ಹಾಸನ: ಪತ್ನಿಯ ಅನೈತಿಕ ಸಂಬಂಧ ಹಾಗೂ ಆಕೆಯ ನಡವಳಿಕೆಯಿಂದ ತೀವ್ರ ಮನನೊಂದ ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿ ನಡೆದಿದೆ. ಬೆಳಗಿಹಳ್ಳಿ ಗ್ರಾಮದ ನಿವಾಸಿ ದೊರೆ (27) ಮೃತಪಟ್ಟ ದುರ್ದೈವಿಯಾಗಿದ್ದು, ಈ ಘಟನೆ ಸ್ಥಳೀಯವಾಗಿ ತೀವ್ರ ಆಘಾತ ಮೂಡಿಸಿದೆ.
ಮೃತ ದೊರೆ ಅವರು ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ಆದರೆ, ಇತ್ತೀಚೆಗೆ ದಂಪತಿ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಕಳೆದ 15 ದಿನಗಳ ಹಿಂದೆ ಪತ್ನಿ ಮನೆ ಬಿಟ್ಟು ತವರು ಮನೆಗೆ ತೆರಳಿದ್ದಳು. ಇದರಿಂದ ತೀವ್ರ ಖಿನ್ನತೆಗೊಳಗಾಗಿದ್ದ ದೊರೆ, ಕೊನೆಗೆ ವಿಷ ಸೇವಿಸಿ ತಮ್ಮ ಜೀವನ ಕೊನೆಗೊಳಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ದೊರೆ ಅವರು ವಿಡಿಯೋ ದಾಖಲಿಸಿದ್ದು, ಅದರಲ್ಲಿ ತಮ್ಮ ಪತ್ನಿಯ ಪರಪುರುಷನೊಂದಿಗಿನ ಅಕ್ರಮ ಸಂಬಂಧವೇ ಈ ನಿರ್ಧಾರಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. "ನಾನು ಆಕೆಯನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದೆ. ಆದರೂ ನನಗೆ ದ್ರೋಹ ಬಗೆದಿದ್ದಾಳೆ. ಈ ವಿಚಾರ ಆಕೆಯ ಪೋಷಕರಿಗೆ ತಿಳಿದಿದ್ದರೂ ಮಗಳ ಪರವಾಗಿಯೇ ಮಾತನಾಡುತ್ತಿದ್ದರು. ಜೊತೆಗೆ ನನ್ನ ಮೇಲೆ ಮಾಟ-ಮಂತ್ರ ಮಾಡಿಸಿದ್ದಾರೆ" ಎಂದು ಕಣ್ಣೀರಿಡುತ್ತಾ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ವಿಡಿಯೋದಲ್ಲಿ ಕರ್ನಾಟಕ ಪೊಲೀಸರಿಗೆ ಮನವಿ ಮಾಡಿರುವ ಅವರು, "ನನ್ನ ಸಾವಿನ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬೇಡಿ. ಪತ್ನಿಯ ಫೋನ್ ಕಾಲ್ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸಿ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ" ಎಂದು ಮನವಿ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಕ್ಷ್ಯದ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.