ಬೆಂಗಳೂರು : ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿರುವ ಕೆ.ಆರ್.ಐ.ಡಿ.ಎಲ್. ಗದಗ ಉಪ ವಿಭಾಗದ ಎ.ಇ.ಇ. ಪರ್ವೇಜ್ ಪತ್ತೆಗೆ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಪರ್ವೇಜ್ ಅವರ ತಂದೆ ಜಾಫರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಧೈರ್ಯ ಹೇಳಿದ ಅವರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿಜಿಪಿಯವರೊಂದಿಗೆ ಕೂಡ ತಾವು ಮಾತನಾಡಿದ್ದು, ಪರ್ವೇಜ್ ಹುಡುಕಲು ಎಲ್ಲ ಕ್ರಮ ಕೈಗೊಳ್ಳುವಂತೆ ತಿಳಿಸಿರುವುದಾಗಿ ಹೇಳಿದರು.
ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಪರ್ವೇಜ್ ಹಣ ಪಾವತಿಗೆ ಸಂಬಂಧಿಸಿದಂತೆ ಆತಂಕ ಪಡುವ ಅಗತ್ಯವಿಲ್ಲ, ಪರ್ವೇಜ್ ನಿಮ್ಮನ್ನು ಸಂಪರ್ಕಿಸಿದರೆ, ಯಾವುದೇ ಸಮಸ್ಯೆ ಇದ್ದರೂ ಸರ್ಕಾರ ಅದನ್ನು ಪರಿಹರಿಸುತ್ತದೆ ಎಂದು ತಿಳಿಸಿದೆ ಎಂಬ ಮಾಹಿತಿ ನೀಡಿ. ಮನೆಯವರಿಗೆಲ್ಲಾ ಧೈರ್ಯ ಹೇಳಿ ಎಂದರು.
ಈ ಪ್ರಕರಣದ ಬಗ್ಗೆ ತನಿಖೆ ಮಾಡಲೂ ಸೂಚಿಸಲಾಗಿದೆ. ಪರ್ವೇಜ್ ಅವರಿಗೆ ನ್ಯಾಯ ಕೊಡಿಸುತ್ತೇನೆ ಎಂದು ಈಶ್ವರ ಖಂಡ್ರೆ ಜಾಫರ್ ಅವರಿಗೆ ಧೈರ್ಯ ಹೇಳಿದರು.
ಈ ಸಂದರ್ಭದಲ್ಲಿ ಕೆ.ಆರ್.ಐ.ಡಿ.ಎಲ್. ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗೌಡ ಮತ್ತಿತರರು ಹಾಜರಿದ್ದರು.