ಬೆಂಗಳೂರು: ಕ್ರೀಡೆಯಿಂದ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಸದೃಢ ಹಾಗೂ ಕ್ರಿಯಾಶೀಲ ಯುವಕರಿಂದ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ತಿಳಿಸಿದರು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮಹಾಲಕ್ಷ್ಮೀ ಲೇಔಟ್‌ನ ಕೆ.ಜಿ. ಗ್ರೌಂಡ್‌ನಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿ "ಸಿಎಂ ಕಪ್"ಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆ ಕೇವಲ ಗೆಲುವು-ಸೋಲಿನ ವಿಚಾರವಲ್ಲ; ಅದು ಶಿಸ್ತು, ನಾಯಕತ್ವ, ತಂಡದ ಮನೋಭಾವ, ಸಮಯಪ್ರಜ್ಞೆ ಹಾಗೂ ಪರಸ್ಪರ ಗೌರವವನ್ನು ಬೆಳೆಸುವ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ, ಕ್ರೀಡೆ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಯುವಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿಕೊಂಡಾಗ ಮಾತ್ರ ಸಮಾಜದಲ್ಲಿ ಆರೋಗ್ಯಕರ ಬದಲಾವಣೆ ಸಾಧ್ಯ ಎಂದು ಸೂಚಿಸಿದರು.

ಯುವಕರು ದೇಶದ ಭವಿಷ್ಯದ ನಿರ್ಮಾತೃಗಳಾಗಿದ್ದು, ತಮ್ಮ ಪ್ರತಿಭೆ ಮತ್ತು ಶಕ್ತಿಯನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸಬೇಕು. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಕನಸಿನ ಕೂಸಾದ ಭಾರತ್ ಜೋಡೋ ಯುವ ಸಂಘದೊಂದಿಗೆ ಕೈಜೋಡಿಸಿ, ಗ್ರಾಮ-ವಾರ್ಡ್ ಮಟ್ಟದಲ್ಲಿ ಸಂಘಟಿತರಾಗಿ ಗ್ರಾಮ ಸ್ವರಾಜ್ಯದ ಕನಸನ್ನು ಸಾಕಾರಗೊಳಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ಬಿಬಿಎಂಪಿ ಮಾಜಿ ಸದಸ್ಯರು ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಅಭ್ಯರ್ಥಿಗಳಾದ ಎಸ್.ಕೇಶವಮೂರ್ತಿ, ಯುವ ಕಾಂಗ್ರೆಸ್ ಸಾಂಸ್ಕೃತಿಕ ಮತ್ತು ಕ್ರೀಡಾ ಘಟಕದ ಅಧ್ಯಕ್ಷರಾದ ಭರತ್ ಯಾದವ್ ಜೆ., ಕಾನೂನು ಘಟಕದ ರಾಜ್ಯಾಧ್ಯಕ್ಷರಾದ ಶ್ರೀಧರ್ ಜಾಧವ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ರಾಹುಲ್ ಗೌಡ, ಅಸೆಂಬ್ಲಿ ಅಧ್ಯಕ್ಷರಾದ ಸ್ಯಾಮ್ಯುಯೆಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್, ಮಹಾಲಕ್ಷ್ಮಿಪುರಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕೆಪಿಸಿಸಿ ವಕ್ತಾರರಾದ ಎಂ.ಜಿ.ಸುಧೀಂದ್ರ, ಬ್ಲಾಕ್ ಅಧ್ಯಕ್ಷರಾದ ರಾಮಕೃಷ್ಣ, ನಟರಾಜ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ರವಿಕುಮಾರ್ ಆರ್., ಕಾಂಗ್ರೆಸ್ ಮುಖಂಡರಾದ ಜನಾರ್ಧನ್ ಮತ್ತು ಬಿ.ಎನ್.ಕುಮಾರ್ ಸೇರಿದಂತೆ ಯುವ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.