ಬೆಂಗಳೂರು: ರಾಜ್ಯ ಸರ್ಕಾರದ ಮೇಲೆ ಸಾಲದ ಹೊರೆ ಹಾಗೂ ಬದ್ಧ ವೆಚ್ಚಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಆರ್ಥಿಕ ಇಲಾಖೆಯು ಹೊಸ ಯೋಜನೆಗಳಿಗೆ ಹಣಕಾಸು ಅನುಮೋದನೆ ನೀಡಲು ತೀವ್ರ ಅಭ್ಯಂತರ ವ್ಯಕ್ತಪಡಿಸಿದೆ. ಆರ್ಥಿಕ ಕೊರತೆ ಮತ್ತು ತೀವ್ರ ಬರ ಪರಿಸ್ಥಿತಿಯ ಸವಾಲುಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ನೂತನ ಪ್ರಸ್ತಾಪಗಳನ್ನು ಸದ್ಯಕ್ಕೆ ತಡೆಹಿಡಿಯುವಂತೆ ಸೂಚಿಸಲಾಗಿದೆ.
ಆರ್ಥಿಕ ಇಲಾಖೆಯ ವರದಿಯಲ್ಲೇನಿದೆ?
-
ಆರ್ಥಿಕ ಕೊರತೆ ಹೆಚ್ಚಳ: 2026-27ನೇ ಸಾಲಿನಲ್ಲಿ ರಾಜ್ಯದ ಕಂದಾಯ ಕೊರತೆ ₹22,957 ಕೋಟಿಗೆ ತಲುಪಿದೆ. ರಾಜ್ಯದ ಒಟ್ಟು ಸಂಗ್ರಹಿತ ಸಾಲದ ಬಾಧ್ಯತೆಯು (Cumulative Liabilities) ಜಿಎಸ್‌ಡಿಪಿಯ ಶೇ. 24.94 ರಷ್ಟಿದ್ದು, ನಿಗದಿತ ಪರಿಮಿತಿಯ ಕೊನೆಯಂಚಿನಲ್ಲಿದೆ. ರಾಜ್ಯವು ತನ್ನ ಸಾಲ ಪಡೆಯುವ ಸಾಮರ್ಥ್ಯವನ್ನು ಈಗಾಗಲೇ ಬಹುತೇಕ ಸಂಪೂರ್ಣವಾಗಿ ಬಳಸಿಕೊಂಡಿದೆ.
-
ಕೋಟಿ ಕೋಟಿ ಬಾಕಿ ಬಿಲ್: ಲೋಕೋಪಯೋಗಿ (PWD), ಜಲಸಂಪನ್ಮೂಲ, ಸಣ್ಣ ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ಸುಮಾರು ₹36,136 ಕೋಟಿ ಮೌಲ್ಯದ ಬಾಕಿ ಕಾಮಗಾರಿಗಳ ವೆಚ್ಚವಿದೆ.
-
ಹೊಸ ಅನುದಾನ ಕಷ್ಟಸಾಧ್ಯ: ಬಜೆಟ್‌ನಲ್ಲಿ ನಿಗದಿಪಡಿಸಿದ ಯೋಜನೆಗಳ ಹೊರತಾಗಿ, ಹೊಸ ಯೋಜನೆಗಳಿಗೆ ಹೆಚ್ಚುವರಿ ಹಣ ಒದಗಿಸಲು ಇಲಾಖೆಯಲ್ಲಿ ಅವಕಾಶವಿಲ್ಲ. ಹೊಸ ಯೋಜನೆಗಳಿಗೆ ಅನುದಾನ ನೀಡಬೇಕಾದರೆ ಇತರ ಇಲಾಖೆಗಳ ಅನುದಾನಕ್ಕೆ ಕಡಿತಗೊಳಿಸಬೇಕಾಗುತ್ತದೆ.
ಬರ ಪರಿಹಾರದ ಹೆಚ್ಚುವರಿ ಹೊರೆ
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿದ್ದು, ಸಂಕಷ್ಟದಲ್ಲಿರುವ ಜನರ ಜೀವನೋಪಾಯಕ್ಕೆ ಹೆಚ್ಚಿನ ಹಣದ ಅಗತ್ಯವಿದೆ. ಬರ ಪರಿಹಾರ ಹಾಗೂ ಕುಡಿಯುವ ನೀರಿನ ಪೂರೈಕೆಗೆ ಬಜೆಟ್‌ಗಿಂತ ಹೆಚ್ಚಿನ ಅನುದಾನ ಬೇಕಾಗಬಹುದು. ಇದಲ್ಲದೆ, ಐಪಿ ಸೆಟ್‌ಗಳ (ಪಂಪ್‌ಸೆಟ್) ವಿದ್ಯುತ್ ಸರಬರಾಜು ಸಬ್ಸಿಡಿಗಾಗಿ ಇಂಧನ ಇಲಾಖೆಗೆ ಹೆಚ್ಚುವರಿಯಾಗಿ ₹4,000 ರಿಂದ ₹5,000 ಕೋಟಿ ವೆಚ್ಚವಾಗುವ ಸಾಧ್ಯತೆಯಿದೆ.
ಸಂಪುಟ ಸಭೆಯ ಮುಂದೆ ಪ್ರಸ್ತಾಪ
ಈಗಾಗಲೇ ಹಲವು ಇಲಾಖೆಗಳಿಂದ ಸಾವಿರಾರು ಕೋಟಿ ರೂಪಾಯಿಗಳ ಹೆಚ್ಚುವರಿ ಅನುದಾನದ ಬೇಡಿಕೆ ಸಲ್ಲಿಕೆಯಾಗಿದೆ. ಆದರೆ, ಸಂಪನ್ಮೂಲ ಕ್ರೋಡೀಕರಣ ಅಂತಿಮಗೊಳ್ಳುವವರೆಗೆ ಅಥವಾ ಬಜೆಟ್ ಸ್ಥಿತಿ ಸ್ಪಷ್ಟವಾಗುವವರೆಗೆ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಕಷ್ಟಕರ ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.
ಮುಖ್ಯಮಂತ್ರಿಗಳ ಆದೇಶದಂತೆ, ಆರ್ಥಿಕ ಇಲಾಖೆಯ ಈ ಎಲ್ಲಾ ಅಭಿಪ್ರಾಯಗಳು ಹಾಗೂ ಎಚ್ಚರಿಕೆಯ ಅಂಶಗಳೊಂದಿಗೆ ಪ್ರಸ್ತಾಪವನ್ನು ಸಚಿವ ಸಂಪುಟ ಸಭೆಯ ಅನುಮೋದನೆಗಾಗಿ ಕಳುಹಿಸಲು ಆಡಳಿತಾತ್ಮಕ ಇಲಾಖೆಗೆ ತಿಳಿಸಲಾಗಿದೆ.