕ್ತಾರ ವಿನಯ್ ಮೃತ್ಯುಂಜಯ ಹಾಗೂ ಆಟಗಾರರಾದ ಮಯಾಂಕ್ ಅಗರ್ವಾಲ್, ರಾಜೇಶ್ವರಿ ಗಾಯಕ್ವಾಡ್ ಮತ್ತು ಕರುಣ್ ನಾಯರ್ ಸೇರಿದಂತೆ KSTDC, JLR ಮತ್ತು KSCAಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!