ಕೋಲಾರ: ಬೆಂಗಳೂರು–ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಸ್ಕಾರ್ಪಿಯೋ ಕಾರಿನಲ್ಲಿದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು, ನಡುರಸ್ತೆಯಲ್ಲೇ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಭೀಕರ ಘಟನೆ ಕೋಲಾರ ತಾಲೂಕಿನಲ್ಲಿ ತಡರಾತ್ರಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ-75ರ ಕೆಂದಟ್ಟಿ ಗ್ರಾಮದ ಬಳಿ ಈ ದುರಂತ ಸಂಭವಿಸಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಡರಾತ್ರಿ ಕೆಂದಟ್ಟಿ ಬಳಿ ಕಾರು ಚಲಿಸುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡು ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಜ್ವಾಲೆ ತೀವ್ರಗೊಳ್ಳುತ್ತಿದ್ದಂತೆಯೇ ಜಾಗರೂಕರಾದ ಚಾಲಕ ಹಾಗೂ ಪ್ರಯಾಣಿಕರು ತಕ್ಷಣವೇ ಕಾರಿನಿಂದ ಹೊರಗೆ ಜಿಗಿದು ಜೀವ ರಕ್ಷಿಸಿಕೊಂಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಕಾರನ್ನು ಆವರಿಸಿಕೊಂಡಿದ್ದು, ವಾಹನ ಸಂಪೂರ್ಣವಾಗಿ ಭಸ್ಮವಾಗಿದೆ.
ಘಟನಾ ಸ್ಥಳಕ್ಕೆ ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಪ್ರಾಥಮಿಕ ಮಾಹಿತಿಯಂತೆ ಕಾರಿನಲ್ಲಿದ್ದ ತಾಂತ್ರಿಕ ದೋಷವೇ (ಶಾರ್ಟ್ ಸರ್ಕ್ಯೂಟ್) ಈ ಅವಘಡಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಈ ಕುರಿತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.