ಬೆಳಗಾವಿ: ಇಲ್ಲಿನ ಪ್ರಸಿದ್ಧ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೌಕರರು ಮತ್ತು ಸಿಬ್ಬಂದಿಯ ಭವಿಷ್ಯ ನಿಧಿ (ಪಿಎಫ್) ಹಾಗೂ ಎನ್‌ಪಿಎಸ್ (ರಾಷ್ಟ್ರೀಯ ಪಿಂಚಣಿ ಯೋಜನೆ) ಹಣವನ್ನು ಅಕ್ರಮವಾಗಿ ದುರ್ಬಳಕೆ ಮಾಡಿಕೊಂಡಿರುವ ಗಂಭೀರ ಆರೋಪದಡಿಯಲ್ಲಿ ಸಹಾಯಕ ಕುಲಸಚಿವ ಸೇರಿದಂತೆ ಮೂವರನ್ನು ಕಾಕತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಹೆಚ್.ಎಂ. ಮುರುಗೇಶ್ ಹಾಗೂ ಎಫ್‌ಡಿಎ ಅಧಿಕಾರಿಗಳಾದ ಮಹೇಶ ವಾಲಿ ಮತ್ತು ಸಂದೀಪ್ ಬುರ್ಲಿ ಎಂದು ಗುರುತಿಸಲಾಗಿದೆ.
2020 ರಿಂದ 2023ರ ಅವಧಿಯಲ್ಲಿ ವಿಶ್ವವಿದ್ಯಾಲಯದ ಬ್ಯಾಂಕ್ ಖಾತೆಯಲ್ಲಿದ್ದ ಸಿಬ್ಬಂದಿಯ ಸುಮಾರು 32 ಲಕ್ಷ ರೂಪಾಯಿ ಪಿಎಫ್ ಮತ್ತು ಎನ್‌ಪಿಎಸ್ ಹಣಕ್ಕೆ ಕನ್ನ ಹಾಕಲಾಗಿದೆ. ಆರೋಪಿಗಳು ಈ ಹಣವನ್ನು ತಮ್ಮ ಸ್ವಂತ ಖಾತೆಗಳಿಗೆ ಹಾಗೂ ಇತರ ಖಾಸಗಿ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಅಷ್ಟೇ ಅಲ್ಲದೆ, ವಿವಿ ಬ್ಯಾಂಕ್ ಖಾತೆಯಿಂದ ಫರ್ನಿಚರ್ ಶಾಪ್ ಒಂದಕ್ಕೂ ಹಣ ವರ್ಗಾವಣೆ ಮಾಡಿ, ಅದನ್ನು ಸ್ವಂತ ಬಳಕೆಗಾಗಿ ಉಪಯೋಗಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
2024ರಲ್ಲಿ ಆರೋಪಿಗಳು ವಿವಿಯ ಆನ್‌ಲೈನ್ ಬ್ಯಾಂಕ್ ಖಾತೆಯನ್ನು ಮುಚ್ಚಿಸಿದ್ದು (ಕ್ಲೋಸ್), ಈ ಕುರಿತು ಪರಿಶೀಲನೆ ನಡೆಸಿದಾಗ ಕಳೆದ ಮೂರು ವರ್ಷಗಳಿಂದ ನಡೆದಿದ್ದ ಈ ಸಾಲಾವಳಿ ಅಕ್ರಮ ಬೆಳಕಿಗೆ ಬಂದಿದೆ. ತಕ್ಷಣವೇ ವಿವಿ ಆಡಳಿತ ಮಂಡಳಿಯು ಕಾಕತಿ ಪೊಲೀಸ್ ಠಾಣೆಗೆ ದೂರು ನೀಡಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದು, ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಬೆಳಗಾವಿ ಪೊಲೀಸ್ ಕಮಿಷನರ್ ಪ್ರಕಾಶ್ ನಿಕ್ಕಂ ಅವರು, "ಪ್ರಕರಣದ ಆಡಿಟ್ ಪ್ರಕ್ರಿಯೆ ಇನ್ನೂ ನಡೆಯುತ್ತಿದ್ದು, ತನಿಖೆಯನ್ನು ತೀವ್ರಗೊಳಿಸಲಾಗಿದೆ. ಈ ಅಕ್ರಮದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದರೆ ಅವರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.