LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅರ್ಜಿ ವಿಲೇವಾರಿಗೆ ವಿಳಂಬ ಸಲ್ಲದು: ಪ್ರಜಾಸೇವೆ ಸಭೆಯಲ್ಲಿ ಸೊರಬ ತಹಶೀಲ್ದಾರ್ ಕೆ. ಪುರಂಧರ ಎಚ್ಚರಿಕೆ

ಶಿವಮೊಗ್ಗ: ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ‘ಪ್ರಜಾಸೇವೆ ಆಂದೋಲನ’ದ ಮೂಲಕ ನಾಗರಿಕರ ಕುಂದುಕೊರತೆಗಳು ಹಾಗೂ ಅರ್ಜಿಗಳಿಗೆ ನೇರವಾಗಿ ಮತ್ತು ತ್ವರಿತವಾಗಿ ಪರಿಹಾರ ದೊರೆಯಲಿದೆ ಎಂದು ಸೊರಬ ತಹಶೀಲ್ದಾರ್ ಕೆ. ಪುರಂಧರ ಅವರು ತಿಳಿಸಿದರು.

news_1790413185_8_788.webp

​ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉಳವಿಯ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಪ್ರಜಾಸೇವೆ ಆಂದೋಲನ’ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಆದೇಶದ ಮೇರೆಗೆ ಈ ಆಂದೋಲನ ಆರಂಭವಾಗಿದ್ದು, ಸಾರ್ವಜನಿಕರು ಸಲ್ಲಿಸುವ ಪ್ರತಿಯೊಂದು ಅರ್ಜಿಯ ಚಲನವಲನ ಹಾಗೂ ವಿಲೇವಾರಿಯನ್ನು ಸಿಎಂ ಕಚೇರಿಯಿಂದಲೇ ಆನ್‌ಲೈನ್ ಡ್ಯಾಶ್‌ಬೋರ್ಡ್ ಮೂಲಕ ನೇರವಾಗಿ ವೀಕ್ಷಣೆ (ಅಬ್ಸರ್ವೇಶನ್) ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.

news_1790413184_6_550.webp

ಇದಲ್ಲದೆ, ಜಿಲ್ಲಾಧಿಕಾರಿಗಳು ಪ್ರತಿ ಬುಧವಾರ ಅರ್ಜಿಗಳು ಗುಣಾತ್ಮಕವಾಗಿ ಹಾಗೂ ಸಮರ್ಪಕವಾಗಿ ವಿಲೇವಾರಿಯಾಗಿವೆಯೇ ಅಥವಾ ಕೇವಲ ಕಾಟಾಚಾರಕ್ಕೆ ವಿಲೇವಾರಿ ಮಾಡಲಾಗಿದೆಯೇ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಆಂದೋಲನದಲ್ಲಿ ಸ್ವೀಕರಿಸಲಾಗುವ ಅರ್ಜಿಗಳನ್ನು ತಕ್ಷಣವೇ ಸ್ಕ್ಯಾನ್ ಮಾಡಿ ಐಪಿಜಿಆರ್‌ಎಸ್ (IPGRS) ಪೋರ್ಟಲ್ ಮೂಲಕ ಆಯಾ ಇಲಾಖೆಯ (ಕಂದಾಯ, ಕೃಷಿ, ತೋಟಗಾರಿಕೆ, ಕೆಎಸ್‌ಆರ್‌ಟಿಸಿ ಮುಂತಾದ) ಲಾಗಿನ್‌ಗೆ ಕೆಲವೇ ಸೆಕೆಂಡುಗಳಲ್ಲಿ ಕಳುಹಿಸಲಾಗುವುದು. ಯಾವುದೇ ಕಾರಣಕ್ಕೂ ಹಾರ್ಡ್ ಕಾಪಿ ಬರುವವರೆಗೆ ಕಾಯದೆ, ಲಾಗಿನ್‌ಗೆ ಬಂದ ಕೂಡಲೇ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು, ಕಾನೂನಾತ್ಮಕವಾಗಿ ಗರಿಷ್ಠ 21 ದಿನಗಳ ಒಳಗಾಗಿ ವಿಲೇವಾರಿ ಮಾಡಬೇಕು ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ತಹಶೀಲ್ದಾರ್ ತಾಕೀತು ಮಾಡಿದರು.

news_1790413183_4_123.webp

ಸಾಮಾನ್ಯವಾಗಿ ರೈತರು ಮತ್ತು ಸಾರ್ವಜನಿಕರು ವಿವಿಧ ಕೆಲಸಗಳಿಗಾಗಿ ತಾಲೂಕು ಕಚೇರಿಗಳು ಹಾಗೂ ಅಧಿಕಾರಿಗಳ ಭೇಟಿಗೆ ಅಲೆದಾಡಬೇಕಾಗುತ್ತದೆ. ಆದರೆ ಈ ಆಂದೋಲನದಡಿ ಕಂದಾಯ, ಕೃಷಿ, ತೋಟಗಾರಿಕೆ, ಪಂಚಾಯತ್ ರಾಜ್ ಸೇರಿದಂತೆ ತಾಲೂಕು ಮಟ್ಟದ ಎಲ್ಲ ಇಲಾಖಾ ಮುಖ್ಯಸ್ಥರು ಒಂದೇ ವೇದಿಕೆಯಲ್ಲಿ ಲಭ್ಯವಿರುತ್ತಾರೆ. ಗ್ರಾಮಸ್ಥರು, ರೈತರು ಕೇವಲ ಅರ್ಜಿ ಸಲ್ಲಿಸುವುದಷ್ಟೇ ಅಲ್ಲದೆ, ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಪಡೆದು, ತಮ್ಮ ವೈಯಕ್ತಿಕ ಬದುಕಿನಲ್ಲಿ ಆ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಹಶೀಲ್ದಾರ್ ಕರೆ ನೀಡಿದರು.

ಸಾರ್ವಜನಿಕ ಸಮಸ್ಯೆಗಳಿಗೆ ಕಚೇರಿ ಹಂತದಲ್ಲೇ ಪರಿಹಾರ - ಇಓ ಕೆ.ಆರ್ ಶಶಿಧರ್

ಸೊರಬ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಕೆ.ಜಿ. ಶಶಿಧರ್ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ನೌಕರರು ಸಕಾಲದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಗುಣಾತ್ಮಕವಾಗಿ ಬಗೆಹರಿಸಿದರೆ ಪ್ರತ್ಯೇಕ ಜನಸ್ಪಂದನ ಅಥವಾ ಪ್ರಜಾಸೇವಾ ಸಭೆಗಳ ಅಗತ್ಯವೇ ಇರುವುದಿಲ್ಲ ಎಂದು ತಿಳಿಸಿದರು.

news_1790413182_1_218.webp

"ಸರ್ಕಾರ ಜಾರಿಗೆ ತಂದಿರುವ 'ಪ್ರಜಾಸೇವೆ' ಅಥವಾ ಅದಾಲತ್‌ಗಳು ಎರಡನೇ ಹಂತದ ವ್ಯವಸ್ಥೆ. ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡದಂತೆ ಮೊದಲ ಹಂತದಲ್ಲೇ ಅವರ ಅರ್ಜಿಗಳನ್ನು ಪರಿಶೀಲಿಸಿ ಸಮಸ್ಯೆ ಇತ್ಯರ್ಥಪಡಿಸುವುದು ಅಧಿಕಾರಿ-ಸಿಬ್ಬಂದಿಯ ಕರ್ತವ್ಯ. ಎಲ್ಲರೂ ಕಚೇರಿಯಲ್ಲಿ ಸಮಯಕ್ಕೆ ಸರಿಯಾಗಿ ಹಾಜರಿದ್ದು, ಸಾರ್ವಜನಿಕರಿಗೆ ಅನಾವಶ್ಯಕವಾಗಿ ಅಲೆದಾಡಿಸದೆ ಸ್ಪಂದಿಸಬೇಕು" ಎಂದು ಅವರು ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು.

news_1790413185_9_107.webp

"ಭಾರತೀಯ ಸಂಸ್ಕೃತಿಯಲ್ಲಿ ‘ಜನಸೇವೆಯೇ ಜನಾರ್ದನ ಸೇವೆ’ ಎಂಬ ನಂಬಿಕೆಯಿದೆ. ನಾವು ಪಡೆಯುವ ವೇತನ ಸಾರ್ವಜನಿಕರ ತೆರಿಗೆಯ ಹಣದಿಂದ ಬರುತ್ತದೆ ಎಂಬುದನ್ನು ಮರೆಯಬಾರದು. ಸಾರ್ವಜನಿಕರ ಎಲ್ಲ ಸಮಸ್ಯೆಗಳು ತಾಲ್ಲೂಕು ಮಟ್ಟದಲ್ಲೇ ಬಗೆಹರಿಯಲು ಸಾಧ್ಯವಿಲ್ಲದಿರಬಹುದು; ಕೆಲವೊಂದು ಜಿಲ್ಲಾ ಅಥವಾ ರಾಜ್ಯ ಮಟ್ಟದಲ್ಲಿ ಇತ್ಯರ್ಥವಾಗಬೇಕಿರುತ್ತದೆ. ಆದರೆ, ನಮ್ಮ ವ್ಯಾಪ್ತಿಯಲ್ಲಿ ಮಾಡಬಹುದಾದ ಕೆಲಸಗಳನ್ನು ಪ್ರಾಮಾಣಿಕವಾಗಿ ಹಾಗೂ ಬದ್ಧತೆಯಿಂದ ಮಾಡಬೇಕು" ಎಂದು ಕರೆ ನೀಡಿದರು.

​ಇಲಾಖಾ ಮಟ್ಟದಲ್ಲಿ ಗುಣಮಟ್ಟದ ಸೇವೆ ನೀಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರೂ ಆದ ಸಚಿವ ಮಧು ಬಂಗಾರಪ್ಪ ಹಾಗೂ ರಾಜ್ಯ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಂತೆ ಅಧಿಕಾರಿ-ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

news_1790413185_7_207.webp

ಸರ್ಕಾರದ ಯೋಜನೆಗಳು ಬಡವರು ಮತ್ತು ರೈತರ ಮನೆ ಬಾಗಿಲಿಗೆ ತಲುಪಲಿ: ಕೆಡಿಪಿ ಸದಸ್ಯ ಅಣ್ಣಪ್ಪ ಕರೆ

ಇನ್ನೂ ಕೆಡಿಪಿ ಸದಸ್ಯ ಅಣ್ಣಪ್ಪ ಅವರು​ ಮಾತನಾಡಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಪ್ರಜಾಸೇವೆ’ ಕಾರ್ಯಕ್ರಮದ ಸದುಪಯೋಗ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ತಲುಪುವಂತಾಗಬೇಕು ಎಂದು ಅಭಿಪ್ರಾಯ ಪಟ್ಟರು.

​"ಸರ್ಕಾರವು ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಅವರ ಮನೆ ಬಾಗಿಲಿಗೆ ತೆರಳಿ ಕೆಲಸ ಮಾಡಿಕೊಡುವ ಸದುದ್ದೇಶದಿಂದ ಈ ಮಹತ್ವದ ಕಾರ್ಯಕ್ರಮವನ್ನು ಆರಂಭಿಸಿದೆ. ಗ್ರಾಮೀಣ ಭಾಗದಲ್ಲಿ ರೈತರು, ಬಡವರು ಹಾಗೂ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅನೇಕರು ಅನಕ್ಷರಸ್ಥರಾಗಿದ್ದಾರೆ. ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಕಚೇರಿಗಳಿಗೆ ಅಲೆಯುವುದು ಮತ್ತು ಯಾರನ್ನು ಸಂಪರ್ಕಿಸಬೇಕೆಂದು ತಿಳಿಯದೆ ಅವರು ಕಷ್ಟಪಡುತ್ತಿದ್ದಾರೆ. ಹೀಗಾಗಿ, ಜನರಿಗೆ ಸೇವೆ ಸಲ್ಲಿಸುವ ಇಂತಹ ಉತ್ತಮ ಅವಕಾಶವನ್ನು ಅಧಿಕಾರಿಗಳು ಸದ್ಬಳಕೆ ಮಾಡಿಕೊಳ್ಳಬೇಕು" ಎಂದು ತಿಳಿಸಿದರು.

news_1790413182_0_494.webp

​ಮುಂದುವರಿದು ಮಾತನಾಡಿದ ಅವರು, "ಕೇವಲ ಕಟ್ಟುನಿಟ್ಟಾದ ಕಾನೂನಿನ ನಿಯಮಗಳನ್ನು ಮುಂದಿಡದೆ, ಮಾನವೀಯ ನೆಲೆಗಟ್ಟಿನಲ್ಲಿ ಸಣ್ಣಪುಟ್ಟ ಲೋಪದೋಷಗಳನ್ನು ಸರಿಪಡಿಸಿ ಬಡವರ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕು. ಅಧಿಕಾರಿಗಳು ಹಾಗೂ ಸಾರ್ವಜನಿಕರು ಪರಸ್ಪರ ಅರ್ಥಮಾಡಿಕೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು," ಎಂದು ಮನವಿ ಮಾಡಿದರು.

​ಏನಿದು ‘ಪ್ರಜಾಸೇವೆ ಆಂದೋಲನ’?

​ಗ್ರಾಮೀಣ ಹಾಗೂ ತಾಲೂಕು ಮಟ್ಟದ ನಾಗರಿಕರು ತಮ್ಮ ಸಮಸ್ಯೆಗಳನ್ನು ಹೊತ್ತು ಜಿಲ್ಲಾ ಕೇಂದ್ರಗಳಿಗೆ ಅಥವಾ ರಾಜಧಾನಿಗೆ ಅಲೆಯುವುದನ್ನು ತಪ್ಪಿಸಿ, ಸರ್ಕಾರದ ಆಡಳಿತ ಯಂತ್ರವನ್ನೇ ಜನರ ಮನೆಬಾಗಿಲಿಗೆ ತರುವುದು ಪ್ರಜಾಸೇವೆ ಆಂದೋಲನ ಸಭೆಯ ಉದ್ದೇಶವಾಗಿದೆ.

news_1790413184_5_745.webp

​ಸಾರ್ವಜನಿಕರ ಕುಂದುಕೊರತೆ ಅರ್ಜಿಗಳನ್ನು ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ದಾಖಲಿಸಿ, ನಿಗದಿತ ಕಾಲಮಿತಿಯಲ್ಲಿ ಪರಿಹರಿಸಲು ಮುಖ್ಯಮಂತ್ರಿಗಳ ಕಾರ್ಯಾಲಯ ಹಾಗೂ ಜಿಲ್ಲಾಡಳಿತದಿಂದ ನಿರಂತರ ಮಾನಿಟರಿಂಗ್ ವ್ಯವಸ್ಥೆ ಇರಲಿದೆ. ಆ ಮೂಲಕ ಡಿಜಿಟಲ್ ಕಣ್ಗಾವಲು ವ್ಯವಸ್ಥೆ ಕಲ್ಪಿಸಲಾಗಿದೆ.

​ಕಂದಾಯ ತಿದ್ದುಪಡಿ, ಪಹಣಿ ದೋಷ, ಪಿಂಚಣಿ, ಕೃಷಿ ಇಲಾಖೆಯ ಸವಲತ್ತುಗಳು ಸೇರಿದಂತೆ ಹಲವು ಸಾರ್ವಜನಿಕ ಸಮಸ್ಯೆಗಳನ್ನು ನಿಗದಿತ ದಿನಗಳ ಒಳಗೆ ಬಗೆಹರಿಸುವುದು ಈ ಆಂದೋಲನದ ಮುಖ್ಯ ಗುರಿಯಾಗಿದೆ. ಆ ಮೂಲಕ ತ್ವರಿತ ಕ್ರಮವನ್ನು ವಹಿಸಲಾಗುತ್ತಿದೆ.

news_1790413183_3_992.webp

ನೂರಾರು ಅರ್ಜಿ ಸಲ್ಲಿಕೆ

ಉಳವಿ ಹೋಬಳಿ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಪ್ರಜಾಸೇವೆ ಆಂದೋಲನ ಸಭೆಯಲ್ಲಿ ತಮ್ಮ ಸಮಸ್ಯೆಗಳ ಸರಮಾಲೆಯ ಅರ್ಜಿಗಳನ್ನು ಸಲ್ಲಿಸಿದರು. ಈ ಅರ್ಜಿಗಳನ್ನು ಖುದ್ಧು ಪರಿಶೀಲನೆ ಮಾಡಿದಂತ ಸೊರಬ ತಹಶೀಲ್ದಾರ್ ಕೆ.ಪುರಂದರ ಅವರು, ಸ್ಥಳದಲ್ಲಿ ಪರಿಹಾರದ ಕ್ರಮ ವಹಿಸಿದರು.

ಕ್ಯಾಸನೂರು ಗ್ರಾಮದ ರಾಮಪ್ಪ ಎಂಬುವವರು ನಂದಿಗುಡ್ಡ ಜಮೀನು ಸಮಸ್ಯೆ ಪರಿಹರಿಸುವಂತೆ ಕೋರಿದರು. ಹಿರೇಕಸವಿಯ ಈರಮ್ಮ ಮನೆ ಕೋರಿದಾಗ ಸರ್ಕಾರದಿಂದ ಮನೆ ಮಂಜೂರಾತಿಗೆ ಅರ್ಜಿ ಕರೆಯಲಾಗಿದೆ. ಸಲ್ಲಿಸಲು ತಿಳಿಸಿದರು. 

ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಪುರಂದರ ಅವರು ಸೊರಬ ತಾಲ್ಲೂಕು ಆಡಳಿತದಿಂದ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು 242 ಎಕರೆ ಗುರುತಿಸಲಾಗಿದೆ. ಜಿಲ್ಲಾಧಿಕಾರಿಗಳ ಮೂಲಕ 8,000 ನಿವೇಶನ ಹಂಚಿಕೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ಶ್ರೀರ್ಘದಲ್ಲೇ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವುದಾಗಿ ಸ್ಪಷ್ಟ ಪಡಿಸಿದರು.

news_1790413183_2_493.webp

ಚಿತ್ತೂರಿನ ಹನುಮಂತಪ್ಪ ಎಂಬುವರು ಮರಣ ಹೊಂದಿದ್ದಾರೆ ಎನ್ನುವ ಪ್ರಮಾಣ ಪತ್ರದಿಂದ ಪಡಿತರ ಚೀಟಿ ರದ್ದಾದ ಬಗ್ಗೆ ಅರ್ಜಿ ಆಲಿಸಿ, ಸ್ಥಳದಲ್ಲೇ ತಪ್ಪಾದ ಮರಣ ಪ್ರಮಾಣ ಪತ್ರವನ್ನು ರದ್ದುಪಡಿಸಿದ ಆದೇಶ ಪತ್ರವನ್ನು ತಹಶೀಲ್ದಾರ್ ಕೆ.ಪುರಂದರ ವಿವರಿಸಿ ಸಮಸ್ಯೆಗೆ ಇತಿಶ್ರೀ ಹಾಡಿದರು.

ಈ ಸಂದರ್ಭದಲ್ಲಿ ಸೊರಬ ತಾಲ್ಲೂಕು ಬಿಇಓ ಪುಷ್ಪ, ಟಿಹೆಚ್ ಓ ಡಾ.ಹರ್ಷ, ಮೆಸ್ಕಾಂ ಎಇಇ ಸತ್ಯಪ್ರಕಾಶ್, ಕೃಷಿ ಅಧಿಕಾರಿ ಆರ್.ಪ್ರತಾಪ್, ಆಹಾರ ಇಲಾಖೆಯ ಅಧಿಕಾರಿ ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆಯ ಅಧಿಕಾರಿ ಪ್ರಭುಶಂಕರ್.ಡಿಎಸ್,  ಉಳವಿ ಪಿಡಿಓ ನಾಗೇಂದ್ರಪ್ಪ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?