ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ನಡುವಿನ ಸಂಬಂಧದ ಕುರಿತು ಹಬ್ಬಿರುವ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. 'ಸಿದ್ದರಾಮಯ್ಯ ಆರ್ಮಿ' ಛಿದ್ರವಾಗಿದೆ ಎಂಬ ವದಂತಿಗಳನ್ನು ತಳ್ಳಿಹಾಕಿರುವ ಅವರು, "ನಾವು ಮತ್ತು ಸಿದ್ದರಾಮಯ್ಯ ಇಂದಿಗೂ ಅತ್ಯಂತ ಆತ್ಮೀಯರಾಗಿಯೇ ಇದ್ದೇವೆ. ಸಿದ್ದರಾಮಯ್ಯ ನಮಗೆ ಈಗಲೂ ಆರ್ಮಿ ಕ್ಯಾಪ್ಟನ್ ಇದ್ದಂತೆ, ನಾನು ಅದಕ್ಕೆ ವೈಸ್ ಕ್ಯಾಪ್ಟನ್" ಎಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಇತ್ತೀಚೆಗೆ ತಮ್ಮ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆದ ಬಳಿಕ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ತಮಗಷ್ಟೇ ಅಲ್ಲದೆ ಕುಟುಂಬಕ್ಕೂ ಸಾಂತ್ವನ ಹೇಳಿದ್ದಾರೆ ಎಂಬುದನ್ನು ಸಚಿವರು ಉಲ್ಲೇಖಿಸಿದರು. "ಒಂದು ಮನೆಯಿಂದ ಒಬ್ಬರು ಬಂದು ಸಾಂತ್ವನ ಹೇಳಿದರೆ ಸಾಕು, ಅದು ಇಡೀ ಕುಟುಂಬ ಸಾಂತ್ವನ ಹೇಳಿದಂತೆ. ಹೀಗಾಗಿ ನಮ್ಮ ನಡುವೆ ಯಾವುದೇ ಮನಸ್ತಾಪ ಅಥವಾ ಗೊಂದಲಗಳಿಲ್ಲ," ಎಂದು ಸ್ಪಷ್ಟಪಡಿಸುವ ಮೂಲಕ ನಾಯಕರ ನಡುವಿನ ಭಿನ್ನಾಭಿಪ್ರಾಯದ ಸುದ್ದಿಗೆ ತೆರೆ ಎಳೆದರು.
ಇದೇ ವೇಳೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾವೇಶದ ಕುರಿತು ಮಾತನಾಡಿದ ಅವರು, "ಮೊನ್ನೆ ಬೆಂಗಳೂರಿನಲ್ಲಿ ನಡೆದದ್ದು ‘ಅಹಿಂದ’ ಸಮಾವೇಶವಲ್ಲ, ಅದು ಕೇವಲ ಹಿಂದುಳಿದ ವರ್ಗಗಳ ಸಮಾವೇಶ. ಆ ಕಾರ್ಯಕ್ರಮವನ್ನು ಆಯೋಜನೆ ಮಾಡಿದವರು ನನ್ನನ್ನು ಕರೆದಿಲ್ಲ. ಕರೆದೇ ಇರುವಾಗ 'ಯಾಕೆ ನನ್ನನ್ನು ಕರೆದಿಲ್ಲ' ಎಂದು ನಾನು ಅವರ ಬಳಿ ಹೋಗಿ ಪ್ರಶ್ನೆ ಮಾಡಲು ಆಗುತ್ತದೆಯೇ?" ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.