ಬೆಂಗಳೂರು : ಕರ್ನಾಟಕದ ನಾಲ್ಕೂ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಬಸ್ ಪ್ರಯಾಣ ದರವನ್ನು ಹೆಚ್ಚಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.
ಸದನದಲ್ಇ ಬರ ಪರಿಸ್ಥಿತಿಯ ಕುರಿತ ಚರ್ಚೆ ವೇಳೆ ಹಾಲಿನ ದರ ಹೆಚ್ಚಳದ ಕುರಿತು ಕಾಂಗ್ರೆಸ್ ಸದಸ್ಯ ಎಸ್. ರವಿ ಪ್ರಸ್ತಾಪಿಸಿದಾಗ ಮಧ್ಯಪ್ರವೇಶಿಸಿ ಮಾತನಾಡಿದ ಸಚಿವರು, ರಾಜ್ಯದ ಸಾರಿಗೆ ನಿಗಮಗಳು ಸುಮಾರು ರೂ. 8,000 ಕೋಟಿ ನಷ್ಟದಲ್ಲಿ ಮುಳುಗಿವೆ ಎಂದು ವಿವರಿಸಿದರು. ಈಗಾಗಲೇ ನಾಲ್ಕು ಬಾರಿ ಡೀಸೆಲ್ ದರ ಏರಿಕೆಯಾಗಿದ್ದರೂ ಇದುವರೆಗೆ ಬಸ್ ಪ್ರಯಾಣ ದರ ಹೆಚ್ಚಿಸಿಲ್ಲ. ಆದರೆ, ಪ್ರಸ್ತುತ ಟಿಕೆಟ್ ದರವನ್ನು ಪರಿಷ್ಕರಿಸದಿದ್ದರೆ ನಿಗಮಗಳ ದೈನಂದಿನ ಕಾರ್ಯಾಚರಣೆ ಹಾಗೂ ನಿರ್ವಹಣೆ ಅಸಾಧ್ಯವಾಗಲಿದ್ದು, ಅನಿವಾರ್ಯವಾಗಿ ದರ ಏರಿಕೆ ಮಾಡುವ ಯೋಚನೆ ಇದೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ, ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಸಲಹೆ ನೀಡಿದಾಗ ಉತ್ತರಿಸಿದ ಅವರು, ಪ್ರಸ್ತುತ ಇರುವ ಸಿಬ್ಬಂದಿಗೇ ಸಕಾಲದಲ್ಲಿ ವೇತನ ನೀಡಲು ಸಾಧ್ಯವಾಗುತ್ತಿಲ್ಲ, ಇಂತಹ ಸಂದರ್ಭದಲ್ಲಿ ಹೊಸದಾಗಿ ಹುದ್ದೆಗಳನ್ನು ಭರ್ತಿ ಮಾಡಿ ಅವರಿಗೆ ವೇತನ ನೀಡುವುದು ಎಲ್ಲಿಂದ ಎಂದು ಪ್ರಶ್ನಿಸಿದರು. ವಿರೋಧ ಪಕ್ಷಗಳ ವಿರೋಧದ ಆತಂಕದಿಂದ ದರ ಹೆಚ್ಚಳಕ್ಕೆ ಹಿಂಜರಿಯಲಾಗುತ್ತಿದೆ ಎಂದು ಹೇಳಿದ ಸಚಿವರು, ಸಾರಿಗೆ ನಿಗಮಗಳ ನೈಜ ಆರ್ಥಿಕ ಪರಿಸ್ಥಿತಿಯನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ ಎಂದರು.