LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೇಳಿದ್ದು, ನೋಡಿದ್ದೆಲ್ಲ ಆಯುರ್ವೇದವಲ್ಲ; ವೈರಲ್ ಸಲಹೆಗಿಂತ 'ವೈದ್ಯರ ಸಲಹೆ' ಅಗತ್ಯ!

ಹಗರಿಬೊಮ್ಮನಹಳ್ಳಿ: ಆಧುನಿಕ ಜೀವನಶೈಲಿಯಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳ ಪ್ರಭಾವದಿಂದ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚಾಗಿದೆ. ವಿಶೇಷವಾಗಿ ಉತ್ತಮ ಜೀವನಶೈಲಿ, ಆಹಾರ ಪದ್ಧತಿ, ಭಾರತೀಯ ಚಿಕಿತ್ಸಾ ಪದ್ಧತಿಯಾದ ಆಯುರ್ವೇದ,ಯೋಗದ ಬಗ್ಗೆ ಜನರ ಆಸಕ್ತಿ ಗಣನೀಯವಾಗಿ ಹೆಚ್ಚುತ್ತಿದೆ.ನಿಜಕ್ಕೂ ಈ ಬೆಳವಣಿಗೆ ಸ್ವಾಗತರ್ಹ. 

ಆದರೆ ಆಯುರ್ವೇದದ ಬಗ್ಗೆ ಆಸಕ್ತಿ ಹೆಚ್ಚಿದಂತೆ ಆಯುರ್ವೇದದ ಬಗ್ಗೆ ತಪ್ಪು ಮಾಹಿತಿಗಳು ಮತ್ತು ಇದರ ಹೆಸರಿನಲ್ಲಿ ವ್ಯಾಪಾರ ಮಾಡುತ್ತಿರುವವರು ಕೂಡ ಹೆಚ್ಚುತ್ತಿದ್ದಾರೆ. ಇಂತಹ ಡಿಜಿಟಲ್ ಯುಗದಲ್ಲಿ ಯಾವುದೇ ಮಾಹಿತಿಯನ್ನು ಜನರಿಗೆ ಕ್ಷಣಮಾತ್ರದಲ್ಲಿ ತಲುಪಿಸಬಹುದು.ಆದರೆ ಜನರು ಮಾಹಿತಿಗಳ ಸತ್ಯಾಸತ್ಯತೆಯ ಬಗ್ಗೆ ಪರಿಶೀಲಿಸುವುದು ಅನಿವಾರ್ಯವಾಗಿದೆ. ಈ ವಿಷಯವು ಆಯುರ್ವೇದ ಕ್ಷೇತ್ರಕ್ಕೂ ಅನ್ವಯ. ಆದ್ದರಿಂದ ಕೇಳಿದ್ದು, ನೋಡಿದ್ದೆಲ್ಲ ಆಯುರ್ವೇದವಲ್ಲ ಎಂಬುದು ಅಷ್ಟೇ ಸತ್ಯ. 

ಆಯುರ್ವೇದದ ಹೆಸರಿನಲ್ಲಿರುವುದು ಎಲ್ಲವೂ ಆಯುರ್ವೇದವೇ? 

ಆಯುರ್ವೇದವು ಕೇವಲ ಗಿಡಮೂಲಿಕೆ ಬಗ್ಗೆ ವಿವರಿಸುವ ಸಸ್ಯಶಾಸ್ತ್ರವಲ್ಲ. ಅಥವಾ ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನು ಮಿಶ್ರಣ ಮಾಡಿ ಸೇವಿಸುವುದಲ್ಲ. ಸಾವಿರಾರು ವರ್ಷಗಳ ಪರಂಪರೆ,ಸಿದ್ದಾಂತ, ಔಷಧ ದ್ರವ್ಯಗಳ ಗುಣಕರ್ಮ ಮತ್ತು ಅವುಗಳ ಸಂಸ್ಕರಣ ವಿಧಾನ, ಪ್ರಮಾಣ, ರೋಗಿಯ ಸ್ಥಿತಿ ಮತ್ತು ಚಿಕಿತ್ಸಾತತ್ವಗಳನ್ನು ಒಳಗೊಂಡಿರುವ ಒಂದು ಸುವ್ಯವಸ್ಥಿತ ವೈದ್ಯಕೀಯ ಶಾಸ್ತ್ರವಾಗಿದೆ. 

ಆಯುರ್ವೇದದಲ್ಲಿ "ಒಂದೇ ಔಷಧಿ ಎಲ್ಲರಿಗೂ" ಎಂಬ ಸರಳ ವಿಧಾನವಿಲ್ಲ. ವ್ಯಕ್ತಿಯ ದೇಹ ಪ್ರಕೃತಿ, ಜೀರ್ಣಕ್ರಿಯೆ ಸ್ಥಿತಿ,ರೋಗ ಮತ್ತು ರೋಗಿಯ ಸ್ಥಿತಿ ಮುಂತಾದ ಅಂಶಗಳನ್ನು ಪರಿಗಣಿಸಿ ಔಷಧಿ ಹಾಗೂ ಚಿಕಿತ್ಸೆಯನ್ನು ರೂಪಿಸುವುದು ಅದರ ವೈಶಿಷ್ಟ್ಯ.ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಅಥವಾ ಯಾವುದೋ ಜಾಹೀರಾತಿನಲ್ಲಿ "ಈ ಒಂದು ಪುಡಿ ತೆಗೆದುಕೊಂಡರೆ ಈ ಸಮಸ್ಯೆ ಶಾಶ್ವತವಾಗಿ ಗುಣವಾಗುತ್ತೆ" ಎಂಬ ಹೇಳಿಕೆಯೂ ಅಧಿಕೃತ ಅಭಿಪ್ರಾಯವೆಂದು ತಿಳಿದುಕೊಳ್ಳುವ ಮುನ್ನ ಎಚ್ಚರ. 

'Natural' ಎಂದರೆ ಯಾವಾಗಲೂ 'safe' ಎಂದರ್ಥವೇ? 

ಇದು ಹೆಚ್ಚು ಗಮನ ಕೊಡಬೇಕಾದ ಮತ್ತೊಂದು ವಿಷಯ. ಸಾಮಾನ್ಯವಾಗಿ ನೈಸರ್ಗಿಕ, ಹರ್ಬಲ್, ಆಯುರ್ವೇದಿಕ್ ಹಾಗೂ 100% safe ಎಂಬ ಪದಗಳನ್ನು ಒಳಗೊಂಡ ಉತ್ಪನ್ನಗಳು ಸಂಪೂರ್ಣವಾಗಿ ಅಪಾಯ ರಹಿತ ಎಂಬ ಪರಿಕಲ್ಪನೆ ತಪ್ಪು. ಏಕೆಂದರೆ ಔಷಧೀಯ ಸಸ್ಯಗಳಲ್ಲಿಯೂ ಕೂಡ ಸಕ್ರಿಯ ರಾಸಾಯನಿಕ(Active constituents)ಘಟಕಗಳಿರುತ್ತವೆ. ಅವುಗಳು ದೇಹದ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತವೆ.ಆದ್ದರಿಂದ ಯಾವ ದ್ರವ್ಯವನ್ನು ಎಷ್ಟು ಪ್ರಮಾಣದಲ್ಲಿ, ಎಷ್ಟು ಕಾಲ, ಯಾರಿಗೆ ಮತ್ತು ಯಾವ ಪರಿಸ್ಥಿತಿಯಲ್ಲಿ ಬಳಸಬೇಕು ಎಂಬುದು ಅತಿ ಮುಖ್ಯವಾದ ಅಂಶ. 

ಒಬ್ಬರಿಗೆ ಸೂಕ್ತವಾಗಿರುವ ಔಷಧಿ ಮತ್ತೊಬ್ಬರಿಗೆ ಸೂಕ್ತವಾಗದೆ ಇರಬಹುದು ಹೀಗಾಗಿ ನೈಸರ್ಗಿಕವಾಗಿದ್ದರಿಂದ ಏನು ಬೇಕಾದರೂ ತೆಗೆದುಕೊಳ್ಳಬಹುದು ಎಂಬ ಮನೋಭಾವ ತಪ್ಪು. 

ಏಳು ದಿನಗಳಲ್ಲಿ ಶಾಶ್ವತ ಗುಣಮುಖತೆ - ಇಂತಹ ಹೇಳಿಕೆಗಳ ಬಗ್ಗೆ ಎಚ್ಚರ!

ಆರೋಗ್ಯ ಕ್ಷೇತ್ರದಲ್ಲಿ ಜನರ ಭಾವನೆಗಳನ್ನು ಬಳಸಿಕೊಂಡು ಉತ್ಪನ್ನಗಳನ್ನು ಮಾರುವ ಪ್ರವೃತ್ತಿ ಹೊಸದಲ್ಲ. ಆದರೆ ಸಾಮಾಜಿಕ ಜಾಲತಾಣಗಳು ಇದನ್ನು ಇನ್ನಷ್ಟು ಪುಷ್ಟಿಗೊಳಿಸಿದೆ. 

ಕೇವಲ ಎಳು ದಿನಗಳಲ್ಲಿ ಸಮಸ್ಯೆಗೆ ಸಂಪೂರ್ಣ ಪರಿಹಾರ,ಒಂದೇ ಔಷಧಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ, ಯಾವುದೇ Side effect ಇಲ್ಲ ಮುಂತಾದ ಅನೇಕ ಹೇಳಿಕೆಗಳಿಂದ ಎಚ್ಚರವಿರಬೇಕು. ವೈದ್ಯಕೀಯ ವಿಜ್ಞಾನದಲ್ಲಿ ಪ್ರತಿಯೊಂದು ಔಷಧಿಗೂ ಪ್ರತಿಯೊಬ್ಬ ರೋಗಿಯ ಪ್ರತಿಕ್ರಿಯೆ ಭಿನ್ನವಾಗಿರುತ್ತದೆ. ರೋಗದ ಕಾರಣ, ತೀವ್ರತೆ, ರೋಗಿಯ ಬಲ ಮತ್ತು ವಯಸ್ಸು, ಇತರೆ ಕಾಯಿಲೆಗಳು ಹಾಗೂ ಜೀವನ ಶೈಲಿ ಸೇರಿದಂತೆ ಅನೇಕ ಅಂಶಗಳು ಚಿಕಿತ್ಸೆಯ ಫಲಿತಾಂಶವನ್ನು ಪ್ರಭಾವಿಸುತ್ತವೆ. 

ಸಾಮಾಜಿಕ ಜಾಲತಾಣದಲ್ಲಿನ 'ವೈರಲ್' ಸಲಹೆ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ

ಒಂದು ಆರೋಗ್ಯ ಸಮಸ್ಯೆಗೆ ಒಂದು ನಿಮಿಷದ ವಿಡಿಯೋದಲ್ಲಿ ಪರಿಹಾರ ಹೇಳುವುದು ಸುಲಭ. ಆದರೆ ನೈಜತೆಯಲ್ಲಿ ವೈದ್ಯಕೀಯ ನಿರ್ಧಾರ ಅಷ್ಟು ಸರಳವಾಗಿರುವುದಿಲ್ಲ. ಉದಾಹರಣೆಗೆ ಅಜೀರ್ಣಕ್ಕೆ ಈ ಒಂದು ಔಷಧಿ, ಮಧುಮೇಹಕ್ಕೆ ಈ ಒಂದು ಕಷಾಯ, ಕೀಲು ನೋವಿಗೆ ಈ ಒಂದು ಎಣ್ಣೆ ಎಂದು ಹೇಳುವುದು ಸಮಸ್ಯೆಯ ಹಿನ್ನೆಲೆಯನ್ನು ವಿವರಿಸುವುದಿಲ್ಲ ಮತ್ತು ಸಮಸ್ಯೆಗೆ ಸಂಪೂರ್ಣ ಪರಿಹಾರವೂ ಅಲ್ಲ.ಏಕೆಂದರೆ ಒಂದೇ ರೀತಿಯ ರೋಗ ಲಕ್ಷಣದ ಹಿಂದೆ ವಿವಿಧ ಕಾರಣಗಳಿರಬಹುದು. ಆದ್ದರಿಂದ ರೋಗದ ಲಕ್ಷಣ ಹಾಗೂ ಕಾರಣವನ್ನು ಅರಿತು ಚಿಕಿತ್ಸೆಯನ್ನು ನೀಡುವುದು ಅತ್ಯವಶ್ಯಕ. 

ಹಾಗಾದರೆ ಇದಕ್ಕೆಲ್ಲ ಪರಿಹಾರವೇನು.?

1.ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಕಂಡಾಗ ಅದನ್ನು ತಕ್ಷಣವೇ ನಂಬುವುದು/forward ಮಾಡುವ ಬದಲು ಮಾಹಿತಿ ನೀಡುತ್ತಿರುವವರು ಯಾರು, ಅವರ ಅರ್ಹತೆ ಹಾಗೂ ಹಿನ್ನೆಲೆ ಎಂಬ ಇತ್ಯಾದಿ ಮೂಲವನ್ನು ಪರಿಶೀಲಿಸಿ. 

2.ಅತಿರಂಜಿತ ಹೇಳಿಕೆ ಅಥವಾ ಜಾಹಿರಾತುಗಳ ಬಗ್ಗೆ ಎಚ್ಚರವಿರಲಿ. 

3.ಸ್ವಯಂ ಔಷಧೋಪಚಾರವನ್ನು ತಪ್ಪಿಸಿ. ವೈದ್ಯಕೀಯ ಕ್ಷೇತ್ರ ಅತ್ಯಂತ ಪ್ರಭಾವವಾಗಿ ಬೆಳೆದಿರುವ ಇಂತಹ ಕಾಲಘಟ್ಟದಲ್ಲಿ ನುರಿತ ವೈದ್ಯರನ್ನು ಸಂದರ್ಶಿಸದೇ ಸ್ವಪ್ರೇರಣೆಯಿಂದ ಔಷಧಿಯನ್ನು ತೆಗೆದುಕೊಳ್ಳಬೇಡಿ. 

4.ಉತ್ಪನ್ನಗಳ ಲೇಬಲ್ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಕೇವಲ ಉತ್ಪನ್ನಗಳ ಹೆಸರು ಮಾತ್ರವಲ್ಲ. ಅದರ ಪದಾರ್ಥಗಳು(ingredients),ಬಳಸುವ ವಿಧಾನ ಮತ್ತು ಸೂಚನೆಗಳನ್ನು ಸರಿಯಾಗಿ ಓದಿ. 

ಇಂದು 11ನೇ ಆಯುರ್ವೇದ ದಿನಾಚರಣೆಯ ಪ್ರಯುಕ್ತ ಈ ವಿಶೇಷವಾದ ಅಂಕಣ ನಿಮ್ಮ ಆರೋಗ್ಯದ ಒಳಿತಿಗಾಗಿ. ಆಯುರ್ವೇದವನ್ನು ಟೀಕಿಸುವುದಲ್ಲ, ಆಯುರ್ವೇದವನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಆಯುರ್ವೇದವನ್ನು ಅರ್ಥೈಸಿಕೊಂಡು ಅನುಸರಿಸಿ ಉತ್ತಮ ಆರೋಗ್ಯದಿಂದಿರಿ. 

ದೈನಂದಿನ ಆರೋಗ್ಯದ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಲು 8660885793 ಮೇಸೆಜ್ ಮಾಡಿ. 

ಲೇಖಕರು: ಡಾ. ಪ್ರವೀಣ್ ಕುಮಾರ್, BAMS, MD. ಆಯುರ್ವೇದ ವೈದ್ಯರು, ಹಗರಿಬೊಮ್ಮನಹಳ್ಳಿ. ಮೊ - 8660885793

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶ