ಬೆಂಗಳೂರು: ಬಹುಕೋಟಿ ಹೂಡಿಕೆ ವಂಚನೆ ಆರೋಪ ಹೊತ್ತಿದ್ದ ಆ್ಯಂಬಿಡೆಂಟ್ ಕಂಪನಿ ಪ್ರಕರಣದಿಂದ ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಆಪ್ತ ಮೆಹಫೂಜ್ ಅಲಿ ಖಾನ್ ಅವರನ್ನು ಆರೋಪಮುಕ್ತಗೊಳಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ.
ಸುಮಾರು 8 ತಿಂಗಳ ವಿಳಂಬದ ನಂತರ ಸರ್ಕಾರ ಸಲ್ಲಿಸಿರುವ ಈ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗ್ಡೆ ಅವರು, ಜನಾರ್ದನ ರೆಡ್ಡಿ ಹಾಗೂ ಮೆಹಫೂಜ್ ಅಲಿ ಖಾನ್‌ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದ್ದಾರೆ.
ಏನಿದು ಪ್ರಕರಣ?
ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿದ್ದ ಆ್ಯಂಬಿಡೆಂಟ್ ಸಂಸ್ಥೆಯ ಮಾಲೀಕರಾದ ಸೈಯದ್ ಅಹ್ಮದ್ ಫರೀದ್ ಮತ್ತು ಸೈಯದ್ ಅಫಾಕ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ಆರಂಭಿಸಿತ್ತು. ಈ ತನಿಖೆಯಿಂದ ಪಾರು ಮಾಡುವ ಭರವಸೆ ನೀಡಿ ಜನಾರ್ದನ ರೆಡ್ಡಿ ಹಾಗೂ ಮೆಹಫೂಜ್ ಅಲಿ ಖಾನ್ ಅವರು ಸಂಸ್ಥೆಯಿಂದ ಬರೋಬ್ಬರಿ ₹20 ಕೋಟಿ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ತನಿಖೆ ನಡೆಸಿ ರೆಡ್ಡಿಯನ್ನು ಬಂಧಿಸಿದ್ದರು. ನಂತರ ಅವರಿಗೆ ಜಾಮೀನು ಮಂಜೂರಾಗಿತ್ತು.
ಆರೋಪಮುಕ್ತಗೊಳಿಸಿದ್ದ ವಿಶೇಷ ಕೋರ್ಟ್:
ಆದರೆ, ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಅಭಿಪ್ರಾಯಪಟ್ಟಿದ್ದ ಜನಪ್ರತಿನಿಧಿಗಳ ಕೋರ್ಟ್, 2025ರ ಅಕ್ಟೋಬರ್ 22ರಂದು ಇಬ್ಬರನ್ನೂ ಪ್ರಕರಣದಿಂದ ಕೈಬಿಟ್ಟು (ಡಿಸ್ಚಾರ್ಜ್) ಆದೇಶ ಹೊರಡಿಸಿತ್ತು.
ಇದೀಗ ಆ ತೀರ್ಪನ್ನು ರದ್ದುಗೊಳಿಸಿ, ಇಬ್ಬರ ಮೇಲಿನ ವಿಚಾರಣೆಯನ್ನು ಮುಂದುವರಿಸುವಂತೆ ಕೋರಿ ಸರ್ಕಾರ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದು, ಹೈಕೋರ್ಟ್ ನೋಟಿಸ್ ಜಾರಿ ಮಾಡುವುದರೊಂದಿಗೆ ರೆಡ್ಡಿಗೆ ಮತ್ತೆ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಕಂಡುಬಂದಿದೆ.