ಬೆಂಗಳೂರು: ರಾಜ್ಯದ ಕ್ರೀಡಾ ಕಾರ್ಯಕ್ರಮಗಳನ್ನು ಪ್ರವಾಸೋದ್ಯಮದೊಂದಿಗೆ ಜೋಡಿಸಿ, ಪ್ರವಾಸಿಗರಿಗೆ ಹೊಸ ಅನುಭವ ನೀಡುವ ಹಾಗೂ ಸ್ಥಳೀಯ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು 'Active Karnataka – Run, Ride, Surf, Explore' ಎಂಬ ವಿನೂತನ ಯೋಜನೆಗೆ ವಿಶ್ವ ಪ್ರವಾಸೋದ್ಯಮ ದಿನದಂದು ಚಾಲನೆ ನೀಡಲಿದೆ. ಈ ಕುರಿತು ಮಾಹಿತಿ ನೀಡಿರುವ ಪ್ರವಾಸೋದ್ಯಮ ಸಚಿವ ಕೆ. ಜೆ. ಜಾರ್ಜ್ ಅವರು, ಕ್ರೀಡೆ ಮತ್ತು ಸಾಹಸ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ಹೆಜ್ಜೆ ಇಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಯ ಮೊದಲ ಹಂತವಾಗಿ ಪ್ರಮುಖ ಕ್ರೀಡಾ ಕಾರ್ಯಕ್ರಮ ಆಯೋಜಕರೊಂದಿಗೆ ಪ್ರವಾಸೋದ್ಯಮ ಇಲಾಖೆಯು ಒಪ್ಪಂದಕ್ಕೆ ಸಹಿ ಹಾಕಲಿದೆ. ರಾಜ್ಯದಲ್ಲಿ ಆಯೋಜನೆಯಾಗುವ ಮ್ಯಾರಥಾನ್, ಸೈಕ್ಲಿಂಗ್, ಟ್ರಯಥ್ಲಾನ್ ಸೇರಿದಂತೆ ಪ್ರಮುಖ 'Endurance Events'ಗಳನ್ನು ಸಂಬಂಧಿತ ಪ್ರವಾಸಿ ತಾಣಗಳೊಂದಿಗೆ ಜೋಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. 'Come for the Sport, Stay for Karnataka' ಎಂಬ ಮೂಲ ಆಶಯದೊಂದಿಗೆ, ಕ್ರೀಡಾಕೂಟಗಳಿಗೆ ಬರುವ ಸ್ಪರ್ಧಿಗಳು ಕೇವಲ ಪಂದ್ಯಾವಳಿ ಮುಗಿಸಿ ಹಿಂತಿರುಗದೆ, ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ರಾಜ್ಯದ ಸೌಂದರ್ಯವನ್ನು ಆಸ್ವಾದಿಸುವಂತೆ ಪ್ರೇರೇಪಿಸಲಾಗುತ್ತದೆ.
ಬೆಂಗಳೂರು, ಮೈಸೂರು, ಕರಾವಳಿ ಸೇರಿದಂತೆ ಪ್ರಮುಖ ತಾಣಗಳಲ್ಲಿ ನಡೆಯುವ ಕ್ರೀಡಾಕೂಟಗಳ ಜೊತೆಗೆ 2 ರಿಂದ 3 ದಿನಗಳ ವಿಶೇಷ ಪ್ರವಾಸಿ ಪ್ಯಾಕೇಜ್ (Itinerary), ಉತ್ತಮ ವಾಸ್ತವ್ಯ, ಸ್ಥಳೀಯ ಆಹಾರ, ಪರಂಪರೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಯೋಜನೆ ರೂಪಿಸಲಾಗುತ್ತಿದೆ. ಮುಂದಿನ ಹಂತದಲ್ಲಿ ಸರ್ಫಿಂಗ್, ಕಯಾಕಿಂಗ್, ವಾಟರ್ ಸ್ಪೋರ್ಟ್ಸ್, ಟ್ರೇಲ್ ರನ್ನಿಂಗ್ ಮುಂತಾದ ಸಾಹಸ ಕ್ರೀಡೆಗಳನ್ನು ಒಳಗೊಂಡ ರಾಜ್ಯವ್ಯಾಪಿ 'Sports & Adventure Tourism Calendar' ಸಿದ್ಧಪಡಿಸುವ ಆಲೋಚನೆ ಇದೆ ಎಂದು ಸಚಿವರು ವಿವರಿಸಿದ್ದಾರೆ.
ಪ್ರತಿಯೊಂದು ಪ್ರಮುಖ ಕ್ರೀಡಾ ಕಾರ್ಯಕ್ರಮವನ್ನು ಸ್ಥಳೀಯ ಪ್ರವಾಸಿ ಅನುಭವದೊಂದಿಗೆ ಜೋಡಿಸುವುದರಿಂದ ಪ್ರವಾಸಿಗರು ರಾಜ್ಯದಲ್ಲಿ ತಂಗುವ ಅವಧಿ ಹೆಚ್ಚಾಗಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ. ರಾಮ್ ಪ್ರಸಾದ್ ಮನೋಹರ್ ತಿಳಿಸಿದ್ದಾರೆ. ಇದರಿಂದಾಗಿ ಹೋಟೆಲ್, ಹೋಂಸ್ಟೇ, ಸಾರಿಗೆ ಉದ್ಯಮ, ಸ್ಥಳೀಯ ಆಹಾರ ಮಳಿಗೆಗಳು, ಪ್ರವಾಸಿ ಮಾರ್ಗದರ್ಶಿಗಳು ಮತ್ತು ಸಣ್ಣ ಪ್ರಮಾಣದ ವ್ಯಾಪಾರಿಗಳಿಗೆ ನೇರ ಆರ್ಥಿಕ ಲಾಭ ಹಾಗೂ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
'Active Karnataka' ಯೋಜನೆಯನ್ನು ಹಂತ ಹಂತವಾಗಿ ರಾಜ್ಯದ ಎಲ್ಲಾ ಪ್ರಮುಖ ತಾಣಗಳಿಗೆ ವಿಸ್ತರಿಸಿ, ಕರ್ನಾಟಕವನ್ನು ದೇಶದ ಪ್ರಮುಖ ಕ್ರೀಡೆ ಮತ್ತು ಸಾಹಸ ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸುವುದು ಇಲಾಖೆಯ ಗುರಿಯಾಗಿದೆ. ಇದರ ಭಾಗವಾಗಿ ಮೊದಲ ಹಂತದಲ್ಲಿ 'ಎನ್‌ಇಬಿ ಸ್ಪೋರ್ಟ್ಸ್' (NEB Sports) ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದ್ದು, ಈ ಸಂಸ್ಥೆಯ ಸಹಯೋಗದಲ್ಲಿ ವಿವಿಧ ಮ್ಯಾರಥಾನ್, ಸೈಕ್ಲಾಥಾನ್ ಹಾಗೂ ಟ್ರಯಥ್ಲಾನ್ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.