ಬೆಳಗಾವಿ: ವಿಚ್ಛೇದನ (Divorce) ನೀಡುವಂತೆ ಪತ್ನಿ ಕೇಳಿದ್ದಕ್ಕೆ ಕೋಪಗೊಂಡ ಪತಿಯೊಬ್ಬ ಆಕೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಬೈಲಹೊಂಗಲ ತಾಲೂಕಿನ ಅಮಟೂರ ಗ್ರಾಮದ ಬಳಿ ನಡೆದಿದೆ. ಬೈಲಹೊಂಗಲದ ಗೊಲ್ಲರ ಓಣಿ ನಿವಾಸಿ ಲಕ್ಷ್ಮಿ ಮಾಡಮಗೇರಿ (31) ಕೊಲೆಯಾದ ದುರ್ದೈವಿ. ಘಟನೆ ಬಳಿಕ ಪರಾರಿಯಾಗಿರುವ ಪತಿ ರಾಜು ಮಾಡಮಗೇರಿ ಆರೋಪಿಯಾಗಿದ್ದಾನೆ.
ಐದು ವರ್ಷಗಳ ಹಿಂದೆ ರಾಜು ಹಾಗೂ ಲಕ್ಷ್ಮಿ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಇಬ್ಬರ ನಡುವೆ ಕೌಟುಂಬಿಕ ಮನಸ್ತಾಪ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಲಕ್ಷ್ಮಿ ವಿಚ್ಛೇದನ ನೀಡುವಂತೆ ಪತಿಯನ್ನು ಒತ್ತಾಯಿಸುತ್ತಿದ್ದಳು. ಇದರಿಂದ ಆಕ್ರೋಶಗೊಂಡಿದ್ದ ರಾಜು, ಪತ್ನಿಯನ್ನು ಮಟ್ಟಹಾಕಲು ಸಂಚು ರೂಪಿಸಿದ್ದನು.
ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಲಕ್ಷ್ಮಿಗೆ ಮನೆಗೆ ಡ್ರಾಪ್ ನೀಡುವುದಾಗಿ ನಂಬಿಸಿದ ರಾಜು, ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಇಬ್ಬರ ನಡುವೆ ಜಗಳ ನಡೆದಿದ್ದು, ರಾಜು ಆಕೆಯ ತಲೆಗೆ ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿ ರಾಜು ಪತ್ತೆಗೆ ಬೈಲಹೊಂಗಲ ಪೊಲೀಸ್ ಠಾಣೆಯ ಸಿಬ್ಬಂದಿ ತೀವ್ರ ಶೋಧ ನಡೆಸುತ್ತಿದ್ದಾರೆ.