ಮೈಸೂರು: ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳಿಂದ ತಮಗೆ ಯಾವುದೇ ರೀತಿಯ ನೋಟಿಸ್ ಬಂದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಒಂದು ವೇಳೆ ಇಡಿ ಅಧಿಕಾರಿಗಳು ನೋಟಿಸ್ ನೀಡಿದರೆ ಖುದ್ದಾಗಿ ಹಾಜರಾಗಿ ಸೂಕ್ತ ಉತ್ತರ ನೀಡುತ್ತೇನೆ. ಆದರೆ, ನನ್ನ ಮೇಲೆ ಇಡಿ ರೈಡ್ ಯಾಕೆ ಆಯಿತು ಎಂಬ ವಿಷಯವನ್ನು ತಿಳಿದುಕೊಳ್ಳಲು ನನಗೂ ಸ್ವಲ್ಪ ಸಮಯ ಬೇಕು" ಎಂದು ತಿಳಿಸಿದರು.
ಇದೇ ವೇಳೆ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಯಾವುದೇ ರೀತಿಯ ಕಮಿಷನ್ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಕಮಿಷನ್ ಆರೋಪಗಳಿಗೆ ಸೂಕ್ತ ದಾಖಲೆಗಳಿರಬೇಕು. ಕಳೆದ 12 ವರ್ಷಗಳಲ್ಲಿ ಬಿಜೆಪಿಯ ಯಾವುದೇ ನಾಯಕರ ಮೇಲೆ ಇಡಿ ದಾಳಿ ನಡೆದಿಲ್ಲ, ಅವರ ಮೇಲೆ ದೂರು ನೀಡಿದರೂ ತನಿಖಾ ಸಂಸ್ಥೆಗಳು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು, "ರಾಜ್ಯದಲ್ಲಿ ಹೊಸ ಯೋಜನೆಗಳಿಗೆ ಸರ್ಕಾರದ ಬಳಿ ಹಣವಿಲ್ಲ" ಎಂಬ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಸತೀಶ್ ಜಾರಕಿಹೊಳಿ, ಆರ್ಥಿಕ ಇಲಾಖೆಯ ಕಾರ್ಯವೈಖರಿಯನ್ನು ವಿವರಿಸಿದರು. "ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಆರ್ಥಿಕ ಇಲಾಖೆಯು ನಿಗದಿತ ನಿಯಮಗಳಂತೆಯೇ ಪತ್ರ ಬರೆಯುತ್ತದೆ. ಅದರರ್ಥ ಸರ್ಕಾರದ ಬಳಿ ಹಣವೇ ಇಲ್ಲ ಎಂದಲ್ಲ.
ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಯೋಜನೆಗಳಿಗೆ ಸಂಪೂರ್ಣ ಹಣದ ಅನುದಾನವಿದೆ. ಆದರೆ ಬಜೆಟ್ ಹೊರತಾಗಿ ಹೊಸ ಯೋಜನೆಗಳನ್ನು ಘೋಷಿಸುವಾಗ ಇತಿಮಿತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂಬುದನ್ನಷ್ಟೇ ಆರ್ಥಿಕ ಇಲಾಖೆ ತಿಳಿಸಿದೆ. ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾದರೆ ಮುಂದಿನ ಬಜೆಟ್‌ನಲ್ಲಿ ಹಣ ಮೀಸಲಿಡಬೇಕಾಗುತ್ತದೆ ಅಷ್ಟೇ" ಎಂದು ಅವರು ಸ್ಪಷ್ಟನೆ ನೀಡಿದರು.