ಮಂಡ್ಯ : ಕ್ರೀಡೆಯಲ್ಲಿ ಸೋಲು - ಗೆಲುವು ಸಹಜ. ಆದರೆ, ಕ್ರೀಡಾಕೂಟದಲ್ಲಿ ಪಾಲ್ಗೋಳ್ಳುವ ಮೂಲಕ ಕ್ರೀಡಾ ಸ್ಫೂರ್ತಿ ಮೆರೆಯಬೇಕೆಂದು ಮದ್ದೂರು ತಾಲೂಕು ನೋಡಲ್ ಅಧಿಕಾರಿ ಹಾಗೂ ಪ್ರಾಂಶುಪಾಲೆ ಎ.ಸಿ.ಗೀತಾ ಅಭಿಪ್ರಾಯಪಟ್ಟರು.
ನಗರದ ಸೋಮನಹಳ್ಳಿಯ ಎಸ್.ಸಿ.ಎಂ.ಎಂ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ಕಾಲೇಜು) ಹಾಗೂ ಎಸ್.ಸಿ.ಎಂ.ಎಂ ಪದವಿಪೂರ್ವ ಕಾಲೇಜು ಸೋಮನಹಳ್ಳಿ ವತಿಯಿಂದ ಆಯೋಜಿಸಿದ್ದ 2026-27 ನೇ ಶೈಕ್ಷಣಿಕ ಸಾಲಿನ ಮದ್ದೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿದರು.
ಕ್ರೀಡಾಕೂಟಗಳು ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಆರೋಗ್ಯಯುತ ಜೀವನಕ್ಕೆ ಅತ್ಯಂತ ಅವಶ್ಯಕವಾಗಿವೆ. ನಿಯಮಿತವಾದ ಕ್ರೀಡೆ ದೇಹದ ಸದೃಢತೆಯನ್ನು ಕಾಪಾಡುತ್ತದೆ. ರಕ್ತ ಪರಿಚಲನೆ ಸುಧಾರಿಸಿ, ಒತ್ತಡ, ಆತಂಕ ಹಾಗೂ ಬೇಸರವನ್ನು ಕಡಿಮೆ ಮಾಡುತ್ತವೆ. ಮೆದುಳಿನ ಚುರುಕುತನವನ್ನು ಹೆಚ್ಚಿಸುವ ಜತೆಗೆ ಶಿಸ್ತು ಮತ್ತು ಸಮಯಪ್ರಜ್ಞೆ ಜೀವನದಲ್ಲಿ ಮೂಡಿಸುತ್ತದೆ ಎಂದರು.

ವಿದ್ಯಾರ್ಥಿಗಳು ತಂಡದಲ್ಲಿ ಭಾಗವಹಿಸುವುದರಿಂದ ಪರಸ್ಪರ ನಂಬಿಕೆ, ಒಗ್ಗಟ್ಟು ಮತ್ತು ನಾಯಕತ್ವದ ಗುಣಗಳು ಬೆಳೆಯುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯು ಸೋಲು ಗೆಲುವು ಲೆಕ್ಕ ಹಾಕದೆ ಕ್ರೀಡೆಯಲ್ಲಿ ಭಾಗವಹಿಸುವುದೇ ದೊಡ್ಡ ಬಹುಮಾನ ಎಂದು ಭಾವಿಸಿ ಕ್ರೀಡಾ ಸ್ಫೂರ್ತಿ ಮೆರೆಯಬೇಕು ಎಂದರು.
2 ದಿನಗಳು ನಡೆಯುವ ಕ್ರೀಡಾಕೂಟದಲ್ಲಿ ತಾಲೂಕಿನಿಂದ ಸುಮಾರು 23 ಕಾಲೇಜಿನಿಂದ 900 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಖೋ, ಖೋ, ಕಬಡ್ಡಿ, ವಾಲಿಬಾಲ್, ಥ್ರೋ ಬಾಲ್, ಅಥ್ಲೆಟಿಕ್ಸ್, ಗುಂಪು ಆಟೋಟಗಳಲ್ಲಿ ಭಾಗವಹಿಸಿ ಗಮನ ಸೆಳೆದರು.
ಎಸ್.ಸಿ.ಎಂ.ಎಂ ವಿದ್ಯಾಸಂಸ್ಥೆಯ ಕಾರ್ಯಕಾರಿ ಮಂಡಳಿ ಸದಸ್ಯೆ ಚೈತ್ರಾ ಪ್ರಕಾಶ್, ಪ್ರಾಂಶುಪಾಲ ಎಂ.ಎ. ರಮೇಶ್, ತಾಲೂಕು ದೈಹಿಕ ಪರಿವೀಕ್ಷಕ ಲೋಕೇಶ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪ್ರದೀಪ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಅಂಕೇಗೌಡ, ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಕಾಂತರಾಜು, ಖಜಾಂಚಿ ಶಿವಕುಮಾರ್, ಚನ್ನಕೃಷ್ಣಯ್ಯ, ಬಿ.ಎಸ್.ರವೀಲ, ಎಸ್.ನಾಗರಾಜು, ಪಿ.ಪ್ರಸಾದ್, ಕೆ.ಟಿ.ಸೋಮು ಸೇರಿದಂತೆ ಇತರರು ಹಾಜರಿದ್ದರು.