ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಪ್ರಸಿದ್ಧ ದೇವಸ್ಥಾನಗಳಲ್ಲಿ ಸರಣಿ ಕಳ್ಳತನವೆಸಗಿ ಕಾಣಿಕೆ ಹುಂಡಿಗಳನ್ನು ದೋಚುತ್ತಿದ್ದ ಕುಖ್ಯಾತ ಕಳ್ಳನೋರ್ವನನ್ನು ಸೊರಬ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಶಿಕಾರಿಪುರ ತಾಲೂಕಿನ ಪುಣೆದಹಳ್ಳಿ ನಿವಾಸಿ ರಾಕೇಶ್ (28) ಬಂಧಿತ ಆರೋಪಿ.
ಘಟನೆಯ ವಿವರ:
ಕಳೆದ ಆಗಸ್ಟ್ 26ರಂದು ಸೊರಬ ತಾಲೂಕಿನ ಕುಂಬತ್ತಿ ಗ್ರಾಮದ ಶ್ರೀ ದುರ್ಗಾಂಬಾ ದೇವಸ್ಥಾನದ ಕಾಣಿಕೆ ಹುಂಡಿಯನ್ನು ಅಪರಿಚಿತ ದುಷ್ಕರ್ಮಿಗಳು ಒಡೆದು ಹಣ ಸಮೇತ ಕದ್ದೊಯ್ದಿದ್ದರು. ಈ ಸಂಬಂಧ ದೇವಸ್ಥಾನದ ಆಡಳಿತ ಮಂಡಳಿ ನೀಡಿದ ದೂರಿನನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 154/2026 ಹಾಗೂ ಬಿಎನ್‌ಎಸ್ ಕಲಂ 305, 331(4) ರ ಅಡಿಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಕಾರ್ಯಾಚರಣೆ:
ದೇವಸ್ಥಾನಗಳಲ್ಲಿ ಸತತವಾಗಿ ನಡೆಯುತ್ತಿದ್ದ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ (ಎಸ್ಪಿ) ನಿಖಿಲ್ ಬಿ. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಎ.ಜಿ. ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಶಿಕಾರಿಪುರ ಉಪವಿಭಾಗದ ಡಿವೈಎಸ್ಪಿ ಕೇಶವ್ ಅವರ ನಿರ್ದೇಶನದಲ್ಲಿ, ಸೊರಬ ಸಿಪಿಐ ಮಹಾಂತೇಶ್ ಕಂಬಿ ಅವರ ಮೇಲ್ವಿಚಾರಣೆಯಲ್ಲಿ ತನಿಖೆ ತೀವ್ರಗೊಂಡಿತ್ತು. ಸೊರಬ ಪಿಎಸ್‌ಐ ನವೀನ್ ಎಂ.ಎಚ್. ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ರಾಘವೇಂದ್ರ ಮತ್ತು ವಿನಯ್ ಅವರನ್ನೊಳಗೊಂಡ ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಶಿಕಾರಿಪುರದ ರಾಕೇಶ್‌ನನ್ನು ಹೆಡೆಮುರಿ ಕಟ್ಟಿದೆ.
ಮೂರು ದೇವಸ್ಥಾನಗಳಲ್ಲಿ ಕಳ್ಳತನ:
ಬಂಧಿತ ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಸ್ಫೋಟಕ ಸತ್ಯ ಹೊರಬಿದ್ದಿದೆ. ಈತ ತನ್ನ ಸಹಚರ ನವೀನ್ ಅಲಿಯಾಸ್ ದುರ್ಗಾ ಎಂಬಾತನೊಂದಿಗೆ ಸೇರಿಕೊಂಡು ವ್ಯವಸ್ಥಿತವಾಗಿ ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಸೊರಬದ ಕುಂಬತ್ತಿ ದುರ್ಗಾಂಬಾ ದೇವಾಲಯದ ಜೊತೆಗೆ, ಜಂಬಾನಿ ಗ್ರಾಮದ ಮಾರಿಕಾಂಬಾ ದೇವಸ್ಥಾನ ಹಾಗೂ ಶಿರಾಳಕೊಪ್ಪ ಸಮೀಪದ ಬಸನಂದಿಹಳ್ಳಿ ಶ್ರೀ ಚನ್ನಬಸವೇಶ್ವರ ದೇವಸ್ಥಾನದಲ್ಲೂ ಇವರಿಬ್ಬರು ಕಾಣಿಕೆ ಹುಂಡಿಗಳನ್ನು ಒಡೆದು ಹಣ ದೋಚಿರುವುದಾಗಿ ಒಪ್ಪಿಕೊಂಡಿದ್ದಾರೆ.
ಬಂಧಿತ ಆರೋಪಿ ರಾಕೇಶ್‌ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಮತ್ತೋರ್ವ ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತನಿಖಾ ತಂಡದ ಕ್ಷಿಪ್ರ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು...