ಮಂಡ್ಯ : ಸಾರ್ವಜನಿಕ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಜಾ ಸೇವೆ ಇಲಾಖೆಯನ್ನು ತೆರೆದಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಹೇಳಿದರು.
ಮದ್ದೂರು ತಾಲೂಕು ಬೆಸಗರಹಳ್ಳಿ ಗ್ರಾಮದ ಶ್ರೀ ರೇಣುಕಾ ಎಲ್ಲಮ್ಮ ಸಮುದಾಯ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ಪ್ರಪ್ರಥಮವಾಗಿ ಪ್ರಜಾ ಸೇವೆ ಆಂದೋಲನದಂತಹ ವಿನೂತನ ಕಾರ್ಯಕ್ರಮ ರೂಪಿಸಿ, ಇದಕ್ಕಾಗಿ ಪ್ರತ್ಯೇಕ ಇಲಾಖೆ ಆರಂಭಿಸಿ ತನ್ಮೂಲಕ ಜಾರಿಗೆ ತಂದಿದ್ದಾರೆ. ಇದರಿಂದ ಗ್ರಾಮೀಣ ಜನತೆಗೆ ಹೆಚ್ಚು ಅನುಕೂಲವಾಗಲಿದೆ. ಸರ್ಕಾರಿ ಸೇವೆಗಳು ಮತ್ತು ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜನರು ತಮ್ಮ ಸಮಸ್ಯೆ ಹಾಗೂ ಸವಲತ್ತುಗಳಿಗೆ ಅರ್ಜಿಗಳನ್ನು ಹಿಡಿದು ಕಛೇರಿಯಿಂದ ಕಚೇರಿಗಳಿಗೆ ಅಲೆದಾಡಬಾರದು. ಬದಲಿಗೆ ಸರ್ಕಾರಿ ಆಡಳಿತವೇ ಜನರ ಮನೆ ಬಾಗಿಲಿಗೆ ಹೋಗಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎನ್ನುವ ಸದ್ದುದ್ದೇಶದಿಂದ ನಿಮ್ಮಗಳ ಮನೆ ಬಾಗಿಲಿಗೆ ಬಂದಿದೆ ಎಂದರು.
ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದೇಶದ ಮೇರೆಗೆ ರಾಜ್ಯದಲ್ಲಿರುವ ನಿರ್ಗತಿಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಕಟ್ಟು ನಿಟ್ಟಿನ ಆದೇಶ ನೀಡಿದ್ದಾರೆ. ಹೀಗಾಗಿ ತಾಲೂಕಿನಲ್ಲಿ ಸಾಕಷ್ಟು ನಿರ್ಗತಿಕರು ಇದ್ದು, ಅವರಿಗೆ ಮುಂದಿನ ದಿನಗಳಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಮೂಲಕ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಬೆಸಗರಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಸ್ಮಶಾನದ ಜಾಗದ ಕೊರತೆ ಇದೆ. ಈಗಾಗಲೇ ಕೆಲವು ಕಡೆ ಸರ್ವೆ ಕಾರ್ಯ ಮಾಡಿಸಲಾಗಿದ್ದು, ಎರಡು ಮೂರು ತಿಂಗಳಲ್ಲಿ ಸ್ಮಶಾನ ಭೂಮಿ ಕಲ್ಪಿಸಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್ ಮಾತನಾಡಿ, ಗ್ರಾಮೀಣರು ತಮ್ಮ ವಿವಿಧ ಸಮಸ್ಯೆಗಳಿಗಾಗಿ ತಾಲೂಕು, ಜಿಲ್ಲಾ ಕೇಂದ್ರಗಳಿಗೆ ಅಲೆದಾಡುವ ಪರಿಸ್ಥಿತಿ ತಪ್ಪಿಸಿ ಸ್ಥಳೀಯವಾಗಿಯೇ ಅಗತ್ಯ ಸೇವೆ ಮತ್ತು ಮಾಹಿತಿಯನ್ನು ಪಡೆಯುವಂತಾಗಬೇಕೆಂಬ ಉದ್ದೇಶ ಈ ಪ್ರಜಾ ಸೇವಾ ಆಂದೋಲನದ ಗುರಿಯಾಗಿದೆ. ಈಗಾಗಲೇ ಪ್ರತಿ ಶನಿವಾರ ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಇನ್ನು ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ, ಸೆಸ್ಕಾಂ, ಸಾರಿಗೆ, ಆರೋಗ್ಯ, ಅರಣ್ಯ, ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ 160 ಅರ್ಜಿ ಸಲ್ಲಿಕೆಯಾದವು. ಕೆಲವು ಅರ್ಜಿಗಳನ್ನು ಸ್ಥಳದಲ್ಲೆ ವಿಲೇವಾರಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಾಪಂ ಇಓ ರಾಮಲಿಂಗಯ್ಯ, ಬಿಇಓ ಎಸ್.ಬಿ.ಧನಂಜಯ, ಟಿಎಚ್ಓ ಡಾ.ರವಿಶಂಕರ್, ಸೆಸ್ಕಾಂ ಇಇ ಶಿವಕುಮಾರ್, ವಲಯ ಅರಣ್ಯಾಧಿಕಾರಿ ಗವಿಯಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್, ಪಶು ಇಲಾಖೆ ಸಹಾಯಕ ನಿರ್ದೇಶಕ ಗೋವಿಂದ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ