ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ರಕ್ತದೊತ್ತಡ (BP) ಹಾಗೂ ಹೃದಯಾಘಾತ ಪ್ರಕರಣಗಳಿಗೆ ಕಡಿವಾಣ ಹಾಕಲು ಕರ್ನಾಟಕ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಉಪ್ಪಿನ ಅತಿಯಾದ ಬಳಕೆಯಿಂದ ಉಂಟಾಗುವ ಸೈಲೆಂಟ್ ಕಿಲರ್ ಕಾಯಿಲೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಇಲಾಖೆಯು, ಸಾರ್ವಜನಿಕರು, ಶಾಲೆಗಳು, ಹೋಟೆಲ್-ರೆಸ್ಟೋರೆಂಟ್‌ಗಳು, ಸ್ಟ್ರೀಟ್ ಫುಡ್ ಮಾರಾಟಗಾರರು ಹಾಗೂ ಆಹಾರ ಪ್ಯಾಕೇಜಿಂಗ್ ಸಂಸ್ಥೆಗಳಿಗೆ ಸಮಗ್ರ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ. ಒಬ್ಬ ವ್ಯಕ್ತಿ ದಿನಕ್ಕೆ ಗರಿಷ್ಠ 5 ಗ್ರಾಂಗಿಂತ ಕಡಿಮೆ ಉಪ್ಪು ಸೇವಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡವನ್ನು ಉಲ್ಲೇಖಿಸಿ ಎಚ್ಚರಿಕೆ ನೀಡಿದೆ.
ಸಾಮಾನ್ಯ ಜನರಿಗೆ ಹೆಲ್ತ್ ಟಿಪ್ಸ್: ದೈನಂದಿನ ಜೀವನದಲ್ಲಿ ಸಾರ್ವಜನಿಕರು ಉಪ್ಪು ಬಳಕೆಯನ್ನು ನಿಯಂತ್ರಿಸಲು ಹಲವು ಸರಳ ಸೂತ್ರಗಳನ್ನು ನೀಡಲಾಗಿದೆ. ಅಡುಗೆಯಲ್ಲಿ, ಉಪ್ಪಿನಕಾಯಿ, ಚಟ್ನಿ ಹಾಗೂ ಸ್ನ್ಯಾಕ್ಸ್ ತಯಾರಿಸುವಾಗ ಉಪ್ಪಿನ ಪ್ರಮಾಣ ಕಡಿಮೆ ಮಾಡಬೇಕು. ಊಟದ ಮೇಜಿನ ಮೇಲೆ ರುಚಿ ನೋಡದೆ ಹೆಚ್ಚುವರಿ ಉಪ್ಪು ಸೇರಿಸುವ ಅಭ್ಯಾಸ ಬಿಡಬೇಕು. ಸಂಸ್ಕರಿಸಿದ, ಇನ್ಸ್‌ಟಂಟ್ ಹಾಗೂ ಪ್ಯಾಕ್ ಮಾಡಿದ ಆಹಾರಗಳ ಖರೀದಿ ಕಡಿಮೆ ಮಾಡಿ, ಕೊಳ್ಳುವಾಗ ಲೇಬಲ್‌ನಲ್ಲಿರುವ சோಡಿಯಂ ಪ್ರಮಾಣವನ್ನು ಗಮನಿಸಬೇಕು. ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಕಡಿಮೆ ಉಪ್ಪಿನ ಆಹಾರ ನೀಡುವುದು ಹಾಗೂ ಕಿಡ್ನಿ ಅಥವಾ ಬಿಪಿ ಸಮಸ್ಯೆ ಇರುವವರು ವೈದ್ಯರ ಸಲಹೆ ಮೇರೆಗೆ 'Low-sodium' ಉಪ್ಪು ಬಳಸುವುದು ಸೂಕ್ತ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಹೋಟೆಲ್, ರೆಸ್ಟೋರೆಂಟ್ ಮತ್ತು ಸ್ಟ್ರೀಟ್ ಫುಡ್‌ಗಳಿಗೆ ಚಾಟಿ: ಆಹಾರ ಉದ್ಯಮದಲ್ಲಿ ಪ್ರಮುಖ ಪಾತ್ರ ವಹಿಸುವ ಹೋಟೆಲ್, ರೆಸ್ಟೋರೆಂಟ್ ಹಾಗೂ ಸ್ಟ್ರೀಟ್ ಫುಡ್ ಮಾರಾಟಗಾರರಿಗೆ ವಿಶೇಷ ನಿರ್ದೇಶನ ನೀಡಲಾಗಿದೆ. ಊಟದ ಮೇಜಿನ ಮೇಲೆ ಅನಗತ್ಯವಾಗಿ ಉಪ್ಪಿನ ಡಬ್ಬಿ (Salt Shakers) ಇಡುವುದನ್ನು ನಿರುತ್ಸಾಹಗೊಳಿಸಬೇಕು. ಅಡುಗೆ ಸಿಬ್ಬಂದಿಗೆ ಕಡಿಮೆ ಉಪ್ಪು ಬಳಸಿ ರುಚಿಕರ ಅಡುಗೆ ಮಾಡುವ ತರಬೇತಿ ನೀಡಬೇಕು. ಗ್ರಾಹಕರಿಗೆ 'ಉಪ್ಪು ಕಡಿಮೆ ಬಳಸಿ - ಆರೋಗ್ಯ ಕಾಪಾಡಿ' ಎಂಬ ಜಾಗೃತಿ ಸಂದೇಶಗಳನ್ನು ಪ್ರದರ್ಶಿಸುವುದರ ಜೊತೆಗೆ ಆರೋಗ್ಯಕರ ಹಾಗೂ ಕಡಿಮೆ ಸೋಡಿಯಂ ಹೊಂದಿರುವ ಆಹಾರದ ಆಯ್ಕೆಗಳನ್ನು ಮೆನುವಿನಲ್ಲಿ ನೀಡುವಂತೆ ಸೂಚಿಸಲಾಗಿದೆ.
ಪ್ಯಾಕೇಜ್ಡ್ ಫುಡ್ ಹಾಗೂ ಉಪ್ಪು ತಯಾರಕರಿಗೆ ಸೂಚನೆ: ಪ್ಯಾಕ್ ಮಾಡಿದ ಆಹಾರ ತಯಾರಕರು ತಮ್ಮ ಉತ್ಪನ್ನಗಳಲ್ಲಿ ಸೋಡಿಯಂ ಪ್ರಮಾಣವನ್ನು ಹಂತ ಹಂತವಾಗಿ ಕಡಿಮೆ ಮಾಡಲು ಸೂಚಿಸಲಾಗಿದೆ. ಆಹಾರ ಸುರಕ್ಷತೆ ಮತ್ತು FSSAI ಮಾನದಂಡಗಳಿಗೆ ಧಕ್ಕೆ ಬಾರದಂತೆ ಸೋಡಿಯಂಗೆ ಪರ್ಯಾಯ ತಾಂತ್ರಿಕ ಆಯ್ಕೆಗಳನ್ನು ಬಳಸಬೇಕು ಮತ್ತು ಉತ್ಪನ್ನದ ಲೇಬಲ್‌ನಲ್ಲಿ ಪೌಷ್ಟಿಕಾಂಶದ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿಸಬೇಕು. ಉಪ್ಪು ತಯಾರಿಕಾ ಘಟಕಗಳು 'Low-sodium' ಅಥವಾ 'Iodised low-sodium' ಉಪ್ಪಿನ ಬದಲಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಮತ್ತು ಸರ್ಕಾರದ ಈ ಆರೋಗ್ಯ ಅಭಿಯಾನಕ್ಕೆ ಕೈಜೋಡಿಸಲು ಮನವಿ ಮಾಡಲಾಗಿದೆ.
ಶಾಲೆಗಳಲ್ಲಿ ಆರೋಗ್ಯಕರ ಆಹಾರ ಅಭ್ಯಾಸಕ್ಕೆ ಆದ್ಯತೆ: ಮಕ್ಕಳಲ್ಲಿ ಸಣ್ಣ ವಯಸ್ಸಿನಲ್ಲೇ ಸದ್ಬಳಕೆಯ ಅಭ್ಯಾಸ ಬೆಳೆಸಲು ಶಾಲಾ-ಕಾಲೇಜುಗಳಿಗೆ ವಿಶೇಷ ಜವಾಬ್ದಾರಿ ನೀಡಲಾಗಿದೆ. ಶಾಲಾ ಬಿಸಿಯೂಟ ಹಾಗೂ ಕ್ಯಾಂಟೀನ್ ಸ್ನ್ಯಾಕ್ಸ್‌ನಲ್ಲಿ ಉಪ್ಪಿನ ಪ್ರಮಾಣವನ್ನು ಕಡ್ಡಾಯವಾಗಿ ಕಡಿಮೆ ಮಾಡಬೇಕು. ಶಾಲಾ ಆರೋಗ್ಯ ಕಾರ್ಯಕ್ರಮಗಳ ಮೂಲಕ ಮಕ್ಕಳು ಹಾಗೂ ಪೋಷಕರಿಗೆ ಉಪ್ಪು ಕಡಿತದ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸಬೇಕು. ಅಡುಗೆ ಸಿಬ್ಬಂದಿಗೆ ಸರಿಯಾದ ಪ್ರಮಾಣದ ಉಪ್ಪು ಬಳಕೆಯ ಬಗ್ಗೆ ಸೂಕ್ತ ತರಬೇತಿ ನೀಡುವಂತೆ ಇಲಾಖೆ ತನ್ನ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ.