LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಜಾಸೇವಾ ಆಂದೋಲನದಲ್ಲಿ ಸ್ಥಳದಲ್ಲೇ ಅಹವಾಲು ಸ್ವೀಕಾರ: ಶಿವಮೊಗ್ಗ ಡಿಸಿ ಪ್ರಭುಲಿಂಗ ಕವಳಿಕಟ್ಟಿ

ಶಿವಮೊಗ್ಗ : ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳು ಹಾಗೂ ಸೇವೆಗಳನ್ನು ಕಾಲಮಿತಿಯಲ್ಲಿ ತಲುಪಿಸುವುದು ಆಡಳಿತದ ಪ್ರಾಥಮಿಕ ಕರ್ತವ್ಯ. ಜನಸಾಮಾನ್ಯರು ಸಣ್ಣಪುಟ್ಟ ಕೆಲಸಗಳು ಹಾಗೂ ದಾಖಲೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, 'ಆಡಳಿತವೇ ಜನರ ಮನೆ ಬಾಗಿಲಿಗೆ' ತಲುಪಬೇಕು ಎಂಬ ಉದ್ದೇಶದಿಂದ ಈ "ಪ್ರಜಾಸೇವಾ ಆಂದೋಲನ" ಸಭೆ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಿವಮೊಗ್ಗ ಮಹಾನಗರಪಾಲಿಕೆಯ ಜಂಟಿ ಸಹಯೋಗದಲ್ಲಿ ಮಹಾನಗರಪಾಲಿಕೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶಿವಮೊಗ್ಗ ತಾಲೂಕಿನ ಕಸಬಾ ಹೋಬಳಿ ಮಟ್ಟದ "ಪ್ರಜಾಸೇವಾ ಆಂದೋಲನ ಸಭೆ"ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರಿಂದ ಸ್ವೀಕರಿಸಲಾಗುವ ಅರ್ಜಿಗಳನ್ನು ನಿರ್ಲಕ್ಷಿಸದೆ, ನಿಯಮಾವಳಿಗಳಂತೆ ಸಾಧ್ಯವಾದಷ್ಟು ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಬೇಕು. ತಕ್ಷಣಕ್ಕೆ ಪರಿಹರಿಸಲಾಗದ ಹಾಗೂ ಹೆಚ್ಚಿನ ಪರಿಶೀಲನೆ ಅಗತ್ಯವಿರುವ ಅರ್ಜಿಗಳಿಗೆ ಕಾಲಮಿತಿ ನಿಗದಿಪಡಿಸಿ, ನಿಗದಿತ ಸಮಯದೊಳಗೆ ಅರ್ಜಿದಾರರಿಗೆ ಸೂಕ್ತ ಉತ್ತರ ಅಥವಾ ಪರಿಹಾರ ಒದಗಿಸಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಲ್ಲದೆ, ವಿವಿಧ ಇಲಾಖೆಗಳು ಪರಸ್ಪರ ಸಮನ್ವಯತೆ ಸಾಧಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ, "ವಿಳಂಬವಾಗದಂತೆ ತ್ವರಿತವಾಗಿ ಹಾಗೂ ಸಕಾಲದಲ್ಲಿ ಸೇವೆ ನೀಡಿ ಜನರ ಜೀವನಮಟ್ಟ ಸುಧಾರಣೆ ಮಾಡುವುದು ಈ ಆಂದೋಲನದ ಮುಖ್ಯ ಉದ್ದೇಶ. ಹೋಬಳಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಈ ಸಭೆಗಳು ನಡೆಯುತ್ತಿದ್ದು, ಇಂದು ಕಸಬಾ ಹೋಬಳಿ ಮಟ್ಟದ ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ಥಳದಲ್ಲೇ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ" ಎಂದರು.

ಸಾರ್ವಜನಿಕರು ಮಂಡಿಸಿದ ಪ್ರಮುಖ ಸಮಸ್ಯೆಗಳು ಹಾಗೂ ನೀಡಿದ ಸೂಚನೆಗಳು:

ಖಾಲಿ ಜಾಗ, ಪಾರ್ಕ್ ಒತ್ತುವರಿ ಮತ್ತು ಮೂಲಭೂತ ಸೌಕರ್ಯ: ಮಂಜುನಾಥ ಬಡಾವಣೆಯ (ವಾರ್ಡ್ 27) ಸುವರ್ಣಾ ನಾಗರಾಜ್ ಅವರು, ಬಡಾವಣೆಯ ಖಾಲಿ ಸರ್ಕಾರಿ ಜಾಗದಲ್ಲಿ ಮರಳು ಇತ್ಯಾದಿ ವಸ್ತುಗಳನ್ನು ಹಾಕುತ್ತಿರುವುದನ್ನು ತಡೆಯಲು 'ಸರ್ಕಾರಿ ಜಾಗ'ವೆಂದು ಫಲಕ ಅಳವಡಿಸಲು, ವಾರ್ಡ್ ನ  ಪಾರ್ಕ್ ಒತ್ತುವರಿ ಮಾಡಲಾಗಿದ್ದು ಇದನ್ನು ತೆರವುಗೊಳಿಸಬೇಕು. ಜಲಮಂಡಳಿ ಕೆಲಸಗಳಿಂದರಸ್ತೆ ಗುಂಡಿ ಬಿದ್ದಿರುವುದು, ಬೀದಿ ದೀಪ ವ್ಯವಸ್ಥೆ ಇಲ್ಲದಿರುವುದು, ಯುಜಿಡಿ ನೀರು ಚರಂಡಿಗೆ ಹರಿಯುವುದು ಹಾಗೂ ಮೆಸ್ಕಾಂ ಸಂಪರ್ಕದಲ್ಲಿ ಮಧ್ಯವರ್ತಿಗಳ ಹಾವಳಿ ಕುರಿತು ಗಮನಸೆಳೆದರು. ಈ ವೇಳೆ ಜಿಲ್ಲಾಧಿಕಾರಿಗಳು, ಸಾರ್ವಜನಿಕ ಸ್ಪಂದನೆಗೆ ಅಧಿಕಾರಿಗಳು ಉದಾಸೀನ ತೋರಬಾರದೆಂದು ಜಲಮಂಡಳಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಇಂತಹ ವರ್ತನೆ ಪುನರಾವರ್ತನೆಯಾದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು. 

ಅಪಾಯಕಾರಿ ಮರಗಳ ಟ್ರಿಮ್ಮಿಂಗ್: ಗಾಡಿಕೊಪ್ಪದ ಮಧುಸೂದನ್ ಹಾಗೂ ಸಾರ್ವಜನಿಕರು ಶಾಲೆಗಳ ಬಳಿ ಮತ್ತು ನಗರ ಮಧ್ಯಭಾಗದಲ್ಲಿ ಅಪಾಯಕಾರಿ ಮರಗಳ ರೆಂಬೆಗಳನ್ನು ಕತ್ತರಿಸುವಂತೆ (ಟ್ರಿಮ್) ಹಲವು ಬಾರಿ ಮನವಿ ಮಾಡಿದರೂ ಶಂಕರ ಅರಣ್ಯ ವಲಯ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ದೂರಿದರು. ಇದಕ್ಕೆ  ಡಿಸಿಯವರು, ಕೂಡಲೇ ಮರದ ಕೊಂಬೆಗಳನ್ನು ಟ್ರಿಮ್ ಮಾಡಲು ಸೂಚಿಸಿ, ಭವಿಷ್ಯದಲ್ಲಿ ಇದರಿಂದ ಏನಾದರೂ ಅಪಾಯ ಸಂಭವಿಸಿದರೆ ಸಂಬಂಧಪಟ್ಟವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು. 

ಇಲಾಖೆಗಳ ನಡುವಿನ ಸಮನ್ವಯತೆ ಮತ್ತು ಇ-ಕೆವೈಸಿ ಸಮಸ್ಯೆ: ಬಸವನಗುಡಿಯ ರವಿಪ್ರಸಾದ್ ಮಾತನಾಡಿ, ಕೆಇಬಿ ಕಂಬ ತೆರವು, ಬೀದಿ ದೀಪಗಳ ಅಭಾವ, ಜಯನಗರ-ಬಸವನಗುಡಿ ಭಾಗದಲ್ಲಿ ಕೇಬಲ್ ಡ್ಯಾಮೇಜ್/ಬ್ಲಾಸ್ಟ್ ಸಮಸ್ಯೆ ಹಾಗೂ ವಿವಿಧ ಇಲಾಖೆಗಳ ನಡುವೆ ಸಮನ್ವಯತೆಯ ಕೊರತೆಯನ್ನು ಪ್ರಸ್ತಾಪಿಸಿದರು. ಜೊತೆಗೆ, ಹಿರಿಯ ನಾಗರಿಕರಿಗೆ ಪಡಿತರ ಚೀಟಿ ಇ-ಕೆವೈಸಿ  ಮಾಡಿಸಲು ಆಗುತ್ತಿರುವ ತೊಂದರೆಗಳನ್ನು ವಿವರಿಸಿದರು. ಜಿಲ್ಲಾಧಿಕಾರಿಗಳು ಈ ಬಗ್ಗೆ ಇಲಾಖೆಗಳ ಸಮನ್ವಯತೆ ಹಾಗೂ ಇ-ಕೆವೈಸಿ ಸರಳೀಕರಣಕ್ಕೆ ಕ್ರಮ ವಹಿಸುವುದಾಗಿ ತಿಳಿಸಿದರು. 

ಆರೋಗ್ಯ, ಶೌಚಾಲಯ ಮತ್ತು ಮೂಲಸೌಕರ್ಯದ ಕೊರತೆ: ಬಾಪೂಜಿನಗರ: ನೂರುಲ್ಲಾ ಅವರು ಚರಂಡಿ/ಮೋರಿ ಮೇಲೆ ಶೌಚಾಲಯ ನಿರ್ಮಿಸಲಾಗಿದೆ ಹಾಗೂ ತರಕಾರಿ ಮಾರಾಟ ಮಾಡುತ್ತಿರುವ ಬಗ್ಗೆ ದೂರಿದರು.

ಜೆಪಿಎನ್ ನಗರ ಹಾಗೂ ಟಿಪ್ಪು ನಗರ: ನಯಾಜ್ ಅವರು ಯುಜಿಡಿ ಸಮಸ್ಯೆ ಹಾಗೂ ಪದ್ಮಾ ಟಾಕೀಸ್ ರಸ್ತೆಯ ದುರಸ್ತಿ ಬಗ್ಗೆ , ಶಾಲಾ ಕೊಠಡಿ ನಿರ್ಮಾಣದ ಬಗ್ಗೆ ಅರ್ಜಿ ಸಲ್ಲಿಸಿದರು.

ಕಲ್ಲಹಳ್ಳಿ (ವಿನೋಬನಗರ 2ನೇ ಹಂತ): ನಾಗರಾಜ್ ಅವರು ತಮ್ಮ ನಿವೇಶನದ ಖಾತೆ ಹಾಗೂ ಇ-ಖಾತಾ ಆಗದಿರುವ ಬಗ್ಗೆ ಮನವಿ ಸಲ್ಲಿಸಿದರು.

ತ್ಯಾಜ್ಯ ಮತ್ತು ವೆಟರ್ನರಿ ಆಸ್ಪತ್ರೆ: ಗಾಡಿಕೊಪ್ಪ ವೃತ್ತದ ಬಳಿಯ ಖಾಲಿ ನಿವೇಶನದಲ್ಲಿ ತ್ಯಾಜ್ಯ ಎಸೆಯುತ್ತಿದ್ದು, ಇದರಿಂದ ತಮ್ಮ‌ ಮನೆಗೆ ತೊಂದರೆಯಾಗುತ್ತಿದೆ. ತ್ಯಾಜ್ಯ ತೆರವುಗೊಳಿಸುವಂತೆ ಸಾರ್ವಜನಿಕರೋರ್ವರು ಮನವಿ ಮಾಡಿದರು.

ಗೋವಿಂದ ರಾಜ್ ಎಂಬುವರು ಗಾಡಿಕೊಪ್ಪದಲ್ಲಿ ಪಶು ಆಸ್ಪತ್ರೆ ಆರಂಭಿಸಲು ಕೋರಿದರು. ಮೆಗ್ಗಾನ್ ಆಸ್ಪತ್ರೆಗೆ ಹೋಮಿಯೋಪತಿ ವೈದ್ಯರನ್ನು ನೇಮಿಸುವಂತೆ ಸಾರ್ವಜನಿಕರು ವಿನಂತಿಸಿದರು.

ನಗರದ ಪಶ್ಚಿಮ ಭಾಗದ 10-12 ಮೊಹಲ್ಲಾಗಳಲ್ಲಿರುವ ಸುಮಾರು 65 ಸಾವಿರ ಮುಸ್ಲಿಂ ಸಮುದಾಯದ ಜನರಿಗೆ ಶವಸಂಸ್ಕಾರ ಮಾಡಲು ಕಬರ್ಸ್ತಾನ (ಸ್ಮಶಾನ) ಜಾಗದ ಅಭಾವವಿರುವ ಬಗ್ಗೆ ಮನವಿ ಸಲ್ಲಿಸಲಾಯಿತು. 

ನಾಯಿಗಳ ಹಾವಳಿ: ಶಿವಮೊಗ್ಗ ನಗರದ 35 ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಆಕ್ರಮಣಕಾರಿ ನಾಯಿಗಳನ್ನು ಡಾಗ್ ಕೇರ್ ಸೆಂಟರ್‌ಗೆ ವರ್ಗಾಯಿಸುವಂತೆ ಮಧು ಸೇರಿದಂತೆ ಹಲವು ಸಾರ್ವಜನಿಕರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತರು, ಸುಪ್ರೀಂ ಕೋರ್ಟ್ ಆದೇಶ ಹಾಗೂ ಎಬಿಸಿ ನಿಯಮಾವಳಿಗಳಂತೆ ಸೂಕ್ತ ಕ್ರಮ ವಹಿಸಲಾಗುವುದು ಎಂದರು. 

ವಿದ್ಯುತ್ ಸಂಪರ್ಕ: ತಿಲಕ್ ನಗರ 2ನೇ ತಿರುವಿನಲ್ಲಿ ಯುಜಿ ಸಂಪರ್ಕವಾಗಿ 5 ವರ್ಷಗಳಾಗಿದ್ದರೂ ಇಂದಿಗೂ ಲೈಟ್ ಕಂಬದಿಂದಲೇ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ ಎಂದು ಸ್ಥಳೀಯರು ದೂರಿದರು.

ಕೌಟುಂಬಿಕ ಆಸ್ತಿ ದೌರ್ಜನ್ಯ ದೂರು: ಶಿಕಾರಿಪುರದ ಉಷಾರಾಣಿ ಎಂಬುವರು ಕೌಟುಂಬಿಕ ಆಸ್ತಿ ವಿಚಾರದಲ್ಲಿ ತಾಯಿ-ಮಗಳಿಗೆ ದೌರ್ಜನ್ಯವಾಗುತ್ತಿದೆ ಎಂದು ಸಲ್ಲಿಸಿದ ಅರ್ಜಿಯನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಎಸಿ ಬಳಿ ಪ್ರಕರಣ ದಾಖಲಿಸುವಂತೆ ಸೂಚಿಸಿದರಲ್ಲದೆ, ಶಿಕಾರಿಪುರ ತಹಶೀಲ್ದಾರ್ ಜೊತೆ ದೂರವಾಣಿಯಲ್ಲಿ ಮಾತನಾಡಿ ತಕ್ಷಣ ಸ್ಪಂದಿಸುವಂತೆ ನಿರ್ದೇಶನ ನೀಡಿದರು. 
ಈ 'ಪ್ರಜಾಸೇವಾ ಆಂದೋಲನ' ಸಭೆಯಲ್ಲಿ ಲೇಔಟ್‌ಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ರಸ್ತೆ, ಚರಂಡಿ, ಇ-ಸ್ವತ್ತು, ಕೆರೆ ಒತ್ತುವರಿ ತೆರವು ಹಾಗೂ ವಿಧವಾ ವೇತನ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 53 ಅಹವಾಲು ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ತಹಸೀಲ್ದಾರ್ ರಾಜೀವ್ ಸೇರಿದಂತೆ ವಿವಿಧ ಜಿಲ್ಲಾ ಮತ್ತು ತಾಲೂಕು ಮಟ್ಟದ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಇನ್ಮೇಲೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಬಂದ್ : ಮೃತದೇಹ ಹಸ್ತಾಂತರಕ್ಕೆ ಶೀಘ್ರ ಹೊಸ ಪಾಲಿಸಿ!ಬೆಂಗಳೂರಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!BREAKING : ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್ : ಇನ್ಮುಂದೆ ರಶೀದಿಯಲ್ಲಿ ಔಷಧಗಳ ಬೆಲೆ ನಮೂದು ಕಡ್ಡಾಯ!🌺🌼🔱 ನವರಾತ್ರಿ ಮೊದಲನೇ ದಿನ – ಶ್ರೀ ಶೈಲಪುತ್ರಿ ದೇವಿ ಆರಾಧನೆ 🔱🌼🌺BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!