ಶಿವಮೊಗ್ಗ: ಜಿಲ್ಲೆ ಸಾಗರ ತಾಲೂಕು ಆನಂದಪುರ ಹೋಬಳಿ ವ್ಯಾಪ್ತಿಯ ಹೊನ್ನೇಸರ ಗ್ರಾಮದ ಸರ್ಕಾರಿ ಕೆರೆಯನ್ನು ವಿರೂಪಗೊಳಿಸಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಒತ್ತುವರಿಯಾಗಿರುವ ಕೆರೆಯ ಜಾಗವನ್ನು ತಕ್ಷಣವೇ ಸರ್ವೆ ನಡೆಸಿ ಗಡಿ ಗುರುತು ಮಾಡಿಕೊಡುವಂತೆ ಹೆಗ್ಗೋಡು ಗ್ರಾಮ ಪಂಚಾಯಿತಿಯು ಸಾಗರ ತಹಶೀಲ್ದಾರ್ ಹಾಗೂ ಭೂಮಾಪನಾ ಕಚೇರಿಯ ಸಹಾಯಕ ನಿರ್ದೇಶಕರಿಗೆ ಅಧಿಕೃತ ಪತ್ರ ಬರೆದು ಮನವಿ ಮಾಡಿದೆ.

ಬೆಂಗಳೂರಿನ ‘ದೇಸಿ ಟ್ರಸ್ಟ್’ ಸಂಸ್ಥೆಯು ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಕೆರೆ ರಕ್ಷಣೆಗೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (KLCDA), ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು ಸರಣಿ ನಿರ್ದೇಶನಗಳನ್ನು ನೀಡಿದ್ದರೂ ಸರ್ವೆ ವಿಳಂಬದಿಂದಾಗಿ ತೆರವು ಕಾರ್ಯಾಚರಣೆ ನನೆಗುದಿಗೆ ಬಿದ್ದಿದೆ ಎಂಬುದಾಗಿ ಆಕ್ರೋಶವನ್ನು ಹೊರಹಾಕಿದ್ದಾರೆ.

ಏನಿದು ಪ್ರಕರಣ?
ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೇಸರ ಗ್ರಾಮದ ಸರ್ವೇ ನಂಬರ್ 53 ರಲ್ಲಿ ಸುಮಾರು 2 ಎಕರೆ 11 ಗುಂಟೆ ವಿಸ್ತೀರ್ಣದ ‘ವಿರೂಪಾಕ್ಷ ಜೆಡ್ಡು ಕೆರೆ’ ಎಂಬ ಪ್ರಾಚೀನ ಸರ್ಕಾರಿ ಕೆರೆ ಇದೆ. ಈ ಕೆರೆಗೆ ಹೊಂದಿಕೊಂಡಂತಿರುವ ಸರ್ವೇ ನಂಬರ್ 54 ರಲ್ಲಿ ಬೆಂಗಳೂರಿನ ‘ದೇಸಿ ಟ್ರಸ್ಟ್’ (Desi Trust) ಸಂಸ್ಥೆಗೆ ಸೇರಿದ ಜಮೀನಿದೆ.

ಸದರಿ ಟ್ರಸ್ಟಿನ ವ್ಯವಸ್ಥಾಪಕರು ಸರ್ಕಾರಿ ಕೆರೆಯ ಜಾಗವನ್ನು ವಿರೂಪಗೊಳಿಸಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಹೊನ್ನೇಸರ ಮತ್ತು ಚಿಕ್ಕಹೊನ್ನೇಸರ ಗ್ರಾಮಸ್ಥರ ಪರವಾಗಿ ಶ್ರೀಧರ ಭಗವತ್ ಹಾಗೂ ಇತರರು ಕಳೆದ ಎರಡು ವರ್ಷಗಳಿಂದ ಸ್ಥಳೀಯ ಆಡಳಿತ ಮತ್ತು ಜಿಲ್ಲಾಡಳಿತಕ್ಕೆ ನಿರಂತರ ದೂರುಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ.
ಕೆರೆ ಸಂರಕ್ಷಣಾ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಿಂದ ಆದೇಶ
ಗ್ರಾಮಸ್ಥರ ಪರವಾಗಿ ಶ್ರೀಧರ ಭಗವತ್ ಅವರು ಬೆಂಗಳೂರಿನ ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ’ಕ್ಕೆ ಇ-ಮೇಲ್ ಮುಖೇನ ನೀಡಿದ ದೂರನ್ನು ಪರಿಗಣಿಸಿದ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಹೈಕೋರ್ಟ್ ಆದೇಶಗಳು ಹಾಗೂ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮ 2014 ರನ್ವಯ ಸ್ಥಳ ಪರಿಶೀಲನೆ ನಡೆಸಿ, ಸರ್ಕಾರಿ ಕೆರೆಯನ್ನು ರಕ್ಷಿಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾಗರ ತಾಲೂಕು ಪಂಚಾಯಿತಿ ಇಒ ಅವರಿಗೆ ನಿರ್ದೇಶನ ನೀಡಿದ್ದರು.

ಅದರಂತೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಿಂದಲೂ ಸಾಗರ ತಹಶೀಲ್ದಾರ್ ಅವರಿಗೆ ಅಧಿಕೃತ ಪತ್ರ (ಸಂಖ್ಯೆ: SMGDC-GLE/GLE/13/2025) ರವಾನೆಯಾಗಿದ್ದು, ಕೆರೆ ಒತ್ತುವರಿ ಕುರಿತು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ಕೆರೆ ಜಾಗವನ್ನು ಸಂರಕ್ಷಿಸಲು ಕ್ರಮ ವಹಿಸುವಂತೆ ಸೂಚಿಸಲಾಗಿತ್ತು. ತಾಲೂಕು ಪಂಚಾಯಿತಿ ಇಒ ಅವರು ಸಹ ಹೆಗ್ಗೋಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುವಂತೆ ಜ್ಞಾಪನ ಪತ್ರಗಳನ್ನು ನೀಡಿದ್ದರು. ಆದರೇ ಪತ್ರ ಪತ್ರವಾಗಿಯೇ ಉಳಿಸಿದೆಯೇ ಹೊರತು, ಈವರೆಗೆ ಸ್ಥಳಕ್ಕೆ ಭೇಟಿ ನೀಡಿ, ಯಾವುದೇ ಕ್ರಮ ವಹಿಸಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಸರ್ವೆ ವಿಳಂಬ: ತೆರವು ಕಾರ್ಯಾಚರಣೆಗೆ ಅಡ್ಡಿ
ಉನ್ನತ ಅಧಿಕಾರಿಗಳು ಹಾಗೂ ಪ್ರಾಧಿಕಾರದಿಂದ ಸರಣಿ ನಿರ್ದೇಶನಗಳು ಬಂದಿದ್ದರೂ, ಕಂದಾಯ ಮತ್ತು ಭೂಮಾಪನಾ ಇಲಾಖೆಯಿಂದ ಕೆರೆಯ ಜಾಗದ ಅಧಿಕೃತ ಸರ್ವೆ ನಡೆಯದ ಕಾರಣ ಒತ್ತುವರಿ ತೆರವುಗೊಳಿಸಲು ಸಾಧ್ಯವಾಗಿಲ್ಲ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಅಸಹಾಯಕತೆ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ಹೆಗ್ಗೋಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಸಾಗರ ತಾಲೂಕು ಕಚೇರಿಯ ತಹಶೀಲ್ದಾರ್ ಹಾಗೂ ಭೂಮಾಪನಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಪ್ರತ್ಯೇಕ ಪತ್ರಗಳನ್ನು (ಪತ್ರ ಸಂ: 03/2026-27) ಸಲ್ಲಿಸಿದ್ದಾರೆ. "ಸರ್ವೇ ನಂ. 53 ರಲ್ಲಿನ 2 ಎಕರೆ 11 ಗುಂಟೆ ವಿಸ್ತೀರ್ಣದ ಕೆರೆಯನ್ನು ತಕ್ಷಣವೇ ಸರ್ವೆ ಮಾಡಿ, ಗಡಿ ಗುರುತು ನಿಗದಿಪಡಿಸಿಕೊಡಬೇಕು. ಗಡಿ ಗುರುತಿಸಿದರೆ ಮಾತ್ರ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕರ ಹಾಗೂ ಜನ-ಜಾನುವಾರುಗಳ ಬಳಕೆಗೆ ಅನುವು ಮಾಡಿಕೊಡಲು ಸಾಧ್ಯವಾಗುತ್ತದೆ" ಎಂದು ಪತ್ರದಲ್ಲಿ ತುರ್ತು ಮನವಿ ಮಾಡಿದ್ದಾರೆ.
ಜನ-ಜಾನುವಾರುಗಳಿಗೆ ಆಸರೆಯಾಗಿರುವ ನೈಸರ್ಗಿಕ ಜಲಮೂಲವನ್ನು ಉಳಿಸಿಕೊಳ್ಳಲು ಗ್ರಾಮಸ್ಥರು ಪಟ್ಟು ಹಿಡಿದಿದ್ದು, ಸಂಬಂಧಪಟ್ಟ ತಾಲೂಕು ಆಡಳಿತ ಹಾಗೂ ಸರ್ವೆ ಇಲಾಖೆ ಇನ್ನಾದರೂ ಸ್ಥಳಕ್ಕೆ ಭೇಟಿ ನೀಡಿ ಗಡಿ ಗುರುತು ಪೂರ್ಣಗೊಳಿಸಿ ಒತ್ತುವರಿ ತೆರವುಗೊಳಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು...