ಬೆಂಗಳೂರು: ರಾಜ್ಯದಲ್ಲಿ ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಇನ್ನು ಮುಂದೆ ವಿವಾಹ ನೋಂದಣಿ ಸಮಯದಲ್ಲಿ ವಧು-ವರರ ವಯಸ್ಸಿನ ದೃಢೀಕರಣಕ್ಕಾಗಿ ಕೇವಲ ಆಧಾರ್ ಕಾರ್ಡ್ ಅಥವಾ ಎಪಿಕ್ (ಮತದಾರರ ಗುರುತಿನ ಚೀಟಿ) ಕಾರ್ಡ್ ಅನ್ನು ಏಕೈಕ ದಾಖಲೆಯಾಗಿ ಪರಿಗಣಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರ ಕಚೇರಿಯಿಂದ ಈ ಕುರಿತು ಜ್ಞಾಪನ ಪತ್ರ ಹೊರಡಿಸಲಾಗಿದ್ದು, ರಾಜ್ಯದ ಎಲ್ಲಾ ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಉಪ ನೋಂದಣಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.
ಆದೇಶದ ಪ್ರಮುಖ ಮುಖ್ಯಾಂಶಗಳು:
ಆಧಾರ್, ಎಪಿಕ್ ಕಾರ್ಡ್‌ಗೆ ನಿರ್ಬಂಧ: ಕೇವಲ ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯನ್ನು ವಯಸ್ಸಿನ ಪುರಾವೆಯಾಗಿ ಪರಿಗಣಿಸಿ ವಿವಾಹ ನೋಂದಣಿ ಮಾಡುವುದರಿಂದ ಪರೋಕ್ಷವಾಗಿ ಬಾಲ್ಯ ವಿವಾಹಗಳಿಗೆ ಕಾನೂನುಬದ್ಧತೆ ಸಿಗುವ ಅಪಾಯವಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆತಂಕ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮಾನ್ಯ ದಾಖಲೆಗಳು ಯಾವುವು?: ವಿವಾಹ ನೋಂದಣಿಗೆ ವಯಸ್ಸಿನ ಪುರಾವೆಯಾಗಿ ಜನನ ಪ್ರಮಾಣ ಪತ್ರ (Birth Certificate) ಅಥವಾ ಶಾಲಾ ವರ್ಗಾವಣೆ ಪ್ರಮಾಣ ಪತ್ರವನ್ನು (TC) ಕಡ್ಡಾಯವಾಗಿ ಪರಿಶೀಲಿಸಬೇಕು. ಇವೆರಡೂ ಲಭ್ಯವಿಲ್ಲದಿದ್ದಾಗ ಮಾತ್ರ ವೈದ್ಯಕೀಯ ಪ್ರಮಾಣ ಪತ್ರವನ್ನು ಪರಿಗಣಿಸಬಹುದು.
ಕಾನೂನು ಪಾಲನೆ ಕಡ್ಡಾಯ: 'ಬಾಲ್ಯ ವಿವಾಹ ನಿಷೇಧ (ಕರ್ನಾಟಕ) ನಿಯಮಗಳು, 2014' ರ ನಿಯಮ 6(2)ರ ಅನುಸೂಚಿ-III ರಲ್ಲಿ ಸೂಚಿಸಿರುವ ಮಾನ್ಯ ದಾಖಲೆಗಳ ಆಧಾರದ ಮೇಲೆಯೇ ವಯಸ್ಸನ್ನು ಖಚಿತಪಡಿಸಿಕೊಂಡು ವಿವಾಹ ನೋಂದಣಿ ಮಾಡಬೇಕು.
ಶಿಸ್ತು ಕ್ರಮದ ಎಚ್ಚರಿಕೆ:
ನಿಯಮಗಳನ್ನು ಉಲ್ಲಂಘಿಸಿ, ಕೇವಲ ಆಧಾರ್ ಕಾರ್ಡ್ ಆಧಾರದ ಮೇಲೆ ವಿವಾಹ ನೋಂದಣಿ ಮಾಡುವುದು ಕಂಡುಬಂದರೆ ಅಂತಹ ಪ್ರಕರಣಗಳಲ್ಲಿ ಸಂಬಂಧಪಟ್ಟ ನೋಂದಣಿ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

