ಬೆಂಗಳೂರು : ರಾಜ್ಯದ ರೈತರ ಭೂ ದಾಖಲೆಯಾದ ಪಹಣಿ (RTC) ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಸುಧಾರಣೆ ತರಲು ಮುಂದಾಗಿದೆ. ಇನ್ಮುಂದೆ ಪಹಣಿಯಲ್ಲಿ ಭೂ ಮಾಲೀಕರ ಭಾವಚಿತ್ರ, ವಿಳಾಸ, ಆಧಾರ್ ಸಂಖ್ಯೆ ಹಾಗೂ ಫ್ರೂಟ್ಸ್ ಐಡಿ (FRUITS ID) ವಿವರಗಳು ಮುದ್ರಣಗೊಳ್ಳಲಿವೆ.
ಹೌದು, ರಾಜ್ಯ ಸರ್ಕಾರ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದರ ಜೊತೆಗೆ ಜಮೀನಿನ ವಿಸ್ತೀರ್ಣಕ್ಕೆ ಸಂಬಂಧಿಸಿದಂತೆ 'ಆಕಾರ್ಬಂಧ್' ದಾಖಲೆಗಳನ್ನು ಪಹಣಿಯೊಂದಿಗೆ ಡಿಜಿಟಲ್ ರೂಪದಲ್ಲಿ ಜೋಡಿಸಲಾಗುತ್ತಿದೆ. ಇದರಿಂದ ನಕ್ಷೆಯಲ್ಲಿರುವ ವಿಸ್ತೀರ್ಣ ಹಾಗೂ ಪಹಣಿಯಲ್ಲಿ ನಮೂದಾಗಿರುವ ವಿಸ್ತೀರ್ಣದ ನಡುವಿನ ವ್ಯತ್ಯಾಸ ಮತ್ತು ಗೊಂದಲಗಳಿಗೆ ಶಾಶ್ವತ ಪರಿಹಾರ ಸಿಗಲಿದೆ.
ಕ್ಯೂಆರ್ ಕೋಡ್ ಮತ್ತು ಜಿಯೋ-ರೆಫರೆನ್ಸ್ ಸೌಲಭ್ಯ
ಪ್ರತಿಯೊಂದು ಆರ್ಟಿಸಿಯಲ್ಲೂ ಕ್ಯೂಆರ್ ಕೋಡ್ ಮುದ್ರಿಸಲಾಗುತ್ತಿದ್ದು, ಇದನ್ನು ಸ್ಕ್ಯಾನ್ ಮಾಡುವ ಮೂಲಕ ಜಮೀನಿನ ಮೇಲಿರುವ ಸಾಲ ಸೇರಿದಂತೆ ಎಲ್ಲಾ ಅಧಿಕೃತ ಮಾಹಿತಿಗಳನ್ನು ತಕ್ಷಣವೇ ಪರಿಶೀಲಿಸಲು ಸಾಧ್ಯವಾಗಲಿದೆ. ಪಹಣಿಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಿಸುವುದರ ಜೊತೆಗೆ, ಜಿಯೋ-ರೆಫರೆನ್ಸ್ಡ್ ನಕ್ಷೆ ಹಾಗೂ ಓಪನ್ ಲೊಕೇಶನ್ ಕೋಡ್ಗಳನ್ನು ಒಳಗೊಂಡ ಡಿಜಿಟಲೀಕರಣಗೊಂಡ ನವೀಕೃತ ದಾಖಲೆಯನ್ನು ಕಂದಾಯ ಇಲಾಖೆ ಸಿದ್ಧಪಡಿಸುತ್ತಿದೆ. ಜಮೀನಿನ ಪಹಣಿಯಲ್ಲಿ ಹೆಸರಿದ್ದರೂ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಎದುರಾಗುತ್ತಿದ್ದ ಕಾನೂನು ತೊಡಕುಗಳನ್ನು ನಿವಾರಿಸಿ, ದಾಖಲೆಗೆ ಪೂರ್ಣ ಪ್ರಮಾಣದ ಹಕ್ಕುಸ್ವಾಮ್ಯದ ಮಾನ್ಯತೆ ನೀಡುವುದು ಈ ಬದಲಾವಣೆಯ ಮುಖ್ಯ ಉದ್ದೇಶವಾಗಿದೆ.
ನಕಲಿ ದಾಖಲೆ ಸೃಷ್ಟಿಗೆ ಬ್ರೇಕ್, ಜಂಟಿ ಮಾಲೀಕತ್ವಕ್ಕೂ ವಿಸ್ತರಣೆ
ಮುಂದಿನ ಮೂರರಿಂದ ನಾಲ್ಕು ತಿಂಗಳುಗಳಲ್ಲಿ ಇಂತಹ ಸುಮಾರು 25 ಲಕ್ಷ ನವೀಕೃತ ಆರ್ಟಿಸಿಗಳನ್ನು ಸಾರ್ವಜನಿಕರಿಗೆ ವಿತರಿಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ. ಈ ನೂತನ ವ್ಯವಸ್ಥೆಯಿಂದಾಗಿ ನಕಲಿ ದಾಖಲೆಗಳ ಸೃಷ್ಟಿ ಹಾಗೂ ಅಕ್ರಮವಾಗಿ ಜಮೀನು ಕಬಳಿಸುವ ಪ್ರಯತ್ನಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ. ಆರಂಭಿಕ ಹಂತದಲ್ಲಿ ಏಕ ಮಾಲೀಕತ್ವ ಹೊಂದಿರುವ ಪಹಣಿಗಳಿಗೆ ಈ ನಿಯಮ ಅನ್ವಯವಾಗಲಿದ್ದು, ಜಂಟಿ ಮಾಲೀಕತ್ವ ಹೊಂದಿರುವ ಭೂ ಮಾಲೀಕರು ವಿವಿಧ ಕಂದಾಯ ಸೇವೆಗಳಿಗಾಗಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅವರಿಗೂ ಈ ಮಾದರಿಯ ಹೊಸ ಪಹಣಿಗಳನ್ನು ವಿತರಿಸಲು ಇಲಾಖೆ ನಿರ್ಧರಿಸಿದೆ