ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲಿ ಹೊತ್ತಿಕೊಂಡಿರುವ ಆಂತರಿಕ ಅಸಮಾಧಾನದ ಕಿಡಿ ಮತ್ತಷ್ಟು ತೀವ್ರಗೊಂಡಿದೆ. ಇತ್ತೀಚೆಗೆ ಸ್ವಪಕ್ಷದ ನಾಯಕರ ವಿರುದ್ಧವೇ ಬಹಿರಂಗ ವಾಗ್ದಾಳಿ ನಡೆಸಿ ಸಂಚಲನ ಮೂಡಿಸಿದ್ದ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ (ಸೂಡ) ಅಧ್ಯಕ್ಷ ಎಚ್.ಸಿ. ಸುಂದರೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ ಅವರಿಗೆ ಏಕವಚನದಲ್ಲಿ ಮಾತನಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಎತ್ತಿದ್ದ ಆಕ್ಷೇಪಗಳಿಗೆ ಇಂದಿಗೂ ಬದ್ಧನಾಗಿದ್ದೇನೆ ಎಂದು ಖಡಕ್ ಆಗಿ ಪುನರುಚ್ಚರಿಸಿದ್ದಾರೆ.
ಹಿರಿಯರಿಗೆ ವಿಷಾದ, ಬಂಗಾರಪ್ಪ ವಿರುದ್ಧ ಬದಲಾಗದ ನಿಲುವು:
ಸುದ್ದಿಗಾರರೊಂದಿಗೆ ಮಾತನಾಡಿದ ಸುಂದರೇಶ್, "ಕಿಮ್ಮನೆ ರತ್ನಾಕರ್ ಮತ್ತು ಮಂಜುನಾಥ್ ಗೌಡರು ನನಗಿಂತ ಹಿರಿಯರು. ಮಾತಿನ ಭರದಲ್ಲಿ ಅವರಿಗೆ ಏಕವಚನ ಬಳಕೆ ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಮಂಜುನಾಥ್ ಭಂಡಾರಿ ನನ್ನ ಕ್ಲಾಸ್‌ಮೇಟ್ . ಆದರೆ, ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ನಾನು ಎತ್ತಿರುವ ವಿಷಯಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಅವರಿಗೆ ಏಕವಚನ ಬಳಸಿದ್ದು ತಪ್ಪಿರಬಹುದು, ಆದರೆ ನನ್ನ ನಿಲುವುಗಳಿಗೆ ಈಗಲೂ ಬದ್ಧನಾಗಿದ್ದೇನೆ," ಎಂದಿದ್ದಾರೆ. ಅಲ್ಲದೆ, ಮುಖ್ಯಮಂತ್ರಿಗಳಿಗೆ ಪಕ್ಷದ ಕೆಲ ನಾಯಕರು ಮಾಡಿರುವ ತಪ್ಪುಗಳ ವಿಡಿಯೋ ಸಾಕ್ಷಿಗಳನ್ನು ತಲುಪಿಸುವುದಾಗಿ ಹೇಳಿದರು.
ಕೆಪಿಸಿಸಿ ನೋಟಿಸ್‌ಗೆ ಶೀಘ್ರವೇ ಉತ್ತರ:
ಕೆಪಿಸಿಸಿಯಿಂದ ತಮಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನೋಟಿಸ್‌ಗೆ ಉತ್ತರಿಸಲು ಒಂದು ವಾರ ಸಮಯ ನೀಡಲಾಗಿದೆ. ಬುಧವಾರ ಅಥವಾ ಗುರುವಾರ ಬೆಂಗಳೂರಿಗೆ ತೆರಳಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿ ಮಾಡಿ ವಿವರಣೆ ನೀಡಲಿದ್ದೇನೆ. ಸೂಡಾ ಕಾರ್ಯಕ್ರಮ ಮುಗಿದ ಬಳಿಕ ಪಕ್ಷ ಸೂಚಿಸಿದರೆ ರಾಜೀನಾಮೆ ನೀಡಲೂ ಸಿದ್ಧ," ಎಂದು ಸ್ಪಷ್ಟಪಡಿಸಿದರು.
ಸಂಗಮೇಶ್, ಗೋಪಾಲಕೃಷ್ಣಗೆ ಸಚಿವ ಸ್ಥಾನಕ್ಕೆ ಆಗ್ರಹ:
ಜಿಲ್ಲೆಯಲ್ಲಿ ಪಕ್ಷದ ಭವಿಷ್ಯದ ದೃಷ್ಟಿಯಿಂದ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಹಾಗೂ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ತಮ್ಮ ಬೇಡಿಕೆಯನ್ನು ಸುಂದರೇಶ್ ಸಮರ್ಥಿಸಿಕೊಂಡರು. "ಶಿವಮೊಗ್ಗ ಜಿಲ್ಲೆಗೆ ಸಂಗಮೇಶ್ವರ್ ಅವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಿ, ಬೇಳೂರು ಗೋಪಾಲಕೃಷ್ಣ ಅವರಿಗೆ ಕಾರವಾರ ಜಿಲ್ಲಾ ಉಸ್ತುವಾರಿ ನೀಡಬೇಕು. ಇದರಿಂದ ಭದ್ರಾವತಿ, ಹೊಳೆಹೊನ್ನೂರು, ಶಿವಮೊಗ್ಗ ಹಾಗೂ ಶಿಕಾರಿಪುರ ಭಾಗಗಳಲ್ಲಿ ಪಕ್ಷ ಬಲಗೊಳ್ಳಲಿದೆ," ಎಂದು ಪ್ರತಿಪಾದಿಸಿದರು.
ತೀರ್ಥಹಳ್ಳಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ:
ತಮ್ಮ ಹೇಳಿಕೆಗಳ ವಿರುದ್ಧ ಕಿಮ್ಮನೆ ರತ್ನಾಕರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಸೋಮವಾರ ಬೆಳಗ್ಗೆ 11 ಗಂಟೆಗೆ ತೀರ್ಥಹಳ್ಳಿಗೆ ತೆರಳುವುದಾಗಿ ಘೋಷಿಸಿದರು. "ಗಾಜನೂರು, ಮಂಡಗದ್ದೆ, ತೂದೂರು, ಮೇಗರವಳ್ಳಿ, ಆಗುಂಬೆ ಸೇರಿದಂತೆ ಹಲವೆಡೆ ಬೃಹತ್ ಫ್ಲೆಕ್ಸ್‌ಗಳನ್ನು ಅಳವಡಿಸಿ, ಕಾರ್ಯಕರ್ತರೊಂದಿಗೆ ತೀರ್ಥಹಳ್ಳಿಗೆ ಭೇಟಿ ನೀಡಿ ಶಕ್ತಿ ಪ್ರದರ್ಶನ ನಡೆಸಲಿದ್ದೇವೆ," ಎಂದು ಸವಾಲು ಹಾಕಿದರು.
"ಕಳೆದ 30-40 ವರ್ಷಗಳಿಂದ ಕಾಂಗ್ರೆಸ್‌ಗಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ. ಈಗಿನ ಏಕಪಕ್ಷೀಯ ನಿರ್ಧಾರಗಳು ಮುಂದುವರಿದರೆ ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗಲಿದೆ. ಇದು ನನ್ನ ವೈಯಕ್ತಿಕ ಹೋರಾಟವಲ್ಲ, ಪಕ್ಷದ ಕಾರ್ಯಕರ್ತರ ಹಿತದೃಷ್ಟಿಯಿಂದ ಧ್ವನಿ ಎತ್ತುತ್ತಿದ್ದೇನೆ," ಎಂದು ಸುಂದರೇಶ್ ಎಚ್ಚರಿಕೆ ನೀಡಿದ್ದಾರೆ.