ಬೆಂಗಳೂರು: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಬೋಧನಾ-ಕಲಿಕಾ ಪ್ರಕ್ರಿಯೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಮತ್ತು ಡಿಜಿಟಲ್ ಸಂಪನ್ಮೂಲಗಳ ಬಳಕೆಯನ್ನು ಹೆಚ್ಚಿಸಲು, ಯು-ಡೈಸ್ ಪ್ಲಸ್ (UDISE+) ನಲ್ಲಿ ನೋಂದಣಿಯಾಗಿರುವ ಎಲ್ಲಾ ಶಿಕ್ಷಕರು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ದೀಕ್ಷಾ’ (DIKSHA) ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಸುತ್ತೋಲೆ ಹೊರಡಿಸಿದೆ.
ರಾಜ್ಯದಲ್ಲಿ ರಾಷ್ಟ್ರೀಯ ಸರಾಸರಿಗಿಂತ ದಿನನಿತ್ಯದ ಸಕ್ರಿಯ ದೀಕ್ಷಾ ಬಳಕೆದಾರರ ಸಂಖ್ಯೆ ಕಡಿಮೆಯಿರುವುದು ಮತ್ತು ಶಿಕ್ಷಕರಿಗೆ ಈ ಕುರಿತು ಸೂಕ್ತ ತರಬೇತಿಯ ಕೊರತೆಯಿರುವುದು ಇಲಾಖೆಯ ಅಧ್ಯಯನ ವರದಿಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.
ಕಡ್ಡಾಯ ನೋಂದಣಿ ಮತ್ತು ಬಳಕೆ: ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯಶಿಕ್ಷಕರು ಹಾಗೂ ಎಲ್ಲಾ ವಿಷಯ ಶಿಕ್ಷಕರು ದೀಕ್ಷಾ ಪೋರ್ಟಲ್‌ನಲ್ಲಿ ನೋಂದಣಿಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಶಾಲಾ ಮಟ್ಟದಲ್ಲಿ ನೋಡಲ್ ಶಿಕ್ಷಕರ ನೇಮಕ: ಪ್ರತಿಯೊಂದು ಶಾಲೆಯಲ್ಲಿ ತಾಂತ್ರಿಕ ಜ್ಞಾನವಿರುವ ಒಬ್ಬ ಶಿಕ್ಷಕರನ್ನು 'ನೋಡಲ್ ಶಿಕ್ಷಕ'ರನ್ನಾಗಿ ನೇಮಿಸಿ, ಶಾಲೆಯ ಎಲ್ಲಾ ಶಿಕ್ಷಕರು ನೋಂದಣಿಯಾಗುವಂತೆ ಕ್ರಮವಹಿಸುವುದು.
ಲಾಗ್ ಬುಕ್ ನಿರ್ವಹಣೆ ಕಡ್ಡಾಯ: ಶಿಕ್ಷಕರು ದೀಕ್ಷಾ ಪೋರ್ಟಲ್ ಅನ್ನು ಯಾವ ವಿಷಯಕ್ಕೆ ಮತ್ತು ಯಾವ ರೀತಿಯ ಸಂಪನ್ಮೂಲ ವೀಕ್ಷಣೆಗೆ ಬಳಸಿದ್ದಾರೆ ಎಂಬುದನ್ನು ದಾಖಲಿಸಲು ಶಾಲಾ ಹಂತದಲ್ಲಿ ಪ್ರತ್ಯೇಕ 'ಲಾಗ್ ಬುಕ್' ನಿರ್ವಹಿಸಬೇಕು.
ಕ್ಯೂಆರ್ ಕೋಡ್ ಬಳಕೆ: ಪಠ್ಯಪುಸ್ತಕಗಳಲ್ಲಿ ನೀಡಲಾಗಿರುವ ಕ್ಯೂಆರ್ ಕೋಡ್‌ಗಳನ್ನು (QR Code) ಸ್ಕ್ಯಾನ್ ಮಾಡಿ ಅದರಲ್ಲಿರುವ ಇ-ಸಂಪನ್ಮೂಲಗಳನ್ನು ತರಗತಿ ಬೋಧನೆಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು.
'ASK DIKSHA' ಎಐ ತಂತ್ರಜ್ಞಾನ: ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಮತ್ತು ತ್ವರಿತ ಉತ್ತರಗಳನ್ನು ಪಡೆಯಲು 'ASK DIKSHA AI' ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಲು ಮಾರ್ಗದರ್ಶನ ನೀಡಬೇಕು.
ತಿಂಗಳಾಂತ್ಯಕ್ಕೆ ಮಾಹಿತಿ ಸಲ್ಲಿಕೆ: ಯು-ಡೈಸ್ ಹಾಗೂ ದೀಕ್ಷಾದಲ್ಲಿ ನೋಂದಣಿಯಾದ ಮತ್ತು ಸಂಪನ್ಮೂಲ ಬಳಸುತ್ತಿರುವ ಶಿಕ್ಷಕರ ಕ್ರೋಢೀಕೃತ ವರದಿಯನ್ನು ಪ್ರತಿ ತಿಂಗಳ 30ನೇ ತಾರೀಖಿನೊಳಗೆ ಜಿಲ್ಲಾ ನೋಡಲ್ ಅಧಿಕಾರಿಗಳು ಇಲಾಖೆಗೆ ಸಲ್ಲಿಸಬೇಕೆಂದು ಸೂಚಿಸಲಾಗಿದೆ.
ದೀಕ್ಷಾ ಬಳಕೆಯ ಕುರಿತು ಶಿಕ್ಷಕರಿಗೆ ಹಾಗೂ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಲು ಶೀಘ್ರದಲ್ಲೇ ರಾಜ್ಯ ಮಟ್ಟದಲ್ಲಿ ಯೂಟ್ಯೂಬ್ ಲೈವ್ (YouTube Live) ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಡಿಎಸ್‌ಇಆರ್‌ಟಿ ತಿಳಿಸಿದೆ. ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ), ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO), ಡಯಟ್ ನೋಡಲ್ ಅಧಿಕಾರಿಗಳು ಹಾಗೂ ಮುಖ್ಯಶಿಕ್ಷಕರು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಚಿಸಲಾಗಿದೆ.




