ಬೆಂಗಳೂರು: ಚಿತ್ರನಟ ದರ್ಶನ್ ಅಭಿನಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚಲನ ಮೂಡಿಸಿರುವ ರೇಣುಕಾಸ್ವಾಮಿ ಕೊಲೆ ಕೇಸ್‌ನ ವಿಚಾರಣೆ ವೇಳೆ, ಆರೋಪಿ ಪ್ರದೋಷ್‌ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿ ವಿಚಾರಣೆ ನಡೆಸುವುದನ್ನು ಮುಂದೂಡಬೇಕು ಎಂದು ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಈ ಮನವಿಗೆ ಸಹಾಯಕ ಸರ್ಕಾರಿ ಅಭಿಯೋಜಕ (ಅಸಿಸ್ಟೆಂಟ್ ಪಿಪಿ) ಸಚಿನ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ವಿಚಾರಣೆ ಮುಂದೂಡಲು ಯಾವುದೇ ಸಮಂಜಸ ಕಾರಣವಿಲ್ಲ ಎಂದು ವಾದಿಸಿದ್ದಾರೆ.
ವಿಚಾರಣೆ ವೇಳೆ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕ ಸಚಿನ್, ಹೈಕೋರ್ಟ್ ಆದೇಶವು ಈಗಾಗಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆಗಿದೆ. ನಾವು ಅದರ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಕೇವಲ ಸರ್ಟಿಫೈಡ್ ಕಾಪಿಯನ್ನೇ ಸಲ್ಲಿಸಬೇಕೆಂಬ ಯಾವುದೇ ಕಡ್ಡಾಯ ನಿಯಮವಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಇಂತಹುದೇ ನಿರ್ದಿಷ್ಟ ಕ್ರಮದಲ್ಲಿ ಸಾಕ್ಷಿಗಳ ವಿಚಾರಣೆ ನಡೆಸಬೇಕೆಂಬ ನಿಯಮವಿಲ್ಲ ಹಾಗೂ ಪ್ರಾಸಿಕ್ಯೂಷನ್‌ಗೆ ಸೂಕ್ತ ಸಾಕ್ಷಿಗಳನ್ನು ವಿಚಾರಣೆಗೊಳಪಡಿಸುವ ಸಂಪೂರ್ಣ ಅಧಿಕಾರವಿದೆ. ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವವರೆಗೆ ವಿಚಾರಣೆ ತಡೆಯುವ ಅಥವಾ ಕಾಯುವ ಅಗತ್ಯವಿಲ್ಲ ಎಂದು ವಾದಿಸಿದರು.
ಇದೇ ವೇಳೆ, ದರ್ಶನ್ ಪರ ವಕೀಲರು 10 ದಿನಗಳ ಕಾಲಾವಕಾಶ ಕೇಳುತ್ತಿರುವುದಕ್ಕೆ ಆಧಾರವೇನು ಎಂದು ಪ್ರಶ್ನಿಸಿದ ಪಿಪಿ, ಈಗ ಸಮಯ ಪಡೆದು ನಂತರ ಆದೇಶದ ಮರು ಪರಿಶೀಲನೆ ಅರ್ಜಿ ಸಲ್ಲಿಸಿದ್ದೇವೆ ಎಂಬ ನೆಪ ಹೇಳಿ ಮತ್ತೆ ವಿಚಾರಣೆ ಮುಂದೂಡಿಕೆ ಕೇಳುವ ಸಾಧ್ಯತೆಯಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಮಾಫಿ ಸಾಕ್ಷಿ ಅರ್ಜಿ ಸಲ್ಲಿಸಿ ಈಗಾಗಲೇ ಸುಮಾರು 2 ತಿಂಗಳು ಕಳೆದಿದ್ದು, ಹೈಕೋರ್ಟ್ ಆದೇಶಕ್ಕೆ ಯಾವುದೇ ತಡೆ (ಸ್ಟೇ) ಇಲ್ಲದಿರುವುದರಿಂದ ಪ್ರದೋಷ್ ಅವರ ಸಾಕ್ಷ್ಯ ವಿಚಾರಣೆಯನ್ನು ತಕ್ಷಣವೇ ನಡೆಸಬೇಕು ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯವನ್ನು ಒತ್ತಾಯಿಸಿದೆ.