ಮಂಡ್ಯ: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ಹಾಸ್ಟೆಲ್ ಅಧೀಕ್ಷಕ ಶಿವರಾಜು ಅವರ ಮನೆ ಹಾಗೂ ಫಾರ್ಮ್‌ಹೌಸ್ ಮೇಲೆ ಮಂಡ್ಯ ಲೋಕಾಯುಕ್ತ ಪೊಲೀಸರು ಬೆಳ್ಳಂಬೆಳಿಗ್ಗೆ ದಿಢೀರ್ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಪಾಸ್ತಿಗಳು ಪತ್ತೆಯಾಗಿವೆ.
ಮದ್ದೂರಿನ ಕೊಲ್ಲಿ ವೃತ್ತದ ಬಳಿ ಇರುವ ವಿನಾಯಕ ಬಡಾವಣೆಯ ಮನೆ ಹಾಗೂ ಫಾರ್ಮ್‌ಹೌಸ್ ಸೇರಿದಂತೆ ಒಟ್ಟು 2 ಪ್ರಮುಖ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಮಂಡ್ಯ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಹಾಗೂ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಬ್ಯಾಟರಾಯಗೌಡ ಅವರ ನೇತೃತ್ವದಲ್ಲಿ ಈ ಭರ್ಜರಿ ಕಾರ್ಯಾಚರಣೆ ನಡೆದಿದೆ.
ಕಳೆದ ತಿಂಗಳಷ್ಟೇ ನಿವೃತ್ತಿಯಾಗಿದ್ದ ವಾರ್ಡನ್!
ಆರೋಪಿ ಶಿವರಾಜು ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ವಾರ್ಡನ್ ಆಗಿ ಸೇವೆ ಸಲ್ಲಿಸುತ್ತಿದ್ದು, ಸೋಮನಹಳ್ಳಿ ಹಾಗೂ ಬೆಸಗರಹಳ್ಳಿಯ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ತಿಂಗಳಷ್ಟೇ ಅವರು ಸೇವೆಯಿಂದ ನಿವೃತ್ತರಾಗಿದ್ದರು. ಆದಾಗ್ಯೂ, ಇವರ ವಿರುದ್ಧ ಸಲ್ಲಿಕೆಯಾಗಿದ್ದ ಅಕ್ರಮ ಆಸ್ತಿ ಗಳಿಕೆ ದೂರಿನನ್ವಯ ಲೋಕಾಯುಕ್ತ ಪೊಲೀಸರು ಈ ದಾಳಿ ಸಂಘಟಿಸಿದ್ದಾರೆ.
ಫಾರ್ಮ್‌ಹೌಸ್‌ನಲ್ಲಿ ಸಿಕ್ತು ಹಾಸ್ಟೆಲ್ ಸಾಮಗ್ರಿ & ಮಿನಿ ಬಾರ್!
ಶೋಧ ಕಾರ್ಯದ ವೇಳೆ ಅಧಿಕಾರಿಗಳಿಗೆ ಆಘಾತಕಾರಿ ವಿಚಾರಗಳು ತಿಳಿದುಬಂದಿವೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಿತರಿಸಬೇಕಿದ್ದ ಸರ್ಕಾರಿ ಪುಸ್ತಕಗಳು, ಬೆಡ್‌ಶೀಟ್‌ಗಳು ಹಾಗೂ ಇತರೆ ಸಾಮಗ್ರಿಗಳನ್ನು ಶಿವರಾಜು ತಮ್ಮ ಖಾಸಗಿ ಫಾರ್ಮ್‌ಹೌಸ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಫಾರ್ಮ್‌ಹೌಸ್‌ನಲ್ಲಿ ಮಿನಿ ಬಾರ್ ನಿರ್ಮಿಸಿಕೊಂಡಿದ್ದ ಅವರು, ದುಬಾರಿ ಬೆಲೆಯ ಮದ್ಯದ ಬಾಟಲಿಗಳನ್ನು ದಾಸ್ತಾನು ಮಾಡಿದ್ದರು.
ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ವಿವರ:
ದಾಳಿಯ ವೇಳೆ ಒಟ್ಟು ₹2.71 ಕೋಟಿಗೂ (245.61%) ಅಧಿಕ ಮೌಲ್ಯದ ಆದಾಯಕ್ಕೂ ಮೀರಿದ ಆಸ್ತಿ ಪತ್ತೆಯಾಗಿದೆ ಎಂದು ಅಂದಾಜಿಸಲಾಗಿದೆ.
ಸ್ಥಿರಾಸ್ತಿಗಳು (ಅಂದಾಜು ಮೌಲ್ಯ: ₹2,16,30,000/-):
-
ಖಾಲಿ ನಿವೇಶನಗಳು: 61.25 ಲಕ್ಷ ರೂ. ಮೌಲ್ಯದ 5 ಸೈಟ್‌ಗಳು.
-
ಕಟ್ಟಡಗಳು: 1.50 ಕೋಟಿ ರೂ. ಮೌಲ್ಯದ 5 ಕಟ್ಟಡಗಳು (ಇವುಗಳಲ್ಲಿ 2 ಕಮರ್ಷಿಯಲ್ ಕಾಂಪ್ಲೆಕ್ಸ್ ಹಾಗೂ 1 ಫಾರ್ಮ್‌ಹೌಸ್ ಸೇರಿವೆ).
-
ಕೃಷಿ ಭೂಮಿ: 4.10 ಲಕ್ಷ ರೂ. ಮೌಲ್ಯದ 6 ಎಕರೆ ಕೃಷಿ ಜಮೀನು.
ಚರಾಸ್ತಿಗಳು (ಅಂದಾಜು ಮೌಲ್ಯ: ₹1,66,30,000/-):
-
ನಗದು: ದಾಳಿ ವೇಳೆ ಸಿಕ್ಕಿಬಿದ್ದ 2,50,000 ರೂ. ನಗದು.
-
ಆಭರಣಗಳು: 33.80 ಲಕ್ಷ ರೂ. ಮೌಲ್ಯದ 600 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳು.
-
ವಾಹನಗಳು: 15 ಲಕ್ಷ ರೂ. ಮೌಲ್ಯದ 2 ಐಷಾರಾಮಿ ಕಾರುಗಳು (ಇನ್ನೋವಾ ಮತ್ತು ಟಾಟಾ ನೆಕ್ಸಾನ್).
-
ಇತರ ಆಸ್ತಿಗಳು: ಬ್ಯಾಂಕ್ ಡೆಪಾಸಿಟ್, ಭೂ ಅಭಿವೃದ್ಧಿ ವೆಚ್ಚ, ಮನೆ ಬಳಕೆ ವಸ್ತುಗಳು ಸೇರಿದಂತೆ ಸುಮಾರು 1.15 ಕೋಟಿ ರೂ. ಮೌಲ್ಯದ ಇತರೆ ದಾಖಲೆಗಳು.
ಬಂಧಿತ ನಿವೃತ್ತ ಅಧಿಕಾರಿಯಿಂದ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು, ಅಕ್ರಮ ಆಸ್ತಿಯ ಮೂಲದ ಕುರಿತು ಮತ್ತಷ್ಟು ತನಿಖೆ ಮುಂದುವರಿಸಿದ್ದಾರೆ.
ವರದಿ: ಗಿರೀಶ್ ರಾಜ್, ಮಂಡ್ಯ