ನವರಾತ್ರಿ ಹಬ್ಬದ ಸುಸಂದರ್ಭದಲ್ಲಿ ರಾಜ್ಯದ 'ಗೃಹಲಕ್ಷ್ಮಿ' ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಯೋಜನೆಯ ಪರಿಷ್ಕರಣೆಯ ಕಸರತ್ತು ಒಂದೆಡೆ ನಡೆಯುತ್ತಿದ್ದರೂ, ಹಬ್ಬದ ಆಚರಣೆಗೆ ಅನುಕೂಲವಾಗುವಂತೆ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 33ನೇ ಕಂತಿನ ಹಣವನ್ನು ತಕ್ಷಣವೇ ಜಮೆ ಮಾಡಲು ಆರ್ಥಿಕ ಇಲಾಖೆ ಹಸಿರು ನಿಶಾನೆ ತೋರಿಸಿದೆ.
ಸರ್ಕಾರವು ಪ್ರಸ್ತುತ ಗೃಹಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಲು ಮುಂದಾಗಿದೆ. ಆದರೆ, ಈ ಪರಿಷ್ಕರಣಾ ಪ್ರಕ್ರಿಯೆಯ ನೆಪದಲ್ಲಿ ಬಡ ಮಹಿಳೆಯರಿಗೆ ತಲುಪಬೇಕಾದ ಯೋಜನೆಯ ಹಣವನ್ನು ಯಾವುದೇ ಕಾರಣಕ್ಕೂ ತಡೆಹಿಡಿಯಬಾರದು ಎಂದು ಸಿಎಂ ಸೂಚನೆ ನೀಡಿದ್ದಾರೆ. ಹಬ್ಬದ ವೇಳೆಯಲ್ಲಿ ಮಹಿಳೆಯರಿಗೆ ಆರ್ಥಿಕ ನೆರವು ಸಿಗಬೇಕು ಎಂಬ ಉದ್ದೇಶದಿಂದ, ಪರಿಷ್ಕರಣೆಯ ಮಧ್ಯೆಯೂ 33ನೇ ಕಂತಿನ ದುಡ್ಡನ್ನು ತಕ್ಷಣವೇ ಬಿಡುಗಡೆ ಮಾಡಲು ಹಣಕಾಸು ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಇದರಿಂದಾಗಿ ರಾಜ್ಯದ ಲಕ್ಷಾಂತರ ಗೃಹಲಕ್ಷ್ಮಿಯರ ಅಕೌಂಟ್‌ಗೆ ಶೀಘ್ರದಲ್ಲೇ ಹಣ ಜಮೆಯಾಗಲಿದ್ದು, ನವರಾತ್ರಿ ಹಬ್ಬದ ಸಂಭ್ರಮ ದ್ವಿಗುಣಗೊಂಡಿದೆ.