ಬೆಂಗಳೂರು: ಒಂದು ಬ್ಯಾಂಕ್ ಮತ್ತೊಂದು ಬ್ಯಾಂಕ್‌ನೊಂದಿಗೆ ವಿಲೀನಗೊಂಡ ತಕ್ಷಣ, ಮೂಲ ಬ್ಯಾಂಕ್ ಹೆಸರಿನಲ್ಲಿ ನೀಡಲಾದ ಚೆಕ್ ಅಸಿಂಧುವಾಗುವುದಿಲ್ಲ ಹಾಗೂ ಚೆಕ್ ನೀಡಿದ ವ್ಯಕ್ತಿ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಬೆಂಗಳೂರಿನ ಗೌಡನಪಾಳ್ಯ ನಿವಾಸಿ ಭದ್ರಮ್ಮ ಎಂಬುವರು ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಚೆಕ್ ಬೌನ್ಸ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠವು ಈ ಮಹತ್ವದ ಆದೇಶ ನೀಡಿ, ಅರ್ಜಿಯನ್ನು ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆಯೇನೆಂದರೆ, ಅರ್ಜಿದಾರ ಭದ್ರಮ್ಮ ಅವರು ಲೀಲಾವತಿ ವೆಂಕಟೇಶ್ ಎಂಬುವರಿಗೆ ವಿಜಯಾ ಬ್ಯಾಂಕ್‌ನ ಚೆಕ್ ನೀಡಿದ್ದರು. ಆ ಚೆಕ್ ಬ್ಯಾಂಕ್‌ನಲ್ಲಿ ಬೌನ್ಸ್ ಆದ ಹಿನ್ನೆಲೆಯಲ್ಲಿ ಲೀಲಾವತಿ ಅವರು ಭದ್ರಮ್ಮಗೆ ಕಾನೂನುಬದ್ಧ ನೋಟಿಸ್ ಜಾರಿ ಮಾಡಿದ್ದರು. ಆದಾಗ್ಯೂ, ಭದ್ರಮ್ಮ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಲೀಲಾವತಿ ಅವರು ವಿಚಾರಣಾ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ದೂರು ಪರಿಗಣಿಸಿದ ವಿಚಾರಣಾ ನ್ಯಾಯಾಲಯವು ಭದ್ರಮ್ಮಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಭದ್ರಮ್ಮ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರ ಭದ್ರಮ್ಮ ಪರ ವಕೀಲರು ವಾದ ಮಂಡಿಸಿ, "ಅರ್ಜಿದಾರರು ಈ ಚೆಕ್ ಅನ್ನು ದೂರುದಾರರಿಗೆ ನೀಡಿರಲಿಲ್ಲ, ಬದಲಿಗೆ ಅದು ಕಳೆದುಹೋಗಿತ್ತು. ಈ ಕುರಿತು ಪೊಲೀಸ್ ಠಾಣೆಗೂ ದೂರು ನೀಡಲಾಗಿತ್ತು. ಕಳೆದುಹೋಗಿದ್ದ ಚೆಕ್ ಪಡೆದುಕೊಂಡ ದೂರುದಾರರು ಅದನ್ನು ದುರುಪಯೋಗಪಡಿಸಿಕೊಂಡು ಬ್ಯಾಂಕ್‌ಗೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ವಿಜಯಾ ಬ್ಯಾಂಕ್ 2019ರಲ್ಲೇ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಂಡಿದ್ದು, 'ಅಂತಹ ಬ್ಯಾಂಕ್ ಅಸ್ತಿತ್ವದಲ್ಲಿಲ್ಲ' ಎಂದು ಬ್ಯಾಂಕ್ ಸ್ವತಃ ಹಿಂಬರಹ ನೀಡಿದೆ. ಹೀಗಾಗಿ ಅರ್ಜಿದಾರರು ಯಾವುದೇ ಅಪರಾಧ ಎಸಗಿಲ್ಲವಾದ್ದರಿಂದ ಪ್ರಕರಣವನ್ನು ರದ್ದುಗೊಳಿಸಬೇಕು" ಎಂದು ಕೋರಿದ್ದರು.
ಆದರೆ ಈ ವಾದವನ್ನು ಪುರಸ್ಕರಿಸದ ಹೈಕೋರ್ಟ್, ಬ್ಯಾಂಕ್‌ಗಳು ವಿಲೀನಗೊಂಡರೂ ಚೆಕ್ ನೀಡಿದ ವ್ಯಕ್ತಿಯ ಹಣಕಾಸಿನ ಹೊಣೆಗಾರಿಕೆ ಇಲ್ಲವಾಗುವುದಿಲ್ಲ ಎಂದು ತಿಳಿಸಿದೆ. ವಿಲೀನದ ನಂತರವೂ ಹಳೆಯ ಬ್ಯಾಂಕ್ ಹೆಸರಿನ ಚೆಕ್‌ನ ಆಧಾರದ ಮೇಲೆ ಕ್ರಿಮಿನಲ್ ನಡಾವಳಿಗಳನ್ನು ಮುಂದುವರಿಸಬಹುದು ಹಾಗೂ ಚೆಕ್ ಬೌನ್ಸ್ ಪ್ರಕರಣದಲ್ಲಿ ವಿಚಾರಣೆಯನ್ನು ಎದುರಿಸಲೇಬೇಕು ಎಂದು ಸ್ಪಷ್ಟಪಡಿಸಿ, ಅರ್ಜಿದಾರರ ಮನವಿಯನ್ನು ವಜಾಗೊಳಿಸಿ ಆದೇಶಿಸಿದೆ.