ಬೆಂಗಳೂರು: ವಿಧಾನಸೌಧದ ಸದನದ ಕಲಾಪದ ವೇಳೆ ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರ ನಡುವೆ ತೀವ್ರ ವಾಗ್ವಾದ ನಡೆಯುವ ಮೂಲಕ ಬಹಿರಂಗ ಜಟಾಪಟಿ ಏರ್ಪಟ್ಟಿದೆ. ಇಂಡಿ ಶಾಸಕ ಯಶವಂತರಾಯ ಗೌಡ ಅವರ ರಾಜೀನಾಮೆ ಗದ್ದಲದ ನಡುವೆಯೇ ಈ ಘಟನೆ ನಡೆದಿದ್ದು, ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹಾಗೂ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ನಡುವೆ ಸದನದ ಒಳಗಡೆಯೇ ಮಾತಿನ ಚಕಮಕಿ ನಡೆದಿದೆ.
ಶಾಸಕ ನಾರಾಯಣಸ್ವಾಮಿ ಹಾಗೂ ಸುಬ್ಬಾರೆಡ್ಡಿ ಕುಳಿತಿದ್ದ ಆಸನದ ಬಳಿಗೆ ತೆರಳಿದ ಶಾಸಕಿ ರೂಪಕಲಾ ಶಶಿಧರ್, ಏರು ಧ್ವನಿಯಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ಮಾತನಾಡುವ ಭರದಲ್ಲಿ ತೀವ್ರ ಸಿಟ್ಟಿಗೆದ್ದ ರೂಪಕಲಾ ಅವರು, "ಪ್ರತಿ ಬಾರಿಯೂ ನನ್ನನ್ನು ಯಾಕೆ ಟಾರ್ಗೆಟ್ ಮಾಡುತ್ತೀರಾ?" ಎಂದು ಆಕ್ರೋಶ ವ್ಯಕ್ತಪಡಿಸುತ್ತಾ ಕೈ ಎತ್ತಿ ಮೇಜು (ಟೇಬಲ್) ಕುಟ್ಟಿದ್ದಾರೆ. ಸದನದ ನಡುವೆಯೇ ಅವರು ಜೋರಾಗಿ ಕೂಗಾಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್. ಅಶೋಕ್, "ಯಾಕಮ್ಮಾ ಟೇಬಲ್ ಕುಟ್ಟುತ್ತಿದ್ದೀಯಾ? ಸುಮ್ಮನಿರು, ಇಲ್ಲದಿದ್ದರೆ ಇನ್ನೊಂದು ಗಲಾಟೆ ಇಲ್ಲೇ ಶುರುವಾಗುತ್ತದೆ" ಎಂದು ಎಚ್ಚರಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಇತರ ಶಾಸಕರು ಶಾಸಕಿ ರೂಪಕಲಾ ಅವರನ್ನು ಸಮಾಧಾನಪಡಿಸಿ ಸದನದಿಂದ ಹೊರಗೆ ಕರೆದುಕೊಂಡು ಹೋದರು. ಹೊರಗೆ ತೆರಳುವಾಗ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಕಣ್ಣೀರು ಹಾಕುತ್ತಲೇ ತೆರಳಿದ ದೃಶ್ಯ ಕಂಡುಬಂತು.