ಮೈಸೂರು: ಸರಗೂರು ತಾಲೂಕಿನ ಕಾಡಗೆರೆ ಗ್ರಾಮದ ಬಳಿ ಏಕಾಏಕಿ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ರೈತರೊಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿರುವ ದಾರುಣ ಘಟನೆ ಸಂಭವಿಸಿದೆ. ಗ್ರಾಮದ ರೈತ ವೀರಭದ್ರೇಗೌಡ ಅಲಿಯಾಸ್ ಸಣ್ಣಪ್ಪ (60) ಮೃತಪಟ್ಟ ದುರ್ದೈವಿಯಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಮಹೇಶ್ ಎಂಬ ರೈತನನ್ನು ಸರಗೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಸಣ್ಣಪ್ಪ ಹಾಗೂ ಮಹೇಶ್ ಇಬ್ಬರೂ ವೈದ್ಯಕೀಯ ತಪಾಸಣೆಗಾಗಿ ಒಂದೇ ಬೈಕ್‌ನಲ್ಲಿ ಮೈಸೂರಿಗೆ ಹೊರಟಿದ್ದರು. ಕಾಡಗೆರೆ ಮತ್ತು ದೊಡ್ಡಬರಗಿ ಗ್ರಾಮದ ನಡುವಿನ ರಸ್ತೆಯಲ್ಲಿ ತೆರಳುತ್ತಿದ್ದಾಗ ದಿಢೀರನೆ ಪ್ರತ್ಯಕ್ಷಗೊಂಡ ಕಾಡಾನೆ ಬೈಕ್ ಮೇಲೆ ಧಾಳಿ ನಡೆಸಿದೆ. ದಾಳಿಯ ರಭಸಕ್ಕೆ ವೀರಭದ್ರೇಗೌಡ ಸ್ಥಳದಲ್ಲೇ ಅಸುನೀಗಿದರೆ, ಮಹೇಶ್ ತೀವ್ರ ಗಾಯಗೊಂಡಿದ್ದಾರೆ. ದಾಳಿ ನಡೆಸಿದ ನಂತರ ಆನೆಯು ಸಮೀಪದ ಅರಣ್ಯ ಪ್ರದೇಶದತ್ತ ಕಾಲ್ಕಿತ್ತಿದೆ.
ಘಟನೆ ನಡೆದ ತಕ್ಷಣವೇ ಗಾಯಾಳು ಮಹೇಶ್ ಜೋರಾಗಿ ಕೂಗಿಕೊಂಡಿದ್ದನ್ನು ಕೇಳಿ, ಸುತ್ತಮುತ್ತಲಿನ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ಇತರ ರೈತರು ಸ್ಥಳಕ್ಕೆ ಧಾವಿಸಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲು ವ್ಯವಸ್ಥೆ ಮಾಡಿದ್ದಾರೆ. ಆದರೆ, ಈ ಭಾಗದಲ್ಲಿ ಪದೇ ಪದೇ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಸೂಕ್ತ ಮುನ್ನೆಚ್ಚರಿಕೆ ಅಥವಾ ಪರಿಶೀಲನೆ ನಡೆಸಿಲ್ಲ, ಅಧಿಕಾರಿಗಳ ನಿರ್ಲಕ್ಷ್ಯವೇ ರೈತನ ಸಾವಿಗೆ ಕಾರಣ ಎಂದು ಆರೋಪಿಸಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.