ಯುಎಇಯ ಶಾರ್ಜಾದಲ್ಲಿ ಕಳೆದ ಜುಲೈ ತಿಂಗಳಲ್ಲಿ ಅತ್ಯಂತ ಕ್ರೂರವಾಗಿ ಹತ್ಯೆಗೀಡಾಗಿದ್ದ ಉಡುಪಿ ಜಿಲ್ಲೆ ಕುಂದಾಪುರದ ಮೂಲದ ಆಲ್ವಿನ್ ಪ್ರಕಾಶ್ ಕುಂದರ್ ಅವರ ಮೃತದೇಹವು ಸುಮಾರು ಎರಡು ತಿಂಗಳ ಬಳಿಕ ಶುಕ್ರವಾರ ಅವರ ಸ್ವಗ್ರಾಮಕ್ಕೆ ತಲುಪಿದೆ. ಕುಟುಂಬಸ್ಥರ ಆಕ್ರಂದನ ಹಾಗೂ ಭಾರೀ ನೋವಿನ ನಡುವೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಹಲವು ವರ್ಷಗಳಿಂದ ಯುಎಇಯಲ್ಲಿ ನೆಲೆಸಿ, ಶಾರ್ಜಾ ವಿಮಾನ ನಿಲ್ದಾಣದಲ್ಲಿ ಸುಮಾರು 14 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಆಲ್ವಿನ್ ಪ್ರಕಾಶ್ ಕುಂದರ್ ಜುಲೈ ಅಂತ್ಯದಲ್ಲಿ ನಾಪತ್ತೆಯಾಗಿದ್ದರು. ಬಳಿಕ ಆಗಸ್ಟ್ 12 ರಂದು ಶಾರ್ಜಾದ ಅಲ್ ನಹ್ತಾ ವಾಣಿಜ್ಯ ಪ್ರದೇಶದ ನಿರ್ಜನ ಸ್ಥಳದಲ್ಲಿ ನಿಲ್ಲಿಸಿದ್ದ ಅವರ ಟೊಯೋಟಾ ಕಾರಿನ ಡಿಕ್ಕಿಯಲ್ಲಿ ವಿರೂಪಗೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಡಿಎನ್‌ಎ ಪರೀಕ್ಷೆಯ ಮೂಲಕ ಮೃತದೇಹವನ್ನು ಆಲ್ವಿನ್ ಎಂದು ಖಚಿತಪಡಿಸಿಕೊಳ್ಳಲಾಗಿತ್ತು. ಫೊರೆನ್ಸಿಕ್ ವರದಿ ಪ್ರಕಾರ, ಮೃತದೇಹವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿ ಎರಡು ಪ್ರತ್ಯೇಕ ಚೀಲಗಳಲ್ಲಿ ಕಾರಿನ ಡಿಕ್ಕಿಯಲ್ಲಿ ಇಡಲಾಗಿತ್ತು. ಈ ಘಟನೆಯು ಉಡುಪಿ ಹಾಗೂ ಶಾರ್ಜಾದಲ್ಲಿ ಭಾರೀ ಸಂಚಲನ ಮೂಡಿಸಿತ್ತು.
ಜುಲೈ 20 ರ ಸುಮಾರಿಗೆ ಆಲ್ವಿನ್ ಅವರ ಕಡೆಯಿಂದ ಫೋನ್ ಕರೆಗಳು ನಿಂತುಹೋದ ಹಿನ್ನೆಲೆಯಲ್ಲಿ ಅನುಮಾನಗೊಂಡ ಕುಟುಂಬಸ್ಥರು ಪೊಲೀಸರನ್ನು ಸಂಪರ್ಕಿಸಿದ್ದರು. ಮತ್ತೊಂದೆಡೆ, ಆಲ್ವಿನ್ ಅವರ ಪತ್ನಿ ಟೀನಾ ಹಾಗೂ 10 ನೇ ತರಗತಿಯಲ್ಲಿ ಓದುತ್ತಿದ್ದ ಅವರ ಪುತ್ರ ಕೂಡ ಈ ಘಟನೆಯ ನಂತರ ಪತ್ತೆಯಾಗಿಲ್ಲ. ಇವರ ನಾಪತ್ತೆಯ ಕುರಿತು ಕುಟುಂಬವು ತೀವ್ರ ಅನುಮಾನ ವ್ಯಕ್ತಪಡಿಸಿದ್ದು, ಹತ್ಯೆಯಲ್ಲಿ ಅವರ ಪಾತ್ರವಿರುವ ಬಗ್ಗೆಯೂ ಶಂಕೆ ವ್ಯಕ್ತಪಡಿಸಿದೆ. ಶಾರ್ಜಾ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಮುಂದುವರಿಸಿದ್ದಾರೆ. ಮೃತದೇಹವನ್ನು ಆದಷ್ಟು ಬೇಗ ತಾಯ್ನಾಡಿಗೆ ತರಲು ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ವಿದೇಶಾಂಗ ಸಚಿವಾಲಯ ಹಾಗೂ ಶಾರ್ಜಾದ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ನೆರವಾಗಿದ್ದರು. ಹತ್ಯೆಯ ಹಿಂದಿನ ನೈಜ ಸತ್ಯ ಹಾಗೂ ತಪ್ಪಿತಸ್ಥರ ಪತ್ತೆಗಾಗಿ ಕುಟುಂಬಸ್ಥರು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.