ಬೆಂಗಳೂರು: ರಾಜ್ಯದ ಆರ್ಥಿಕ ಪರಿಸ್ಥಿತಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಹಾಗೂ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ ಎಂದು ಆರೋಪಿಸಿ, ಪ್ರತಿಪಕ್ಷ ಬಿಜೆಪಿಯ ನಾಯಕರು ಹಾಗೂ ಶಾಸಕರು ಬುಧವಾರ ವಿಧಾನಸೌಧದ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಹಣಕಾಸು ಇಲಾಖೆಯ ಗಂಭೀರ ಎಚ್ಚರಿಕೆ
ರಾಜ್ಯದಲ್ಲಿ ಲಭ್ಯವಿರುವ ಸೀಮಿತ ಆರ್ಥಿಕ ಸಂಪನ್ಮೂಲಗಳನ್ನು ಗಮನದಲ್ಲಿಟ್ಟುಕೊಂಡು, ಭಾರಿ ವೆಚ್ಚದ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗ ತೀವ್ರ ಜಾಗ್ರತೆ ವಹಿಸಬೇಕೆಂದು ಕರ್ನಾಟಕ ಹಣಕಾಸು ಇಲಾಖೆ ರಾಜ್ಯ ಸರ್ಕಾರಕ್ಕೆ ಮಂಗಳವಾರ ಎಚ್ಚರಿಕೆ ನೀಡಿತ್ತು. ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸದ ಯೋಜನೆಗಳಿಗೆ ಅನುಮೋದನೆ ನೀಡಿದರೆ ನಗದು ಹರಿವು ಹಾಗೂ ಧನಸಹಾಯ ನಿರ್ವಹಣೆಯಲ್ಲಿ ಗಂಭೀರ ಸವಾಲುಗಳು ಎದುರಾಗಲಿವೆ ಎಂದು ಇಲಾಖೆಯು 'ವಾಸ್ತವಿಕ ಮತ್ತು ವಿವೇಕಯುತ' ನಿರ್ಧಾರಕ್ಕೆ ಸಲಹೆ ನೀಡಿತ್ತು.
ವಿಶೇಷವಾಗಿ 2026-27 ಮತ್ತು 2027-28ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದ ಸುಮಾರು ₹10,000 ಕೋಟಿ ವೆಚ್ಚದ 'ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ' ಪ್ರಸ್ತಾವನೆಯನ್ನು ಪರಿಶೀಲಿಸುವ ಸಂದರ್ಭದಲ್ಲಿ ಹಣಕಾಸು ಇಲಾಖೆಯು ಈ ಆತಂಕಕಾರಿ ಟಿಪ್ಪಣಿಯನ್ನು ಸಲ್ಲಿಸಿತ್ತು.
ವಿಧಾನಸೌಧದಲ್ಲಿ ಭುಗಿಲೆದ್ದ ಕಮಲ ನಾಯಕರ ಆಕ್ರೋಶ
ಹಣಕಾಸು ಇಲಾಖೆಯ ಈ ಟಿಪ್ಪಣಿ ಬೆನ್ನಲ್ಲೇ ಆಕ್ರೋಶಗೊಂಡ ಬಿಜೆಪಿ ನಾಯಕರು, ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಧರಣಿ ಕುಳಿತರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಸಾಲು ಸಾಲು ಬಿಜೆಪಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಭಾಗವಹಿಸಿದ್ದರು.
ರಾಜ್ಯ ಸರ್ಕಾರವು ಆರ್ಥಿಕ ಮಿತಿಗಳ ನಡುವೆಯೂ ಜನರಿಗೆ 'ಸುಳ್ಳು ಭರವಸೆಗಳನ್ನು' ನೀಡುತ್ತಾ ಆಡಳಿತ ನಡೆಸುತ್ತಿದೆ. ಹಣಕಾಸು ಇಲಾಖೆಯ ಅಧಿಕೃತ ಹೇಳಿಕೆಯೇ ಸರ್ಕಾರದ ಆರ್ಥಿಕ ದಿವಾಳಿತನವನ್ನು ಎತ್ತಿಹಿಡಿದಿದೆ ಎಂದು ನಾಯಕರು ಆರೋಪಿಸಿದರು.
ಬಾಕಿ ಬಿಲ್‌ಗಳ ಬೆಟ್ಟ: ರೂ. 36,136 ಕೋಟಿ ಪಾವತಿ ಬಾಕಿ!
ಹಣಕಾಸು ಇಲಾಖೆಯ ಅಂದಾಜಿನ ಪ್ರಕಾರ, 2026-27ನೇ ಸಾಲಿನ ಕರ್ನಾಟಕದ ವಿತ್ತೀಯ ಕೊರತೆಯು 'ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ' (FRBM) ಕಾಯ್ದೆಯಡಿ ನಿಗದಿಪಡಿಸಿದ ಶೇಕಡಾ 3ರ ಮಿತಿಗೆ ತೀರಾ ಹತ್ತಿರ ಅಂದರೆ ಶೇಕಡಾ 2.95ರಷ್ಟ ತಲುಪುವ ನಿರೀಕ್ಷೆಯಿದೆ.
ಇದಷ್ಟೇ ಅಲ್ಲದೆ, ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಕಾಮಗಾರಿಗಳ ಒಟ್ಟು ಬಾಕಿ ವೆಚ್ಚ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದ್ದು, ₹2 ಲಕ್ಷ ಕೋಟಿ ಗಡಿ ದಾಟಿದೆ. ಪ್ರಮುಖವಾಗಿ ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಲ್ಲಿ ಒಂದರಲ್ಲೇ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಾಕಿ ಬಿಲ್‌ಗಳ ಮೊತ್ತ ಬರೋಬ್ಬರಿ ₹36,136 ಕೋಟಿಗೆ ತಲುಪಿದೆ ಎಂದು ಇಲಾಖೆ ಬಹಿರಂಗಪಡಿಸಿದೆ.
ಸಚಿವರ ಸ್ಪಷ್ಟನೆ
ಇನ್ನೊಂದೆಡೆ, ಹಣಕಾಸು ಇಲಾಖೆಯ ಈ ಸಲಹೆ ಮತ್ತು ಎಚ್ಚರಿಕೆಯನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಹಾಗೂ ಹಣಕಾಸು ಖಾತೆಯ ಉಸ್ತುವಾರಿ ವಹಿಸಿರುವ ಡಿ.ಕೆ. ಶಿವಕುಮಾರ್, "ಸರ್ಕಾರದ ಹಿತದೃಷ್ಟಿ ಹಾಗೂ ಆರ್ಥಿಕ ಶಿಸ್ತಿನ ದೃಷ್ಟಿಯಿಂದ ಹಣಕಾಸು ಇಲಾಖೆ ಎಚ್ಚರಿಕೆ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ," ಎಂದು ಹೇಳಿ ಇಲಾಖೆಯ ನಿಲುವನ್ನು ಒಪ್ಪಿಕೊಂಡಿದ್ದಾರೆ.